Sandalwood Leading OnlineMedia

ಶಿವರಾಜಕುಮಾರ್ ನಟನೆಯ ಹೊಸ ಸಿನಿಮಾ ‘ಘೋಸ್ಟ್’ ಆರಂಭ

 
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಸಂದೇಶ್ ನಾಗರಾಜ್ (MLC) ಅರ್ಪಿಸುವ, ಸಂದೇಶ್ ಎನ್ ನಿರ್ಮಿಸುತ್ತಿರುವ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ಅಭಿನಯಿಸುತ್ತಿರುವ “ಘೋಸ್ಟ್‌” ಚಿತ್ರದ ಮುಹೂರ್ತ ಸಮಾರಂಭ ಮಿನರ್ವ ಮಿಲ್ ನಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಗೀತಾ ಶಿವರಾಜಕುಮಾರ್ ಆರಂಭ ಫಲಕ ತೋರಿದರು. ಬೃಂದಾ ಜಯರಾಂ ಕ್ಯಾಮೆರಾ ಚಾಲನೆ ಮಾಡಿದರು.ಚಿತ್ರತಂಡದ ಸದಸ್ಯರು ಹಾಗೂ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.  
 
 
     
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅದ್ದೂರಿ ಸೆಟ್ ಗಳನ್ನು ನಿರ್ಮಾಣ ಮಾಡಲಾಗಿದೆ. ಮಿನರ್ವ ಮಿಲ್ ನಲ್ಲಿ 15 ತರಹದ ಸೆಟ್ ಗಳನ್ನು ಹಾಗೂ ಮೈಸೂರಿನಲ್ಲಿ 4 ತರಹದ ಸೆಟ್ ಗಳನ್ನು ಕಲಾ‌ ನಿರ್ದೇಶಕ ಮೋಹನ್ ಬಿ ಕೆರೆ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಮಿನರ್ವ ಮಿಲ್ ನಲ್ಲಿ ನಿರ್ಮಿಸಲಾಗಿರುವ ಜೈಲ್ ಸೆಟ್ ನಲ್ಲೇ 24 ದಿನಗಳ ಚಿತ್ರೀಕರಣ ನಡೆಯಲಿದೆ. ಈ ಅದ್ದೂರಿ ಸೆಟ್ ಗಳ ನಿರ್ಮಾಣಕ್ಕೆ ಸುಮಾರು ಮೂರು ಕೋಟಿ ವೆಚ್ಚವಾಗಿದೆಯಂತೆ.
 
 
 
“ಶ್ರೀನಿವಾಸ ಕಲ್ಯಾಣ”, ” ಓಲ್ಡ್ ಮಾಂಕ್” ಸೇರಿದಂತೆ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿ ನಿರ್ದೇಶನದ ಐದನೇ ಚಿತ್ರ “ಘೋಸ್ಟ್”. ನಿರ್ದೇಶಕರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ “ಘೋಸ್ಟ್‌ ” ಚಿತ್ರಕ್ಕಿದೆ. ಐದು ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ. ಶಿವರಾಜಕುಮಾರ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
 

Share this post:

Translate »