ಸೈಫ್ ಅಲಿ ಖಾನ್ ಮೇಲೆ ನಡೆದ ಹಲ್ಲೆಯಿಂದ ಕರೀನಾ ದಿಗಿಲುಗೊಂಡಿದ್ದಾರೆ. ತಲೆಯಲ್ಲಿ ಹತ್ತು ಹಲವು ಪ್ರಶ್ನೆಗಳು ಗಿರಕಿ ಹೊಡೆಯುತ್ತಿವೆ. ಕಷ್ಟದ ಸಮಯದಲ್ಲಿ ಕೂಡ ಬಾಲಿವುಡ್‌ನ ಪಾಪರಾಜಿಗಳು ಕರೀನಾ ಕಪೂರ್ ಬೆನ್ನು ಬಿಡುತ್ತಿಲ್ಲ. ಬದಲಿಗೆ ಸೈಫ್ ಅಲಿ ಖಾನ್ ಮತ್ತು ಕರೀನಾ ವಾಸ ಮಾಡುವ ಸದ್ಗುರು ಶರಣ್ ಅಪಾರ್ಟ್‌ಮೆಂಟ್ ಹೊರಗಡೆ ಬೀಡು ಬಿಟ್ಟಿದ್ದಾರೆ. 24 ಗಂಟೆ ಸೈಫ್ ಅಲಿ ಖಾನ್ ಅವರ ಮನೆಯ ಕಾವಲನ್ನು ಕಾಯುತ್ತಿದ್ದಾರೆ. ಮನೆ ಒಳಗೆ ಹೊರಗೆ ಬರುವವರನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಇತ್ತೀಚೆಗೆ ಕರೀನಾ ಕಪೂರ್ ಅವರ ಮನೆಯ ಮಕ್ಕಳಾದ ತೈಮೂರ್ ಮತ್ತು ಜೇ ಅಲಿಗೆ ಹೊಸ ಆಟಿಕೆ ಸಾಮಾನುಗಳು ಬಂದಿವೆ. ಆದರೆ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೀವ್ಸ್‌ಗಾಗಿ ಈ ವಿಡಿಯೋವನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಪಾಪರಾಜಿಗಳ ಈ ಕೆಲಸ ಕರೀನಾ ಕಪೂರ್ ಖಾನ್ ಅವರ ಗಮನಕ್ಕೆ ಬಂದಿದೆ. ಕೆರಳಿ ಕೆಂಡವಾದ ಕರೀನಾ ಕಪೂರ್ ಇದೆಲ್ಲ ಈಗಲೇ ನಿಲ್ಲಿಸಿ ಎಂದು ಗುಡುಗಿದ್ದಾರೆ. ನಿಮಗೆಲ್ಲ ಹೃದಯ ಇದೆಯಾ ಎಂದು ಪ್ರಶ್ನೆ ಮಾಡಿ ನಮ್ಮನ್ನು ನಮ್ಮ ಪಾಡಿಗೆ ಇರಲು ಬಿಡಿ ಎಂದು ಕೋಪದಲ್ಲಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಕೈ ಮುಗಿದಿದ್ದಾರೆ. ಆದರೆ, ಆ ನಂತರ ಅದೇನಾಯ್ತೋ. ಹಾಕಿದ್ದ ಫೋಸ್ಟ್‌ನ ಕರೀನಾ ಡಿಲೀಟ್ ಮಾಡಿದ್ದಾರೆ.
ಡಿಲೀಟ್ ಮಾಡಿದ ಫೋಸ್ಟ್‌ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ್ಹಾಗೇ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲಾದಾಗ ಕರೀನಾ ಕಪೂರ್ ಇದೇ ಪಾಪರಾಜಿಗಳಿಗೆ ಮನವಿಯನ್ನು ಮಾಡಿಕೊಂಡಿದ್ದರು. ನಾವೆಲ್ಲ ತುಂಬಾ ಆಘಾತಕ್ಕೊಳಗಾಗಿದ್ದೇವೆ ದಯಮಾಡಿ ನಮ್ಮ ಖಾಸಗಿತನಕ್ಕೆ ಬೆಲೆ ಕೊಡಿ ಎಂದು ಕೈ ಮುಗಿದು ಬೇಡಿಕೊಂಡಿದ್ದರು. ಆದರೆ, ಕರೀನಾ ಕಪೂರ್ ಅವರ ಆಗ ಕೂಡ ಬೆಲೆ ಸಿಗಲಿಲ್ಲ. ಈಗ ಕೂಡ ಬೆಲೆ ಸಿಕ್ಕಿಲ್ಲ. ಆಕ್ರೋಶ ಹೊರಹಾಕಿದರು ಕೂಡ ಪಾಪರಾಜಿಗಳು ಸೈಫ್ ಅಲಿ ಖಾನ್ ಮನೆಯ ಆವರಣದಿಂದ ಇನ್ನು ಕದಲಿಲ್ಲ.