ಕಳೆದ ಕೆಲವು ದಿನಗಳಿಂದಾನೂ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವೆ ಬಿರುಕು ಮೂಡಿದೆ, ಇನ್ನೇನು ಡಿವೋರ್ಸ್ ಪಡೆಯಲಿದ್ದಾರೆ ಎಂಬ ಮಾತುಗಳೇ ಕೇಳಿ ಬರುತ್ತಿವೆ. ಅದಕ್ಕೆ ತಕ್ಕ ಹಾಗೇ ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯ ಬಚ್ಚನ್ ಜೊತೆಗೆ ಮಾತ್ರ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಿರುವುದು ಡಿವೋರ್ಸ್ ವಿಚಾರಕ್ಕೆ ರೆಕ್ಕೆ ಪುಕ್ಕ ತಂದುಕೊಟ್ಟಿದೆ. ಐಶ್ವರ್ಯಾ ಹಾಗೂ ಅಭಿಷೇಕ್ ದೂರವಾಗುವುದಕ್ಕೆ ಅತ್ತೆ ಜಯಾ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಕಾರಣ ಎಂಬ ಮಾತು ಇದೆ. ಇದೇ ಕಾರಣಕ್ಕೆ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇದರ ನಡುವೆ ಹಳೇ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಶ್ವೇತಾ ಹಾಗೂ ಜಯ ಬಚ್ಚನ್, ಐಶ್ವರ್ಯಾ ಅವರನ್ನು ಹೊಗಳಿರುವುದು ಕಂಡು ಬಂದಿದೆ.
ಕಾಫಿ ವಿತ್ ಕರಣ್ ಜೋಹರ್ ಕಾರ್ಯಕ್ರಮದಲ್ಲಿ ಜಯಾ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಭಾಗವಹಿಸಿದ್ದರು. ಇದು ಬಹಳ ಹಿಂದಿನ ವಿಡಿಯೋ ಆಗಿದೆ. ಇದರಲ್ಲಿ ಐಶ್ವರ್ಯಾ ರೈ ಬಗ್ಗೆ ಕರಣ್ ಜೋಹರ್ ಪ್ರಶ್ನೆ ಕೇಳಿದ್ದಾರೆ. ನಿಮ್ಮ ಮನೆಗೆ ಸೊಸೆಯಾಗಿ ಬಂದಿರುವ ಐಶ್ವರ್ಯಾ ಅವರಿಗೆ ಸಲಹೆ ನೀಡುವುದಾದರೆ ಏನು ನೀಡುತ್ತೀರಿ ಎಂದು ಕೇಳಿದ್ದಾರೆ. ಅದಕ್ಕೆ ಇಬ್ಬರು ಉತ್ತರಿಸಿರುವ ವಿಡಿಯೋ ಈಗ ವೈರಲ್ ಆಗಿದೆ.
ಐಶ್ವರ್ಯಗೆ ಯಾವ ಸಲಹೆ ನೀಡುವ ಅವಶ್ಯಕತೆ ಇಲ್ಲ ಯಾಕೆಂದರೆ ಆಕೆ ಪರಿಪೂರ್ಣ ಹೆಣ್ಣು ಎಂದು ಹೇಳಿದ್ದಾರೆ.ನಾವು ಅವಳಿಗೆ ಏನೂ ಹೇಳಬೇಕಾಗಿಲ್ಲ ಎಂದು ಭಾವಿಸುತ್ತೇವೆ ಎಂದಿದ್ದಾರೆ. ಆಕೆಗೆ ಅಪಾರವಾದ ತಾಳ್ಮೆ ಇದೆ ಎಂದು ಹೇಳಿದ್ದಾರೆ. ಐಶ್ವರ್ಯ ಅವರನ್ನು ಬಾಯ್ತುಂಬ ಇಬ್ಬರು ಹೊಗಳಿದ್ದಾರೆ.