ಕನ್ನಡದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 666 ಆಪರೇಷನ್ ಡ್ರೀಮ್ ಥಿಯೇಟರ್ ನಿರ್ದೇಶಕ ಹೇಮಂತ್ ಎಂ. ರಾವ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿದೆ. ಟಗರು ಮೂಲಕ ಪ್ರೇಕ್ಷಕರ ಮನಸೆಳೆದ ಶಿವರಾಜ್ ಕುಮಾರ್ ಮತ್ತು ಧನಂಜಯ್ ಜೋಡಿ, ಈ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದು ಕುತೂಹಲ ಹೆಚ್ಚಿಸಿದೆ. ಹೊಸ ಪೋಸ್ಟರ್‌ನಲ್ಲಿ ಶಿವಣ್ಣ ಮತ್ತು ಡಾಲಿ ಧನಂಜಯ್ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಡಾ. ರಾಜಕುಮಾರ್ ಅವರ ಕ್ಲಾಸಿಕ್ ಸ್ಪೈ ಸಿನಿಮಾಗಳ ನೆನಪನ್ನು ತಂದುಕೊಟ್ಟಿದೆ.

ಬೃಹತ್ ಸೆಟ್‌ನಲ್ಲಿ ಶೂಟಿಂಗ್
ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಎರಡನೇ ಹಂತಕ್ಕೆ ಸಜ್ಜಾಗಿದೆ. ಇದಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಬೃಹತ್ ಸೆಟ್ ನಿರ್ಮಾಣಗೊಂಡಿದೆ. ಸುಮಾರು 100 ದಿನಗಳ ಕಾಲ ಈ ಸೆಟ್‌ನಲ್ಲಿ ಶೂಟಿಂಗ್ ನಡೆಯಲಿದೆ. ನಿರ್ಮಾಪಕ ಡಾ. ವೈಶಾಕ್ ಜೆ. ಗೌಡ ಹೇಳುವಂತೆ: “ಹೇಮಂತ್ ರಾವ್ ಮತ್ತು ತಂಡ ಎಚ್ಚರಿಕೆಯಿಂದ ಈ ಚಿತ್ರವನ್ನು ರೂಪಿಸುತ್ತಿದ್ದಾರೆ. ಇಂದಿನ ಪೀಳಿಗೆಯನ್ನು ಅಚ್ಚರಿಗೊಳಿಸುವುದರ ಜೊತೆಗೆ ಹಿಂದಿನ ಪೀಳಿಗೆಯನ್ನು ನೆನಪಿನ ಹಾದಿಯಲ್ಲಿ ಕರೆದೊಯ್ಯುವ ಅನುಭವವನ್ನು ಕೊಡುವ ಪ್ರಯತ್ನದಲ್ಲಿದ್ದೇವೆ. ಸೆಟ್‌ಗಳ ವಿವರವನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ. ಪ್ರೇಕ್ಷಕರು ಅದನ್ನು ದೊಡ್ಡ ಪರದೆಯ ಮೇಲೆ ಅನುಭವಿಸಬೇಕು,” ಎಂದು ತಿಳಿಸಿದ್ದಾರೆ.

ತಾಂತ್ರಿಕ ತಂಡ
ವೈಶಾಕ್ ಜೆ. ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ಕಲಾ ನಿರ್ದೇಶಕರಾಗಿ ವಿಶ್ವಾಸ್ ಕಶ್ಯಪ್ ಕೆಲಸ ಮಾಡುತ್ತಿದ್ದಾರೆ.
