ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ನಿಂದ ನಿಂತಿದ್ದು, ಮೇ 7ಕ್ಕೆ ಚುನಾವಣೆ ನಡೆಯಲಿದೆ. ಪತ್ನಿಯ ಪರವಾಗಿ ಶಿವಣ್ಣ ಹಗಲು ರಾತ್ರಿ ಎನ್ನದೆ, ಬಿಸಿಲು ಎನ್ನದೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಆದರೆ ಇದರ ನಡುವೆ ಕೆಲ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ, ಸುದ್ದಿ ಯಾಗಿದ್ದಾರೆ. ಈ ವಿಚಾರವಾಗಿ ಮಾಧ್ಯಮದವರ ಮೇಲೂ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಡಾರ್ಲಿಂಗ್ ಕೃಷ್ಣ ಅಭಿನಯದ, ಆರ್ ಚಂದ್ರು ನಿರ್ಮಾಣದ ಫಾದರ್ ಸಿನಿಮಾಗೆ ಚಾಲನೆ ನೀಡಿ ಮಾತನಾಡಿದ ಶಿವಣ್ಣ, ಇಂದು ಸೋಷಿಯಲ್ ಮೀಡಿಯಾ ಎಂಬುದು ಆಟ ಸಾಮಾನು ಆಗಿ ಹೋಗಿದೆ. ನಾವಿದ್ದ ಕಾಲದಲ್ಲಿ ತುಂಬಾ ಚೆನ್ನಾಗಿತ್ತು. ಒಳ್ಳೆಯ ರೀತಿಯಾಗಿ ಬಳಕೆ ಮಾಡಿ.
ಒಂದು ದಿನ ಆ ಕಾಲ ಬರುತ್ತೆ. ದೇವರು ಒಳ್ಳೆದು ಮಾಡಲ್ಲ. ಏನಾದರೂ ಹೇಳಬೇಕು ಎಂದಾದರೇ ನಾನು ಏನೇ ಇದ್ದರು ನೇರವಾಗಿ ಚಂದ್ರು ಹತ್ತಿರಾನೇ ಹೇಳುತ್ತೀನಿ. ನಿಮ್ಮ ಬಳಿ ಯಾಕೆ ಹೇಳಬೇಕು. ಜರ್ನಲಿಸಂಗೆ ಅಂತ ಒಂದು ಎಥಿಕ್ಸ್ ಇದೆ ಅದನ್ನ ಉಳಿಸಿಕೊಂಡು ಹೋಗಿ. ಯಾವ ಮೀಡಿಯಾನು ಏನು ಮಾಡೋಕೆ ಆಗಲ್ಲ. ನಮ್ಮ ಮೀಡಿಯಾ ನಮಗೆ ಚೆನ್ನಾವಿದ್ದರೆ ಸಾಕು ಎಂದು ಬೇಸರದಲ್ಲಿಯೇ ನುಡಿದಿದ್ದಾರೆ.
ಶಿವಮೊಗ್ಗದಲ್ಲಿ ಪ್ರಚಾರದಲ್ಲಿದ್ದ ಶಿವಣ್ಣ ಅವರ ಬಗ್ಗೆ ಎರಡು ವಿಚಾರಗಳು ನೆಗೆಟಿವ್ ಸುದ್ದಿಯಾಗಿದೆ. ಒಮ್ಮೆ ಹಣೆಗೆ ಇಟ್ಟ ಕುಂಕುಮವನ್ನು ಅಳಿಸಿ ಹಾಕಿದರು ಎಂಬುದು ಮತ್ತೊಂದು ತಮಿಳಿನಲ್ಲಿ ಭಾಷಣ ಮಾಡಿದರು ಎಂದು ಟ್ರೋಲ್ ಮಾಡಿದ್ದರು.
ಬಿಸಿಲಿನಿಂದಾಗಿ ಬೆವರು ಬಂದಾಗ ಒರೆಸಿಕೊಂಡಿದ್ದಾರೆ. ಆಗ ಕುಂಕುಮ ಅಳಿಸಿತ್ತು. ಅದನ್ನು ಕೂಡ ನೆಗೆಟಿವ್ ಆಗಿ ಟ್ರೋಲ್ ಮಾಡಿದ್ದು, ಸುದ್ದಿ ಮಾಡಿದ್ದಕ್ಕೆ ಶಿವಣ್ಣ ಬೇಸರ ಮಾಡಿಕೊಂಡರು.