Sandalwood Leading OnlineMedia

 ನಿರೂಪ್ ಭಂಡಾರಿ  ಚಿತ್ರದ ಟೈಟಲ್ ಬಿಡುಗಡೆ *ಸತ್ಯ ಸನ್ ಆಫ್ ಹರಿಶ್ಚಂದ್ರ

‘ರಂಗಿತರಂಗ’ ಸಿನಿಮಾದ ಯಶಸ್ವಿ ಜೋಡಿ  ನಿರೂಪ್ ಭಂಡಾರಿ ಮತ್ತು ಸಾಯಿ ಕುಮಾರ್ ವಿಬಿನ್ನ ಕಥಾವಸ್ತುವನ್ನು ಹೊಂದಿದ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ.‘ಅಂಕಿತ್ ಸಿನಿಮಾಸ್’ ನಿರ್ಮಾಣದ ಈ ಚಿತ್ರದ ಟೈಟಲ್ ಮತ್ತು ಮೊದಲ ಲುಕ್ ಇಂದು ಬಿಡುಗಡೆಯಾಗಿದೆ.  “ಸತ್ಯ ಸನ್ ಆಫ್ ಹರಿಶ್ಚಂದ್ರ” ಈ ಚಿತ್ರದ ಶೀರ್ಷಿಕೆ. ಇಂದು ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್ ಹಿತವಾದ ವರ್ಣ ಸಂಯೋಜನೆಯೊಂದಿಗೆ ಸುಂದರವಾಗಿ ಮೂಡಿ ಬಂದಿದೆ. ಮಗನಾಗಿ ನಿರೂಪ್ ಭಂಡಾರಿಯವರ ಫಸ್ಟ್ ಲುಕ್ ಆಕರ್ಷಕವಾಗಿದೆ. ಅಪ್ಪನಾಗಿ ಸಾಯಿ ಕುಮಾರ್ ಅವರ ಗತ್ತು ರಾಜಗಾಂಭೀರ್ಯದಿಂದ  ಕೂಡಿದೆ.ಈ ಫಸ್ಟ್ ಲುಕ್ ನಲ್ಲಿರುವ “ನನ್ನ ತಂದೆಯೇ ನನ್ನ ವಿಲನ್” ಘೋಷವಾಕ್ಯ ದೊಂದಿಗೆ ನಿರ್ದೇಶಕ ಸಚಿನ್ ವೀಕ್ಷಕರಲ್ಲಿ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ತಂದೆ ಮತ್ತು ಮಗನ ಕಥಾ ಹಂದರವನ್ನು ಹೊಂದಿರುವುದರಿಂದ ಈ ಚಿತ್ರದ ಫಸ್ಟ್ ಲುಕ್ಕನ್ನು ನಾಯಕ ಮತ್ತು ನಿರ್ಮಾಪಕರ ತಂದೆಯರು ಜಂಟಿಯಾಗಿ ಬಿಡುಗಡೆ ಮಾಡಿದ್ದು ಔಚಿತ್ಯಪೂರ್ಣವಾಗಿತ್ತು. ಸತ್ಯ ಮತ್ತು ಸುಳ್ಳಿನ ಮಧ್ಯ ನಡೆಯುವ ಸಂಘರ್ಷದ ಕಥಾ ಹಂದರ ಹೊಂದಿರುವ ಸತ್ಯ ಸನ್ ಆಫ್ ಹರಿಶ್ಚಂದ್ರ ಸಿನಿಮಾ ಹಾಸ್ಯ ಹಾಗೂ ಸಾಂಸಾರಿಕ ಕಥಾವಸ್ತುವನ್ನು ಹೊಂದಿದ್ದು ಇದರ ಚಿತ್ರಣ ತೀರ್ಥಹಳ್ಳಿ ಮತ್ತು ಚೆನ್ನಗಿರಿಯಆಸುಪಾಸಿನ ಸುಂದರ ತಾಣದಲ್ಲಿ ಭರದಿಂದ ಸಾಗಿದೆ. ತಾರಾಗಣದಲ್ಲಿ ಬೃಂದಾ ಆಚಾರ್ಯ, ಅಂಕಿತಾ ಅಮರ್, ಸ್ವಾತಿ ಗುರುದತ್, ಎಂ ಕೆ ಮಠ, ಚೇತನ್ ದುರ್ಗಾ,ಮುಂತಾದವರು ನಿರೂಪ್ ಮತ್ತು ಸಾಯಿ ಕುಮಾರ್ ಅವರ ಮೇಲಾಟಕ್ಕೆ ಸಾಥ್ ಕೊಡಲಿದ್ದಾರೆ
“ಸತ್ಯ ಸನ್ ಆಫ್ ಹರಿಶ್ಚಂದ್ರ” ಚಿತ್ರವನ್ನು ಸಚಿನ್ ವಾಲಿ ನಿರ್ದೇಶಿಸುತ್ತಿದ್ದು “ಅಂಕಿತ್ ಸಿನಿಮಾಸ್” ಬ್ಯಾನರ್ ನಡಿಯಲ್ಲಿ ಅಂಕಿತ್ ಸೋನಿಗಾರ ನಿರ್ಮಿಸುತ್ತಿದ್ದಾರೆ. ಮೂಲತಃ ಪೂಣೆಯವರಾದ ಅಂಕಿತ್ ಅವರು ಕನ್ನಡದ ಮೇಲಿನ ಅಭಿಮಾನದಿಂದ ಕನ್ನಡ ಚಿತ್ರವನ್ನು ನಿರ್ಮಿಸುತ್ತಿರುವುದು ಪ್ರಶಂಸನೀಯ.  ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರಕ್ಕೆ ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸಚಿನ್ ಬಸ್ರೂರು  ಸಂಗೀತ, ಉಜ್ವಲ್ ಚಂದ್ರ ಸಂಕಲನ,  ಜೋ಼ಹ ಕಬೀರ್ ವಸ್ತ್ರ ವಿನ್ಯಾಸ ಹಾಗೂ ಉಲ್ಲಾಸ್ ಹೈದೂರ್ ಕಲಾ ನಿರ್ದೇಶನವಿದೆ.  “ಸತ್ಯಸನ್ ಆಫ್ ಹರಿಶ್ಚಂದ್ರ” ಚಿತ್ರವನ್ನು ಅಮೃತ್ ಸೋನೀಗಾರ ಪ್ರಸ್ತುತ ಪಡಿಸುತ್ತಿದ್ದಾರೆ.

Share this post:

Translate »