ನಟಸಾರ್ವಭೌಮ ಡಾ.ರಾಜ್‌ಕುಮಾರ್ ಓದಿದ್ದು ಕೇವಲ ನಾಲ್ಕನೇ ತರಗತಿ. ಆದರೂ ಅವರು ಭಾಷೆಯ ಮೇಲೆ ಇಟ್ಟಿದ್ದ ಹಿಡಿತ ಉನ್ನತ ಶಿಕ್ಷಣ ಪಡೆದವರಿಗೂ ಕಷ್ಟ ಆಗುತ್ತಿತ್ತು. ಅಷ್ಟೊಂದು ಸ್ಪಷ್ಟ. ಇನ್ನು ಸಿನಿಮಾರಂಗಕ್ಕೆ ಕಾಲಿಟ್ಟ ಬಳಿಕ ಕೆಲವು ಸಿನಿಮಾಗಳಲ್ಲಿ ರಾಜ್‌ಕುಮಾರ್ ಇಂಗ್ಲಿಷ್ ಭಾಷೆಯಲ್ಲೂ ಅಲ್ಪ ಸ್ವಲ್ಪ ಮಾತಾಡುವುದನ್ನು ಕಲಿತಿದ್ದರು. ಅಲ್ಲದೆ ಸಿನಿಮಾದ ಸನ್ನಿವೇಶಗಳಲ್ಲಿ ಇಂಗ್ಲಿಷ್ ಪದಗಳನ್ನು ಬಳಸುತ್ತಿದ್ದರು.
ಅಣ್ಣಾವ್ರು ನಟಿಸಿದ ಸಿನಿಮಾಗಳಲ್ಲಿ ಇಂಗ್ಲಿಷ್‌ನಲ್ಲಿ ಹಾಡಿದ್ದಾರೆ. ‘ಎರಡು ಕನಸು’ ಸಿನಿಮಾದಲ್ಲಿ ಷೇಕ್ಸ್‌ಪಿಯರ್ ಪಾಠ ಮಾಡಿದ್ದಾರೆ. ಈ ಸೀನ್‌ಗಳನ್ನು ನೋಡಿ ಪ್ರೇಕ್ಷಕರು ಎಂಜಾಯ್ ಮಾಡಿದ್ದಾರೆ. ಹಾಗಿದ್ದರೆ, ವರನಟನಿಗೆ ಮೊದಲು ಇಂಗ್ಲಿಷ್ ಹೇಳಿಕೊಟ್ಟಿದ್ದು ಯಾರು? ಅಣ್ಣಾವ್ರು ಹೇಳಿದ ಮೊದಲ ಮೂರು ವಾಕ್ಯಗಳು ಯಾವುವು?
ಡಾ.ರಾಜ್‌ಕುಮಾರ್ ತಮ್ಮ ಸಹ ನಟರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅಂತಹ ಹಲವು ನಟರು, ತಂತ್ರಜ್ಞರು ಇದ್ದಾರೆ. ಇವರಲ್ಲಿ ಹಿರಿಯ ನಟ ಬೆಂಗಳೂರು ನಾಗೇಶ್ ಕೂಡ ಒಬ್ಬರು. ಅಸಲಿಗೆ ಮೊದಲ ಅಣ್ಣಾವ್ರಿಗೆ ನೀವ್ಯಾಕೆ ಇಂಗ್ಲಿಷ್ ಕಲಿಯಬಾರದು ಎಂದು ಹೇಳಿ ಕಲಿಸಿದ್ದು ಇವರೇ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
“ರಾಜ್‌ಕುಮಾರ್ ಅವರಿಗೂ ನನ್ನನ್ನು ಕಂಡರೆ ವಿಶ್ವಾಸ. ನಾನು ಓದಿದ್ದೀನಿ ಅಂತ ಹೇಳಿ ಅವರಿಗೆ ಗೌರವ. ಅವರಿಗೂ ನನಗೂ ಸುಮಾರು 30 ವರ್ಷದ ಸ್ನೇಹ. ಜೊತೆಯಲ್ಲೇ ಕೆಲಸ, ಜೊತೆಯಲ್ಲೇ ಊಟ, ಜೊತೆಯಲೇ ನಿದ್ದೆ, ಜೊತೆಯಲ್ಲಿಯೇ ಟ್ರಾವೆಲಿಂಗ್ ಎಲ್ಲವಕ್ಕೂ ಮೂವತ್ತು ವರ್ಷ. ಶೂಟಿಂಗ್‌ನಲ್ಲಿ ಗ್ಯಾಪ್ ಇದ್ದಾಗ ಸಂಜೆಯ ಹೊತ್ತು ವಾಕಿಂಗ್ ಹೋಗುತ್ತಿದ್ದೇವು. ನಾನು ಅಣ್ಣ ನೀವು ಯಾಕೆ ಇಂಗ್ಲಿಷ್ ಕಲಿಯಬಾರದು ಅಂದೆ. ಹೋಗ್ರಿ ನಾಗೇಶ್ ನಾಲ್ಕನೇ ಕ್ಲಾಸ್ ಓದಿರೋನು ನನಗೆಲ್ಲಿ ಇಂಗ್ಲಿಷ್ ಬರುತ್ತೆ ಅಂದರು. ಹಾಗೆ ಹೇಳಬೇಡಿ. ನಿಮಗೆ ಕಲಿಯುವುದಕ್ಕೆ ಆಸಕ್ತಿ ಇದ್ದರೆ ನಾನು ನಿಮಗೆ ಇಂಗ್ಲಿಷ್ ಹೇಳಿಕೊಡುತ್ತೇನೆ ಅಂದೆ. ಆಯ್ತು ಅದನ್ನು ನೋಡಿ ಬಿಡೋಣ ಅಂದರು.” ಎಂದು ಆಕ್ಷಣವನ್ನು ಬೆಂಗಳೂರು ನಾಗೇಶ್ ನೆನಪಿಸಿಕೊಂಡಿದ್ದಾರೆ.
ಅಣ್ಣಾವ್ರಿಗೆ ಇಂಗ್ಲಿಷ್ ಹೇಳಿ ಕೊಡುವುದಕ್ಕೆ ಶುರು ಮಾಡಿದ್ದ ಹಿರಿಯ ನಟ ಬೆಂಗಳೂರು ನಾಗೇಶ್ ಮೊದಲು ಹೇಳಿಕೊಟ್ಟ ಪದಗಳ್ಯಾವುವು ಗೊತ್ತೇ? “ಅಂದಿನಿಂದ ಹೌ ಆರ್ ಯು.., ವೆನ್ ಆರ್ ಯು ಕಮಿಂಗ್.., ಆರ್ ಯು ಕಮಿಂಗ್..? ಈತರ ಸಣ್ಣ ಪುಟ್ಟ ಪದಗಳನ್ನು ಹೇಳುತ್ತಿದ್ದೆ. ಮಾರನೇ ದಿನ ಬಂದಾಗ ಗುರುಗಳೇ ನಾನು ಹೇಳಲಾ ಅಂದರು. ಅಯ್ಯೋ ಗುರುಗಳೇ ಅನ್ನಬೇಡಿ. ನಾನು ನಿಮ್ಮ ಶಿಷ್ಯ.. ನೀವು ನನ್ನ ಗುರುಗಳು ಹೇಳಿ ಅಂತ ಹೇಗಿದೆ. ಎಷ್ಟು ಪರ್ಫೆಕ್ಟ್ ಆಗಿ ಹೇಳೋರು ಅಂದರೆ, ಮುಂದಿನ ದಿನಗಳಲ್ಲಿ ಎರಡು ಕನಸು ಸಿನಿಮಾದಲ್ಲಿ ಷೇಕ್ಸ್‌ಪಿಯರ್ ಪಾಠ ಮಾಡುತ್ತಾರೆ. ಆ ಮನುಷ್ಯನಿಗೆ ಅಷ್ಟು ಆಸಕ್ತಿ.” ಎಂದಿದ್ದಾರೆ. ಇದೇ ಸಂದರ್ಶನದಲ್ಲಿ ಅಣ್ಣಾವ್ರ ಸ್ವಭಾವವನ್ನು ಗುಣಗಾನ ಮಾಡಿದ್ದಾರೆ. ಅವರಿಗೆ ಕಲಿಯುವ ಆಸಕ್ತಿ ಇತ್ತು ಎಂದು ಹೇಳಿದ್ದಾರೆ. “ಅವರು ಅಷ್ಟು ದೊಡ್ಡ ಕಲಾವಿದ ಆಗಿದ್ದರೂ, ನಾನು ಯಾವತ್ತೂ ಅಷ್ಟು ದೊಡ್ಡ ಕಲಾವಿದ ಅಂತ ಅಂದುಕೊಳ್ಳಲೇ ಇಲ್ಲ. ನಾನು ಇನ್ನೂ ಕಲಿಬೇಕು. ನಾನು ಇನ್ನೂ ಕಲಿಬೇಕು ಅಂತ ಹೇಳೋರು. ಯಾರಾದರೂ ಚೆನ್ನಾಗಿ ಪಾತ್ರ ಮಾಡಿದರೆ ಹೋಗಿ ಬೆನ್ನು ತಟ್ಟೋರು. ಎಲ್ಲರ ಜೊತೆ ಕೂತು ಊಟ.” ಎಂದು ಅಣ್ಣಾವ್ರ ಗುಣವನ್ನು ನೆನಪಿಸಿಕೊಂಡಿದ್ದಾರೆ.