`ಸಿದ್ಲಿಂಗು’ ಸಿನಿಮಾದ ಗುಂಗಿನಲ್ಲಿ ಕನ್ನಡ ಪ್ರೇಕ್ಷಕರು ಇನ್ನೂ ಇದ್ದಾರೆ ಎಂದರೆ ಸುಳ್ಳಲ್ಲ. `ಸಿದ್ಲಿಂಗು’ ಸಿನಿಮಾವು ಬರೋಬ್ಬರಿ ಹದಿಮೂರು ವರ್ಷಗಳ ಹಿಂದೆ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಅಂದು ವಿಜಯಪ್ರಸಾದ್ `ಸಿದ್ಲಿಂಗು’ ಎಂಬ ತಮ್ಮ ಚೊಚ್ಚಲ ನಿರ್ದೇಶನದ ಮೂಲಕ ತನ್ನದೇ ಆದ ವಿಶಿಷ್ಟ ಜಾನರ್ ಅನ್ನು ಕನ್ನಡಿಗರಿಗೆ ಪರಿಚಯಿಸಿದರು. ಈಗ `ಸಿದ್ಲಿಂಗು 2′ ಸಿನಿಮಾ ತೆರೆಕಂಡಿದೆ. ಹಾಗಾದರೆ, ಇಷ್ಟು ವರ್ಷಗಳ ನಂತರ ವಿಜಯ್ ಪ್ರಸಾದ್ ಅವರ ಕನಸಿನ ಕೂಸು `ಸಿದ್ಲಿಂಗು’ ಬದುಕಿನಲ್ಲಾದ ಬದಲಾವಣೆಗಳೇನು? ಮೊದಲ ಭಾಗ ಪ್ರೇಕ್ಷಕನಿಗೆ ನೀಡಿದ ಅನುಭವ ಎರಡನೇ ಭಾಗವೂ ನೀಡಿತಾ? `ಸಿದ್ಲಿಂಗು’ ಸಿನಿಮಾದ ಕಥೆ ಕಾರಿನ ಸುತ್ತಾ ಸುತ್ತಿತ್ತು, ಚಿತ್ರದ ಕೊನೆಯಲ್ಲೂ ಸಿದ್ಲಿಂಗುಗೆ ಕಾರ್ ಭಾಗ್ಯ ಸಿಗುವುದಿಲ್ಲ. ಜೊತೆಗೆ ಸಿದ್ಲಿಂಗುವಿನ ಪ್ರೇಯಸಿ ಮಂಗಳಾ ಟೀಚರ್ (ರಮ್ಯಾ) ಕೂಡ ಸಾವನ್ನಪ್ಪುತ್ತಾರೆ. ಪಾರ್ಟ್-2 ನಲ್ಲಿ ಮಂಗಳಾಳ ಜೊತೆಗೆಇನ ಒಡನಾಟವನ್ನು ಮನಸ್ಸಿನಲ್ಲಿಟ್ಟುಕೊಂಡೇ ಎಂಟ್ರಿ ಕೊಡುವ ಸಿದ್ಲಿಂಗುನ `ಕಾರ್’ ವ್ಯಾಮೋಹ ಇಲ್ಲೂ ಮುಂದುವರಿಯುತ್ತದೆ.
`ಸಿದ್ಲಿಂಗು ೨’ ಸಿನಿಮಾದಲ್ಲಿ `ಅಂಥಹ’ ಸಂಭಾಷಣೆಗಳಿAದ ವಿಜಯಪ್ರಸಾದ್ ಸಂಪೂರ್ಣ ಹೊರಗೆ ಬಂದಿದ್ದಾರೆ. ಈ ಬಾರಿ ಒಂದು ನೀಟ್ ಸಿನಿಮಾ ನೀಡಬೇಕೆಂಬ ಅವರ ಉದ್ದೇಶ ಪ್ರತಿಯೊಂದು ಫ್ರೇಮ್‌ನಲ್ಲೂ ಗೊತ್ತಾಗುತ್ತೆ. ಸೀತಮ್ಮ, ವಿಶಾಲು, ಹಳೇ ಬೇವರ್ಸಿ, ಮಿಣಿ ಮಿಣಿ, ಮುಕುಂದರಾಯ ಥರದ ಒಂದಷ್ಟು ವಿಶೇಷ ಎನ್ನಿಸುವಂತಹ ಪಾತ್ರಗಳನ್ನು ವಿಜಯಪ್ರಸಾದ್ ರಚಿಸಿದ್ದಾರೆ. ಮಂಗಳಾ ಟೀಚರ್ ಜಾಗದಲ್ಲಿ ನಿವೇದಿತಾ ಟೀಚರ್‌ಗೆ ಬಂದಿದ್ದಾರೆ. ಜೊತೆಗೆ ಪಾರ್ಟ್ ೧ರಲ್ಲಿ ಇದ್ದಂತಹ ಆ ಹಳೇ ಕಾರು ಇಲ್ಲೂ ಇದ್ದು, ಅದನ್ನು ಸಿದ್ಲಿಂಗು ಈ ಸಲನಾದರೂ ಪಡೆಯುತ್ತಾನಾ ಅನ್ನೋದನ್ನು ಮತ್ತಷ್ಟು ಕುತೂಹಲಕಾರಿಯಾಗಿ ತೋರಿಸಿದ್ದಾರೆ ವಿಜಯಪ್ರಸಾದ್.
`ಎಲ್ಲೆಲ್ಲೋ ಓಡುವ ಮನಸೇ..’ ರೀತಿಯ ಮನಸ್ಸನ್ನು ತಟ್ಟುವಂತಹ ಹಾಡನ್ನು ನೀಡಿದ್ದ ಅನೂಪ್ ಸೀಳಿನ್ ಈ ಬಾರಿ ಅಂಥ ಹಾಡಿನೊಂದಿಗೆ ಬರುವ ನಿರೀಕ್ಷೆ ಇದ್ದಿದ್ದರಿಂದ ಇರುವ ಹಾಡು ತಾಕುವುದಿಲ್ಲ. ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ದೊಡ್ಡ ಕೊಡುಗೆ ಕೊಡಲಿಲ್ಲ ಕ್ಲೈಮ್ಯಾಕ್ಸ್ನಲ್ಲಿ ಬರುವ ಕೋರ್ಟ್ ಸೀನ್‌ಗಳು ಚಿತ್ರವನ್ನೂ ಸ್ವಲ್ಪ ಲ್ಯಾಗ್ ಮಾಡಿದೆ. ಭಾವನಾತ್ಮಕ ಸನ್ನಿವೇಶಗಳು ಪ್ರೇಕ್ಷಕನಿಗೆ ಇನ್ನಷ್ಟು ರಿಲೇಟ್ ಆಗಬೇಕಿತ್ತು. ನಗು ಹುಟ್ಟಿಸುವುದಕ್ಕೆಂದೇ ತುರುಕಿರುವ ರಾಜಕಾರಣಿಗಳ, ಸಿನಿಮಾ ಕಲಾವಿದರ ಹೆಸರುಗಳನ್ನು ಬಳಸಿರುವುದು `ಇದೆಲ್ಲಾ ಬೇಕಿತ್ತಾ’ ಅನ್ನುವ ಫೀಲ್ ಕೊಡುತ್ತದೆ.
‘ಸಿದ್ಲಿಂಗು’ ಸಿನಿಮಾದಲ್ಲಿ ಹರೆಯದ ಯುವಕನಾಗಿ ಒಂಚೂರು ತರಲೆ, ಚೇಷ್ಟೆ ಮಾಡುತ್ತಾ, ಅಲ್ಲಲ್ಲಿ ತುಸು ಪೋಲಿ ಮಾತುಗಳನ್ನಾಡುತ್ತಾ, ಎಮೋಷನಲ್ ಆಗಿಯೂ ಕಾಡುತ್ತಾ ಯೋಗಿ ಇಷ್ಟವಾಗಿದ್ದರು. ಆದರೆ ಈ ಬಾರಿ ಅವರ ಪಾತ್ರದಲ್ಲಿ ಮೆಚ್ಯೂರಿಟಿ ಅಧಿಕವಾಗಿದೆ ಮತ್ತು ಅವರ ನಟನೆಯೂ ಅದಕ್ಕೆ ತಕ್ಕನಾಗಿ ಇದೆ. ಪೋಲಿ ಮಾತುಗಳಿಗೆ ಬ್ರೇಕ್ ಬಿದ್ದಿದೆ. ಜೀವನದ ಬಗ್ಗೆ ಹೊಸ ಒಳಹುಗಳನ್ನು ಹೇಳುತ್ತಾ ನಟನೆಯಲ್ಲಿ ಪ್ರೌಢಿಮೆ ಮೆರೆದಿದ್ದಾರೆ ಯೋಗಿ. ಯೋಗಿಗೆ ಸಿಕ್ಕ ಕಾಮನ್ ಮ್ಯಾನ್ ಯೋಗವನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿದ್ದಾರೆ.
ನಿವೇದಿತಾ ಟೀಚರ್ ಪಾತ್ರದಲ್ಲಿ ನಟಿ ಸೋನು ಗೌಡ ಇಷ್ಟವಾಗುತ್ತಾರೆ. ಮುಂಗೋಪಿಯಾಗಿ ಬಿ ಸುರೇಶ್ ಖಡಕ್ ಎನಿಸಿದರೆ, ಸ್ಮಶಾಣದಲ್ಲಿ ಗುಣಿ ತೋಡುವ ಸೀತಮ್ಮ ಪಾತ್ರದಲ್ಲಿ ಪದ್ಮಜಾ ರಾವ್ ಸೂಪರ್. ಎಣ್ಣೆ ಮಾಸ್ಟರ್ ಮಂಜುನಾಥ್ ಹೆಗಡೆಯವರ ಅಭಿನಯದ ನಶೆ ಸಿನಿಮಾ ಮುಗಿದ ಮೇಲು ಇರುತ್ತದೆ. ಉಳಿದಂತೆ, ಮಹಾಂತೇಶ್ ಹಿರೇಮಠ, ಹೇಮಾ ದತ್ ಮುಂತಾದವರು ನಟಿಸಿದ್ದಾರೆ. ತುರುವೇಕೆರೆ ಆಂಡಾಳಮ್ಮ ಪಾತ್ರದಲ್ಲಿ ಸುಮನ್ ರಂಗನಾಥ್ ಒಂದು ಸೀನ್‌ನಲ್ಲಿ ಬಂದು ಹೋಗುತ್ತಾರೆ. ವಿಜಯಪ್ರಸಾದ್ ಕೂಡ ಸಿನಿಮಾದಲ್ಲಿದ್ದಾರೆ. ಅವರ ಪಾತ್ರ ಏನೂ ಅನ್ನೋದನ್ನ ಸಿನಿಮಾದಲ್ಲಿ ನೋಡಿದರೆನೇ ಚೆಂದ. ಒಟ್ಟಿನಲ್ಲಿ, ಸಿದ್ಲಿಂಗು ಮೊದಲ ಭಾಗದ ನಿರೀಕ್ಷೆಯಲ್ಲೇ ಭಾಗ-೨ ನೋಡಿದರೆ ಸಿನಿಮಾ ಅಷ್ಟೊಂದು ಕನೆಕ್ಟ್ ಆಗದು.