ಜುಲೈ ತಿಂಗಳಲ್ಲಿ ತೆರೆಗೆ ಬರುತ್ತಿದೆ “ಸಾವಿತ್ರಿ”
ಕೊರೋನಾ ಸಂಕಷ್ಟಕ್ಕೆ ಇಡೀ ಜಗತ್ತು ತತ್ತರಿಸಿದೆ. ಚಿತ್ರರಂಗ ಕೂಡಾ ಅಪಾರ ನಷ್ಟ ಅನುಭವಿಸಿದೆ. ಎಲ್ಲ ಅಂದುಕೊಂಡಂತೇ ಆಗಿದ್ದರೆ ಲಾಕ್ ಡೌನ್ ಗೂ ಮುಂಚೆಯೇ ಬಿಡುಗಡೆಯಾಗಬೇಕಿದ್ದ ಸಿನಿಮಾ ಸಾವಿತ್ರಿ. ಸದ್ಯ ಕೊರೋನಾ ಸಮಸ್ಯೆ ಬಹುತೇಕ ಬಗೆಹರಿದಿದೆ. ಏಕಾಏಕಿ ನೂರಾರು ಚಿತ್ರಗಳು ಕ್ಯೂ ನಿಂತಿರೋದರಿಂದ ಥೇಟರ್ ಸಮಸ್ಯೆ ಕೂಡಾ ಎದುರಾಗಿದೆ. ಈ ನಡುವೆ ʻಸಾವಿತ್ರಿʼ ಚಿತ್ರವನ್ನು ವ್ಯವಸ್ಥಿತವಾಗಿ ತೆರೆಗೆ ತರಲು ನಿರ್ಮಾಪಕ ಪ್ರಶಾಂತ್ ಕುಮಾರ್ ಹೀಲಲಿಗೆ ತೀರ್ಮಾನಿಸಿದ್ದಾರೆ.
ಸ್ಯಾಂಡಲ್ವುಡ್ನ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅಭಿನಯದ ಬಹುನಿರೀಕ್ಷಿತ ಚಿತ್ರ “ಸಾವಿತ್ರಿ” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ನಗರಗಳಲ್ಲಿನ ಇಂದಿನ ಜೀವನ, ಕ್ಷಣವೂ ಎದುರಿಸುವ ಒತ್ತಡ, ಕೆಲಸದಲ್ಲಿರುವ ಅಪ್ಪ-ಅಮ್ಮ, ಅವರು ಮಕ್ಕಳಿಗೆ ಕೊಡುವ ಸಮಯ, ಪ್ರೀತಿ ಇತ್ತಾದಿ ವಿಷಯಗಳೊಂದಿಗೆ ಸೈನ್ಸ್ ಫಿಕ್ಷನ್, ಹಾರರ್ ಜೊತೆಗೆ ಕೌಟುಂಬಿಕ ಅಂಶದೊಂದಿಗೆ ಚಿತ್ರಕಥೆಯನ್ನು ಹೆಣೆಯಲಾಗಿದೆ.
ಅಲ್ಲದೆ, ಟೆಕ್ನಾಲಜಿ ಬೆಳೆದಂತೆ ಮನೆಯಲ್ಲಿ ಉಂಟಾಗುವ ಸಮಸ್ಯೆಗಳು, ಮಕ್ಕಳ ಮೇಲೆ ಅದರ ಪರಿಣಾಮಗಳನ್ನು ಎಳೆ ಎಳೆಯಾಗಿ “ಸಾವಿತ್ರಿ” ಬಿಚ್ಚಿಡಲಿದ್ದು, ಮಕ್ಕಳ ಸಹಿತ ಇಡೀ ಕುಟುಂಬ ನೋಡುವಂತಹ ಸಿನಿಮಾ ಇದಾಗಿದೆ.
ನಿರ್ಮಾಪಕ ಪ್ರಶಾಂತ್ ಕುಮಾರ್ ಹೀಲಲಿಗೆ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಹಾಗೆಯೇ, ಕನ್ನಡ ಸಹಿತ ಕೆಲವು ಭಾಷೆಗಳ ಚಿತ್ರಗಳನ್ನು ನೋಡುತ್ತಾ ಬೆಳೆದಿದ್ದು, ಚಿತ್ರರಂಗದ ಬಗ್ಗೆ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಕೊನೆಗೆ ಸಿನಿಮಾ ನಿರ್ಮಾಣ, ನಿರ್ದೇಶನ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಸಾಕಷ್ಟು ಅಧ್ಯಯನ ಮಾಡಿಕೊಂಡು “ಸಾವಿತ್ರಿ” ನಿರ್ಮಾಣ ಮಾಡಿದ್ದಾರೆ.
ತೆಲುಗಿನ ನಟಿ ಊರ್ವಶಿ ರಾಯ್ ನಾಯಕಿಯಾಗಿದ್ದು, ಕನ್ನಡದ ಪ್ರಥಮ ಸಿನಿಮಾವಾಗಿದೆ. ವಿಶೇಷ ಪಾತ್ರದಲ್ಲಿ ಹಿರಿಯ ನಟಿ ತಾರಾ ಕಾಣಿಸಿಕೊಂಡಿದ್ದಾರೆ.ಪ್ರಕಾಶ್ ಬೆಳವಾಡಿ,ಮಿಮಿಕ್ರಿ ಗೋಪಿ, ನೈಲಾ ಪ್ರಮೋದ್, ಸಂಜು ಬಸಯ್ಯ, ಸ್ವಾತಿ ಮುಂತಾದವರ ತಾರಾಬಳಗ ಚಿತ್ರದಲ್ಲಿದೆ.
ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಕೇಳುಗರನ್ನು ಸೆಳೆದಿದೆ. ಇನ್ನು ಚಿತ್ರದಲ್ಲಿ ನಾಲ್ಕು ಹಾಡುಗಳಿಗೆ ಖ್ಯಾತ ಸಾಹಿತಿ ಹೃದಯ ಶಿವ ಗೀತರಚನೆ, ಸಂಭಾಷಣೆಯ ಜೊತೆಗೆ ಸಂಗೀತವನ್ನೂ ನೀಡಿದ್ದಾರೆ. ಇಷ್ಟು ದಿನ ಗೀತರಚನಕಾರರಾಗಿದ್ದ ಹೃದಯ ಶಿವ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಎಸ್ ದಿನೇಶ್ ಅವರ ನಿರ್ದೇಶನವಿದ್ದು, ಚಿತ್ರಕ್ಕೆ ನಾಗಾರ್ಜುನ ಕ್ಯಾಮೆರಾ ಹಿಡಿದಿದ್ದಾರೆ.