Sandalwood Leading OnlineMedia

ಚಿತ್ರರಂಗಕ್ಕಿಂತ ರಂಗಭೂಮಿ ಸುರಕ್ಷಿತವಾಗಿದೆ.ʻಸಿಗ್ನಲ್‌ ಮ್ಯಾನ್‌ 1971ʼ ಹಾಡಿನ ಬಿಡುಗಡೆ ವೇಳೆ ಪ್ರಕಾಶ್‌ ಬೆಳವಾಡಿ

ಇಂದಿನ ಕನ್ನಡ ಚಿತ್ರರಂಗಕ್ಕಿಂತಲೂ ರಂಗಭೂಮಿ ಚೆನ್ನಾಗಿದೆ, ಸುರಕ್ಷಿತವಾಗಿದೆ ಎಂದು ಹಿರಿಯ ನಟ, ಬರಹಗಾರ ಪ್ರಕಾಶ್‌ ಬೆಳವಾಡಿ ಅಭಿಪ್ರಾಯ ಪಟ್ಟರು.ನಗರದ ಖಾಸಗಿ ಹೋಟೆಲಿನಲ್ಲಿ ಆಯೋಜಿಸಿದ್ದ ʻಸಿಗ್ನಲ್‌ ಮ್ಯಾನ್‌ 1971ʼ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಕನ್ನಡ ಚಿತ್ರಗಳನ್ನು ನೋಡಲು ಪ್ರೇಕ್ಷಕ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಆದರೆ ರಂಗಭೂಮಿಯಲ್ಲಿ ಇಂದಿಗೂ ನಮ್ಮ ಕೆಲಸಕ್ಕೆ ಬೇಕಾದ ಬೆಂಬಲ ಸಿಗುತ್ತಿದೆ, ಚಿತ್ರರಂಗದಲ್ಲೂ ಇಂತಹ ವಾತಾವರಣ ಮತ್ತೆ ಬೇಗ ಬರಲಿ ಎಂದು ಆಶಿಸಿದರು.


ʻಸಿಗ್ನಲ್‌ ಮ್ಯಾನ್‌ 1971ʼ ಚಿತ್ರ ಭಾರತ-ಬಾಂಗ್ಲಾ ನಡುವಿನ ಯುದ್ಧದ ಸಂದರ್ಭದಲ್ಲಿ ನಡೆಯುವ ಒಂದು ಕಥಾ ಭಾಗವಾಗಿದೆ. ಇದರಲ್ಲಿ ಎರಡೇ ಪ್ರಮುಖ ಪಾತ್ರಗಳಿವೆ. ಚಿತ್ರವನ್ನು ಸಾಧ್ಯವಾದಷ್ಟು ನೈಜವಾಗಿ ಚಿತ್ರಿಸಲು ಪ್ರಯತ್ನಿಸಿದ್ದೇವೆ. ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ಬೆಂಬಲಿಸಿ ಎಂದರು.

ನಿರ್ದೇಶಕ ಕೆ.ಶಿವರುದ್ರಯ್ಯ ಮಾತನಾಡುತ್ತಾ, ಇದು ಚಾಲ್ಸ್‌ ಡಿಕನ್ಸ್‌ ಕಾದಂಬರಿ ಆಧಾರಿತ ಕಥೆ. ಮೊದಲನೆ ಮಹಾಯುದ್ಧದ ಸಂದರ್ಭದಲ್ಲಿ ಮೈಸೂರಿನ ಮಹಾರಾಜರು ಯೂರೋಪಿನ ಸೇನೆಗೆ ಬೆಂಬಲ ನೀಡಿ ಕಳುಹಿಸಿದ ʻಮೈಸೂರು ಲ್ಯಾನ್ಸರ್‌ʼ ತಂಡ ಹೈಫಾ ಬಂದರು ಗೆದ್ದು ಬಂದದ್ದನ್ನು ನೆನಪಿಸುವ ಒಂದು ಹಾಡನ್ನು ಚಿತ್ರೀಕರಣ ಮಾಡಿದ್ದು ಅದನ್ನು ಮೈಸೂರಿನಲ್ಲೇ ರಾಜವಂಶಸ್ಥರಿಂದ ಬಿಡುಗಡೆ ಮಾಡಿಸುವ ಉದ್ದೇಶ ಹೊಂದಿದ್ದೆವು ಅದು ಇಂದು ಯಶಸ್ವಿಯಾಗಿದೆ. ಅದನ್ನು ರಾಜವಂಶಸ್ಥರೇ ಬಿಡುಗಡೆ ಮಾಡಿರುವುದು ಮತ್ತಷ್ಟು ಸಂತೋಷ ಎಂದು ಹೇಳಿದರು.


ಊಟಿಯ ರೈಲ್ವೆ ಮಾರ್ಗದಲ್ಲಿ ರೈಲ್ವೆ ಸ್ಟೇಷನ್‌ ಸೆಟ್‌ ಹಾಕಿ ಚಿತ್ರೀಕರಣ ಮಾಡಿದ್ದೇವೆ. ಒಂದು ದಿನಕ್ಕೆ ರೈಲು 8 ಬಾರಿ ಈ ಮಾರ್ಗದಲ್ಲಿ ಬರುತ್ತಿತ್ತು. ಪ್ರತೀ ಬಾರಿ ಕ್ಯಾಮೆರಾ, ಲೈಟ್ಸ್‌ಗಳನ್ನು ಟ್ರ್ಯಾಕ್‌ ನಿಂದ ತೆಗೆದು ಪಕ್ಕಕ್ಕೆ ಇಟ್ಟುಕೊಳ್ಳ ಬೇಕಿತ್ತು. ಮಳೆ, ಚಳಿ ಎನ್ನದೆ ಚಿತ್ರೀಕರಣ ಮಾಡಿದ್ದೇವೆ. ಕನ್ನಡ ಪ್ರೇಕ್ಷಕರು ಚಿತ್ರ ನೋಡುವ ಮೂಲಕ ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡರು.

ಮಹಾರಾಜರು ಹಾಗೂ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಿತ್ರದ ಹಾಡನ್ನು ಬಿಡುಗಡೆ ಮಾಡಿ ಮಾತನಾಡುತ್ತಾ, ಶತಮಾನದ ಹಿಂದೆ ಮೈಸೂರು ಸಂಸ್ಥಾನದ ಮಹಾರಾಜರು ಮಾಡಿದ ಕಾರ್ಯಗಳನ್ನು ನೆನಪು ಮಾಡಿಕೊಂಡು ಹಾಡಿನ ಮೂಲಕ ತೋರಿಸಿದ್ದು ಸಂತೋಷವಾಗಿದೆ. ನಿಮ್ಮ ಸಿನಿಮಾವನ್ನು ಅರಮನೆಯವರು ನೋಡುತ್ತೇವೆ. ಶುಭವಾಗಲಿ ಎಂದು ಹಾರೈಸಿದರು.

ಡಾ. ಬರಗೂರು ರಾಮಚಂದ್ರಪ್ಪ ಅವರು ಬರೆದ ʻಮೈಸೂರು ನಮ್ಮ ಅರಸರ ಮೈಸೂರು…ʼ ಎಂಬ ಗೀತೆಗೆ ವಿಜಯಪ್ರಕಾಶ್‌ ಹಾಗೂ ಪಲ್ಲವಿ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ. ಔಸಿಪಚ್ಚನ್ ಸಂಗೀತ ನೀಡಿದ್ದಾರೆ.ಹಿಂದೂಸ್ತಾನ್‌ ಮುಕ್ತ ಮೀಡಿಯಾ ಎಂಟರ್‌ಟೈನರ್‌ ಬ್ಯಾನರ್‌ ಅಡಿಯಲ್ಲಿ ಬಿ.ವಿ.ಗಣೇಶ್‌ ಪ್ರಭು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ರಂಗಭೂಮಿ ನಟ ವೆಂಕಟೇಶ್‌ ಪ್ರಸಾದ್‌, ರಾಜೇಶ್‌ ನಟರಂಗ ಮುಂತಾದವರು ಅಭಿನಯಿಸಿದ್ದಾರೆ.

Share this post:

Related Posts

To Subscribe to our News Letter.

Translate »