ಸೆಲೆಬ್ರಿಟಿ ಸ್ಟಾರ್‌ಗಳ ಲೈಫ್ ಬಗ್ಗೆ ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಒಂದಷ್ಟು ಕುತೂಹಲಗಳಿರುತ್ತದೆ. ತೆರೆಯ ಮುಂದೆ ಮಿಂಚುವ ತಮ್ಮ ನೆಚ್ಚಿನ ಸೆಲಬ್ರಿಟಿಗಳು ತೆರೆಯ ಹಿಂದೆ ಹೇಗಿರುತ್ತಾರೆ ಎಂಬ ಒಂದಷ್ಟು ಕುತೂಹಲಗಳು ಅಭಿಮಾನಿಗಳನ್ನು ಸದಾ ಕಾಡುತ್ತಲೇ ಇರುತ್ತವೆ. ಇನ್ನು ಸ್ಲಿಮ್ ಆ್ಯಂಡ್ ಫಿಟ್ ಆಗಿರುವ ತಮ್ಮ ನೆಚ್ಚಿನ ಸ್ಟಾರ್‌ಗಳು ಏನು ತಿಂತಾರೆ, ಯಾವ ಅಡುಗೆ ಇಷ್ಟಪಡುತ್ತಾರೆ, ಅಡುಗೆ ಬಗ್ಗೆ ಅವರಿಗೆಷ್ಟು ಗೊತ್ತು, ಯಾವ ಫುಡ್ ಅವರಿಗೆ ಫೇವರೆಟ್ ಎಂಬ ಕುತೂಹಲವು ಅಭಿಮಾನಿಗಳಲ್ಲಿರುತ್ತದೆ. ಅಭಿಮಾನಿಗಳ ಈ ಕುತೂಹಲವನ್ನು ಕೊಂಚ ಮಟ್ಟಿಗೆ ತಣಿಸುವ ಅಂಕಣವೇ `ಚಿತ್ತಾರ ಸ್ಟಾರ್ ಕಿಚನ್’. ಈ ಬಾರಿಯ `ಚಿತ್ತಾರ ಸ್ಟಾರ್ ಕಿಚನ್’ನ ಸ್ಟಾರ್, `ಕಾಂತಾರ’ ಚಿತ್ರದ ಮೂಲಕ `ಲೀಲಾ’ ಪಾತ್ರದಲ್ಲಿ ಪ್ರೇಕ್ಷಕರ ಮನಸ್ಸನ್ನು ಮುಟ್ಟಿದ ಬೆಡಗಿ ಸಪ್ತಮಿ ಗೌಡ.
ಮೂಲತಃ ಬೆಂಗಳೂರಿನವರಾಗಿರುವ ಸಪ್ತಮಿ ಗೌಡ ಅವರಿಗೆ ನಾನ್ ವೆಜ್ ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಚಿಕನ್ ಊಟ, ಮೀನಿನ ಊಟ ಅಂದ್ರೆ ಪಂಚಪ್ರಾಣ. ಸದ್ಯ ಸಿನಿಮಾ ಕೆಲಸಗಳಲ್ಲಿ ನಿರತವಾಗಿರುವ ಸಪ್ತಮಿ, ಬಿಡುವಿದ್ದಾಗ ತಮ್ಮ ಇಷ್ಟದ ಅಡುಗೆಯನ್ನ ತಾವೇ ಮಾಡಿಕೊಳ್ಳುತ್ತಾರೆ. ಅದರಲ್ಲೂ ಚಿಕನ್ ಖಾದ್ಯಗಳನ್ನು ಸಖತ್ತಾಗಿ ಮಾಡ್ತಾರೆ. ಇನ್ನು ಅಮ್ಮ ಮಾಡುವ ನಾಟಿ ಕೋಳಿ ಸಾರು-ಮುದ್ದೆ, ಅಕ್ಕಿ ರೊಟ್ಟಿ-ಫಿಶ್ ಕರಿ. ಹೀಗೆ ನಾನ್‌ವೆಜ್ ಏನೇ ಮಾಡಿದ್ರು ಬಾಯಿ ಚಪ್ಪರಿಸಿಕೊಂಡು ತಿಂತಾರೆ.
ನೋಡೋಕೆ ಸಕತ್ ಫಿಟ್ ಆಗಿ ಕಾಣಿಸುವ ಸಪ್ತಮಿ ಗೌಡ ಡಯಟ್‌ಗೆ ಇತ್ತೀಚೆಗೆ ಇಂಪಾರ್ಟೆನ್ಸ್ ಕೊಡ್ತಾ ಇದ್ದಾರೆ. ಸಮಯಕ್ಕೆ ಸರಿಯಾಗಿ ಊಟ ಮಾಡೋದು ಕೂಡ ಒಂದು ರೀತಿಯ ಡಯಟ್ ಅನ್ನುವ ಇವರು, ತಮಗೆ ಪಾಲಿಸಲು ಸುಲಭವಾಗುವ ಡಯಟ್ ಪ್ಲಾನ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಸಂಜೆ ಸ್ನ್ಯಾಕ್ಸ್ ಹಾಗೂ ರಾತ್ರಿ ಊಟವನ್ನ ಮಿತವಾಗಿ ಮಾಡುವ ಇರುವ ರೈಸ್‌ನ್ನು ಕಡಿಮೆ ಸೇವಿಸುತ್ತಾರೆ. ನಾನ್‌ವೆಜ್ ಜೊತೆಗೆ ತರಕಾರಿ, ಸೊಪ್ಪು ಕೂಡ ಸೇವನೆ ಮಾಡ್ತಾರೆ.
ಒಬ್ಬ ಮನುಷ್ಯ ಫಿಟ್ ಆಗಿರೋದಕ್ಕೆ ವರ್ಕೌಟ್ ಕೂಡ ತುಂಬಾ ಮುಖ್ಯವಾಗುತ್ತೆ, ಅದಕ್ಕಾಗಿ ಸಪ್ತಮಿ ಜಿಮ್‌ಗೆ ಹೋಗ್ತಾರೆ. ಆದ್ರೆ ಶೂಟಿಂಗ್ ಸಮಯದಲ್ಲಿ ಜಿಮ್ ಮಿಸ್ಸಾದ್ರೆ ಮನೆಯಲ್ಲೆ ಯೋಗ, ವಾಕ್ ಮಾಡೋದು ರೂಢಿ. ಡಯಟ್‌ಗೆ ಮುಖ್ಯವಾಗಿ ಬೇಕಾಗಿರುವುದು ಸರಿಯಾದ ಕ್ರಮವಾಗಿ ಬಳಸುವ ಆಹಾರ ಮತ್ತು ನೀರು, ಎಂಬುದು ಇವರ ಅಭಿಪ್ರಾಯ. ಆಹಾರವನ್ನು ಇಷ್ಟ ಪಡುವ ಇವರು, ಸರಿಯಾದ ಸಮಯಕ್ಕೆ ಊಟ, ತಿಂಡಿ, ನಿದ್ರೆ ಮಾಡುವುದನ್ನು ತಪ್ಪದೆ ಪಾಲಿಸುತ್ತಾರೆ ಇವರು. ಸಿಹಿ ತಿನಿಸುಗಳನ್ನು ಹೆಚ್ಚಾಗಿ ಸೇವಿಸುವ ಸಪ್ತಮಿ, ಎಲ್ಲಾ ರೀತಿಯ ಸಿಹಿತಿಂಡಿಗಳನ್ನು ಇಷ್ಟ ಪಟ್ಟು ತಿನ್ನುತ್ತಾರೆ.