ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಬಂದಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅಂದಾಜು 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಆದರೆ ಅಧಿಕೃತವಾಗಿ ಕಲೆಕ್ಷನ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇನ್ನು ಸಿನಿರಸಿಕರು ಓಟಿಟಿಯಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ‘ಮ್ಯಾಕ್ಸ್’ ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಬರೀ ಬುಕ್‌ಮೈ ಶೋನಲ್ಲಿ 9 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ ಎಂದು ಅಭಿಮಾನಿಗಳು ಲೆಕ್ಕ ಹಾಕುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲಿ ಕೂಡ ಸಿನಿಮಾ ತೆರೆಕಂಡಿತ್ತು. ಆದರೆ ಕನ್ನಡದಲ್ಲಿ ಸಿಕ್ಕ ರೆಸ್ಪಾನ್ಸ್ ಬೇರೆ ಕಡೆ ಸಿಗಲಿಲ್ಲ. ಕನ್ನಡ ಹಾಗೂ ತಮಿಳು ಕಲಾವಿದರು, ತಂತ್ರಜ್ಞರು ‘ಮ್ಯಾಕ್ಸ್’ ಚಿತ್ರಕ್ಕಾಗಿ ಕೆಲಸ ಮಾಡಿದ್ದರು.
ಕಲೈಪುಲಿ ಎಸ್ ತನು ಚಿತ್ರಕ್ಕೆ ಹಣ ಹೂಡಿದ್ದರು. ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳಿದ್ದು ವಿಶೇಷ. ಮೊದಲ ಪ್ರಯತ್ನದಲ್ಲೇ ಜಬರ್ದಸ್ತ್ ಆಕ್ಷನ್ ಸಿನಿಮಾ ಕಟ್ಟಿಕೊಟ್ಟು ಅವರು ಸಕ್ಸಸ್ ಕಂಡಿದ್ದಾರೆ. ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರನಾಡ್, ಉಗ್ರಂ ಮಂಜು, ಸುನಿಲ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಡಿಸೆಂಬರ್ 25ಕ್ಕೆ ಸಿನಿಮಾ ತೆರೆಗಪ್ಪಳಿಸಿತ್ತು. ಮೊದಲ ಶೋನಿಂದಲೇ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಕ್ರಿಸ್‌ಮಸ್, ಹೊಸ ವರ್ಷದ ರಜೆಗಳು ಚಿತ್ರದ ಗಳಿಕೆಗೆ ಸಹಕಾರಿಯಾಗಿತ್ತು. ಚಿತ್ರದಲ್ಲಿ ಇನ್ಸ್‌ಪೆಕ್ಟರ್ ಅರ್ಜುನ್ ಮಹಾಕ್ಷಯ್ ಅಲಿಯಾಸ್ ‘ಮ್ಯಾಕ್ಸ್’ ಆಗಿ ಕಿಚ್ಚ ಅಬ್ಬರಿಸಿದ್ದಾರೆ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆ ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವಂತಿದೆ. ಸಿನಿಮಾ ನೋಡಿದವರೆಲ್ಲಾ ಪಕ್ಕಾ ಪೈಸಾ ವಸೂಲ್ ಎಂದು ಎಂಜಾಯ್ ಮಾಡಿದ್ದರು. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದರು. ಛಾಯಾಗ್ರಾಹಕ ಶೇಖರ್ ಚಂದ್ರು ಚಿತ್ರವನ್ನು ಸೊಗಸಾಗಿ ಸೆರೆ ಹಿಡಿದಿದ್ದರು.
ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿತ್ತು. ಅವರಿಗೂ ಒಳ್ಳೆ ಲಾಭ ಬಂದಿದೆ. ಇನ್ನು ಆಡಿಯೋ, ಡಿಜಿಟಲ್, ಸ್ಯಾಟಲೈಟ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿ ಚಿತ್ರತಂಡದ ಸಂಭ್ರಮಕ್ಕೆ ಕಾರಣವಾಗಿತ್ತು. ಜೀ ಸಂಸ್ಥೆ ಭಾರೀ ಮೊತ್ತಕ್ಕೆ ‘ಮ್ಯಾಕ್ಸ್’ ರೈಟ್ಸ್ ಕೊಂಡುಕೊಂಡಿತ್ತು. ಇದೀಗ ಸಿನಿಮಾ ಟಿವಿ ಪ್ರೀಮಿಯರ್ ಬಗ್ಗೆ ಅಪ್‌ಡೇಟ್ ಬಂದಿದೆ. ಶೀಘ್ರದಲ್ಲೇ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. 2024ರ ಬ್ಲಾಕ್‌ಬಸ್ಟರ್ ಸಿನಿಮಾ ‘ಮ್ಯಾಕ್ಸ್’ ಶೀಘ್ರದಲ್ಲೇ ಜೀ ಕನ್ನಡದಲ್ಲಿ ಪ್ರೀಮಿಯರ್ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಸಿನಿಮಾ ಓಟಿಟಿಗೆ ಬರಲ್ವಾ? ಎಂದು ಕೇಳುತ್ತಿದ್ದಾರೆ. ಇತ್ತೀಚೆಗೆ ‘ಯುಐ’ ಚಿತ್ರದ ಬಗ್ಗೆಯೂ ಇದೇ ರೀತಿ ಅಪ್‌ಡೇಟ್ ಹೊರಬಿದ್ದಿತ್ತು. ಶೀಘ್ರದಲ್ಲೇ ಚಿತ್ರವನ್ನು ಜೀ ಕನ್ನಡದಲ್ಲಿ ಪ್ರೀಮಿಯರ್ ಮಾಡೋದಾಗಿ ಹೇಳಿದ್ದರು. ಸಾಮಾನ್ಯವಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಬಳಿಕ ಓಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡುತ್ತಾರೆ. ಆ ಬಳಿಕವೇ ಟಿವಿಯಲ್ಲಿ ಪ್ರಸಾರವಾಗುತ್ತದೆ. ಅದೇ ರೀತಿ ಒಪ್ಪಂದ ಮಾಡಿಕೊಂಡಿರುತ್ತಾರೆ. ಆದರೆ ‘ಮ್ಯಾಕ್ಸ್’ ಹಾಗೂ ‘ಯುಐ’ ಸಿನಿಮಾಗಳ ವಿಚಾರದಲ್ಲಿ ಯಾಕೆ ಹೀಗೆ? ಎಂದು ಕೆಲವರು ಕೇಳುತ್ತಿದ್ದಾರೆ. ಸ್ಯಾಟಲೈಟ್ ಹಾಗೂ ಓಟಿಟಿ ಎರಡ ರೈಟ್ಸ್ ಜೀ ಬಳಿಯಿದೆ. ಹಾಗಾಗಿ ಮೊದಲು ಟಿವಿಯಲ್ಲಿ ಪ್ರಸಾರ ಮಾಡಿ ಬಳಿಕ ಜೀ-5ನಲ್ಲಿ ಸ್ಟ್ರೀಮಿಂಗ್ ಮಾಡುತ್ತಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.