ಚಿತ್ರ : ಸಪ್ತ ಸಾಗರದಾಚೇ ಎಲ್ಲೋ..
ರಚನೆ ಮತ್ತು ನಿರ್ದೇಶನ : ಹೇಮಂತ್ ರಾವ್
ತಾರಾಗಣ ; ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ರಮೇಶ್ ಇಂದಿರಾ, ಪವಿತ್ರಾ ಲೋಕೇಶ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್.
ಮೋಹನ್ ಲಾಲ್ ಮಗ ಪ್ರಣವ್ ಮೋಹನ್‌ಲಾಲ್ ಅಭಿನಯದ `ಹೃದಯಂ’, ದುಲ್ಕರ್ ಸಲ್ಮಾನ್ ಅಭಿನಯದ `ಸೀತಾ ರಾಮಂ’, ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಅಭಿನಯದ `ಬೇಬಿ’.. ಈ ಎಲ್ಲಾ ಲವ್ ಸ್ಟೋರಿ ಹೊತ್ತ ಚಿತ್ರಗಳನ್ನು ಕನ್ನಡಿಗರು ನೋಡಿದಾಗ `ನಮ್ಮಲ್ಲಿ ಯಾಕೆ ಈ ಥರಹದ ಚಿತ್ರ ಇಲ್ಲ?’ ಎಂದು ಪ್ರಶ್ನಿಸಿಕೊಳ್ಳುತ್ತಿದ್ದರು. ಅದಕ್ಕೀಗ ನಿರ್ದೇಶಕ ಹೇಮಂತ್ ರಾವ್ `ಸಪ್ತ ಸಾಗರದಾಚೆ ಎಲ್ಲೋ..’ ಎಂಬ ದೃಶ್ಯ ಕಾವ್ಯದ ಮೂಲಕ ಸಮರ್ಪಕ ಉತ್ತರ ನೀಡಿದ್ದಾರೆ.ಗೋಪಾಲ ಕೃಷ್ಣ ಅಡಿಗರ, ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ.. ಬಾಳ ಗಂಗೆಯ ಮಹಾಪೂರದೊಳು ಸಾವಿನೊಂದು ವೇಣಿ.. ಎಂಬ ಸಾಲುಗಳು ಹೇಗೆ ಕಾಡುತ್ತವೋ.. ಹೇಗೆ ಅರ್ಥ ಗರ್ಭಿತವಾಗಿದೆಯೋ `ಸಪ್ತ ಸಾಗರದಾಚೆ ಎಲ್ಲೋ..’ ಸಿನಿಮಾವು ಅದೇ ರೀತಿಯಲ್ಲಿ ಕಾಡುವ, ಮನಸ್ಸಿನಲ್ಲಿ ಉಳಿಯಬಲ್ಲ ಸಿನಿಮಾ. ಈ ಹಿಂದೆ ಗೋದಿ ಬಣ್ಣ ಸಾಧಾರಣ ಮೈಕಟ್ಟು, ಕವಲು ದಾರಿ ಚಿತ್ರಗಳ ಮೂಲಕ ತನ್ನದೇ ದಾರಿ ಕಂಡು ಕೊಂಡು, ತಾನೋಬ್ಬ ಟ್ರೆಂಡ್ಗೆ ತಕ್ಕ ಸಿನಿಮಾ ಮಾಡುವ ನಿರ್ದೇಶಕ ಅಲ್ಲ.. ಅನ್ನವುದನ್ನು ಪ್ರೂವ್ ಮಾಡಿರುವ ನಿರ್ದೇಶಕ ಹೇಮಂತ್ `ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ತಾವೇ ಒಂದು ಟ್ರೆಂಡ್ ಸೆಟ್ ಮಾಡಿದ್ದಾರೆ!
ಇದನ್ನೂ ಓದಿ: ಪ್ರಮೋದ್ ಶೆಟ್ಟಿ ಹುಟ್ಟುಹಬ್ಬಕ್ಕೆ ‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಸಿನಿಮಾದ ಫಸ್ಟ್ ಲುಕ್ ಉಡುಗೊರೆ
`ಸಪ್ತಸಾಗರದಾಚೆ ಎಲ್ಲೋ’ ಒಂದು ಔಟ್ ಅಂಡ್ ಔಟ್ ಲವ್‌ಸ್ಟೋರಿ ಎಂದು ಒಂದೇ ಸಾಲಿನಲ್ಲಿ ಹೇಳಿಬಿಡುವುದು ಕಷ್ಟ. ಇಲ್ಲಿ ಲವ್‌ಸ್ಟೋರಿ ಜೊತೆ ಜೊತೆ ಹೈ ಓಲ್ಟೇಜ್ `ಹೇಟ್’ ಸ್ಟೋರಿ ಕೂಡ ಇದೆ. ಕಡಲಿನಂತಹ ಪ್ರೀತಿ ಹೇಗಿದೆಯೋ, ಹಾಗೇ ಆಗಸದಷ್ಟು ವಿಶಾಲವಾದ ದ್ವೇಷವೂ ಇಲ್ಲಿದೆ. ತಮ್ಮ ಸ್ವಾರ್ಥಕ್ಕಾಗಿ ಒಂದಿನಿತೂ ಪಾಪ ಪ್ರಜ್ಞೆ ಇಲ್ಲದ, ಯಾರು ಹೇಗಾದ್ರೂ ಸಾಯಲಿ ನಾನು ಸೇಫ್ ಆಗಿರಬೇಕೆಂದು ಮೋಸ ಮಾಡುವ.. ಅಧಿಕಾರಶಾಹಿ ಮನೋಸ್ಥಿಗಳ ಅನಾವರಣ.. … ಹೀಗೆ ವಿವಿಧ ಆಯಾಮಗಳೊಂದಿಗೆ ಸಾಗುವ ಸಿನಿಮಾ ಇಂಟ್ರೆಸ್ಟಿ0ಗ್ ಆಗಿ ನೋಡಿಸಿಕೊಂಡು ಹೋಗುತ್ತದೆ.`ಸಪ್ತಸಾಗರದಾಚೆ ಎಲ್ಲೋ’ ಇನ್ನಷ್ಟು ಹತ್ತಿರವಾಗುವುದಕ್ಕೆ ಬಹು ಮುಖ್ಯ ಕಾರಣ ಚಿತ್ರದ ಸಹಜತೆ. ಸಿನಿಮಾ ಎಲ್ಲೂ ನೋಡುಗನನ್ನು ಹುಬ್ಬೇರಿಸುವಂತೆ ಮಾಡುವುದಿಲ್ಲ ಆದರೆ, ಹೃದಯ ಕರಗಿಸುತ್ತದೆ. ಮನು-ಪ್ರಿಯಾಳ `ಧೀರ್ಘ ಚುಂಬನ’ವನ್ನು ಆರಂಭದಲ್ಲೇ ತೋರಿಸುವ ಹೇಮಂತ್’ `ಲವ್’ ವಿಚಾರದಲ್ಲಿ `ಮಕ್ಕಳಾಟ’ ಮುಗಿದು, ಬದುಕಿ ಕಟ್ಟಿಕೊಳ್ಳುವ ಅಲೆಗಳ ಮಧ್ಯೆ ಸಿಕ್ಕಿಹಾಕಿಕೊಂಡಿದ್ದಾರೆ ಎಂಬುದನ್ನು ಹೇಳಿ ಬಿಡುತ್ತಾರೆ. ಪ್ರಿಯಾಳ (ರುಕ್ಮಿಣಿ ವಂಸತ್) ಕನಸನ್ನು ನನಸು ಮಾಡಲು ಹೊರಡುವ ಮನು(ರಕ್ಷಿತ್ ಶೆಟ್ಟಿ).. ಭವಿಷ್ಯಕ್ಕಾಗಿ ತನ್ನ ಭವಿಷ್ಯಕ್ಕೇ ಮುಳವಾಗುವ ಮನುವಿನ ಆ ಒಂದು ನಿರ್ಧಾರ.. ಮನು-ಪ್ರಿಯಾ ತಮ್ಮನ್ನು ಪರಸ್ಪರ ಅರ್ಥ ಮಾಡಿಕೊಂಡಿದ್ದೀವಿ ಅಂದುಕೊ0ಡರೂ.. ಮನುವಿನ ಮನವನ್ನೇ ಮನೆ ಮಾಡಿಕೊಂಡಿರು ಪ್ರಿಯಾ, ಮನುವಿಗೇ ಅರ್ಥವಾಗದೇ ಹೊಗೋದು.. ಹೀಗೆ ಸಾಕಷ್ಟು ಸೂಕ್ಷ ವಿಚಾರಗಳು ಸಿನಿಮಾದುದ್ದಕ್ಕೂ ಅಚ್ಚುಕಟ್ಟಾಗಿ, ಶ್ರದ್ಧೆಯಿಂದ ನೇಯಲಾಗಿದೆ. ಇದರಿಂದ ಸಹಜವಾಗಿ ಅಂತಿಮವಾಗಿ ಅದ್ಭುತ `ಜರತಾರಿ’ ಸಿದ್ಧವಾಗಿದೆ.
ಇದನ್ನೂ ಓದಿ: ಅರ್ಜುನ್ ಯೋಗಿ-ಸಾರಿಕಾ ರಾವ್ ನಟನೆಯ ‘ಅನಾವರಣ’ ಸಿನಿಮಾದ ಮೊದಲ ಹಾಡು ರಿಲೀಸ್
ಇಲ್ಲಿ ಚಿನ್ನ-ರನ್ನ ಅನ್ನುವ ಬಣ್ಣದ ಮಾತುಗಳಿಲ್ಲ.. ಆಕೆ ಅವನನ್ನು `ಕತ್ತೆ’ ಅಂತಾಳೆ, ಆತ `ಪುಟ್ಟಿ’ ಅಂತಾನೆ.. ಎಲ್ಲಾ ಸೀದಾ ಸಾದಾ. ದೂರವಾಗುವಾಗ ಇಬ್ಬರೂ ಕೈ ಬೀಸುವುದಿಲ್ಲ.. ಟಾಟಾ ಮಾಡುವುದಿಲ್ಲ.. ಬದಲಿಗೆ ತಮ್ಮದೇ ರೀತಿಯಲ್ಲಿ ಬಾಯ್ ಹೇಳುತ್ತಾರೆ. ಆ ಬಾಯ್ ಹೇಳುವ ರೀತಿಯೇ ಮುಂದೆ.. ಸಿನಿಮಾದ ಹೈಲಟ್ ಆಗಿ ನೋಡುಗನನ್ನು ಅಳುವಿನ ಕಡಲಿಗೆ ದೂಡಿ ಬಿಡುತ್ತದೆ. ಇಲ್ಲಿ ಕಲರ್‌ಫುಲ್ ಹಾಡುಗಳಿಲ್ಲ ಕಲರ್‌ಫುಲ್ ಪಾತ್ರಗಳಿವೆ. ನಾಯಕ-ನಾಯಕಿಯ ರೊಮ್ಯಾನ್ಸ್ ಇಲ್ಲ.. ಎರಡು ಹೃದಯಗಳ ಮಾತಿದೆ.. ಇದೇ ಕಾರಣಕ್ಕೆ `ಸಪ್ತ ಸಾಗರ’ ಕುತೂಹಲದ ಆಗರವಾಗಿ ನೋಡುಗನನ್ನು ಕಾಡುತ್ತದೆ.. ಕೆದಕುತ್ತದೆ.. ಅಳಿಸುತ್ತದೆ.`ಸಪ್ತಸಾಗರದಾಚೆ ಎಲ್ಲೋ’ ಓಪನಿಂಗ್ ಕ್ರೆಡಿಟ್ಸ್ ಬಿಟ್ಟರೆ.. ಮೊದಲ ದೃಶ್ಯದಿಂದಲೇ ಕಥೆ ಆರಂಭವಾಗುತ್ತದೆ.. ಪ್ರೇಕ್ಷಕ ಇಂಟರ್‌ವರೆಗೂ ಕಾಯಬೇಕಾದ ಅಗತ್ಯವಿಲ್ಲ. ನಿರ್ದೇಶಕ ಹೇಮಂತ್ ಯಾವ ಸಿನಿಮಾ ನರೇಶನ್‌ನ ಹ್ಯಾಂಗ್‌ಓವರ್‌ಗೂ ಸಿಕ್ಕಿ ಹಾಕಿಕೊಳ್ಳದೇ ತಮ್ಮದೇ ಶೈಲಿಯ ಮೂಲಕ ಗೆದ್ದಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಅಂಶಗಳನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಮನು ತನ್ನ ಮನದ ಯಾತನೆಯನ್ನು ತೆರೆದಿಡುವ ರೀತಿ.. ಪ್ರಿಯಾ ಮನುವಿಗಾಗಿ ಹಂಬಲಿಸುವ ಪರಿ.. ಮನು `ಜೈಲ್’ನಲ್ಲಿದ್ದರೂ ಪ್ರಿಯಾ ತನ್ನ ಮನದೊಳಗೆ ಬಂಧಿಯಾಗುವ ಚಿತ್ರಣ.. ಶಂಖದೊಳಗಿನ ಕಡಲಿನ ಸದ್ದು.. `ಈಗಲೂ ಎಷ್ಟೊಂದು ದುಃಖ ಕೊಡ್ತಾನೆ ಅವ್ನು..’ ಎಂದು ಸಂತಸ ಪಡುವ ತಾಯಿ.. ಹೀಗೆ ಹಲವು ಅಂಶಗಳು ಚಿತ್ರವನ್ನು ಎತ್ತರಕ್ಕೇರಿಸಿದೆ.
ಇದನ್ನೂ ಓದಿ: `ಪರ್ಯಾಯ’ ಮಾರ್ಗ ಹುಡುಕಿಕೊಂಡವರ ಕುತೂಹಲಕಾರಿ ಕಥೆ!
ಇನ್ನು, ಈ ಸಿನಿಮಾದ ಸಂಭಾಷಣೆ ಬಗ್ಗೆ ಹೇಳಲೇ ಬೇಕು. ಇಲ್ಲಿ ಕೆಲವೊಂದು ಪಾತ್ರಗಳು ಒಂದಷ್ಟು ಬೋಧನೆಯ ಮಾತುಗಳನ್ನಾಡುತ್ತವೆ. ಆದರೆ ಅವಗಳು ಬೋಧನೆ ಅನ್ನಿಸುವುದಿಲ್ಲ. ಏಕೆಂದರೆ ಆ ಪಾತ್ರಗಳು ಆಡುವ ಪ್ರತೀ ಅಕ್ಷರಗಳು ಅವರ ಬದುಕಿನ ಪಾಠವಾಗಿರುತ್ತದೆ. ಅದೇ ರೀತಿಯಲ್ಲಿ ಅತಿ ಸರಳ, ಅತಿ ವಿರಳ ಸಂಭಾಷಣೆಗಳು ನೋಡುಗನನ್ನು ಯೋಚಿಸುವಂತೆ, ಆ ಮಾತುಗಳ ಬಗ್ಗೆ ಧ್ಯಾನಿಸುವಂತೆ ಮಾಡುತ್ತದೆ. ಅವುಗಳನ್ನು ಸಿನಿಮಾದಲ್ಲಿ ಕೇಳಿಯೇ ಅನುಭಸಬೇಕು. ಆ ಸಂಭಾಷಣೆಗಳನ್ನು ಅಕ್ಷರ ರೂಪಕ್ಕೆ ಇಳಿಸಿದರೆ ಅನ್ಯಾಯವಾದೀತು.ಚಿತ್ರದಲ್ಲಿ ಬರುವ ಅಷ್ಟೂ ಪಾತ್ರಗಳು ನೋಡುಗನನ್ನು ಒಂದಲ್ಲಾ ಒಂದು ರೀತಿಯಲ್ಲಿ ಆವರಿಸಿ ಬಿಡುತ್ತದೆ. ಪಾತ್ರಗಳು ನೋಡುಗನ ಜೀವನಾನುಭವದ ಆಧರಿಸಿ ಕನೆಕ್ಟ್ ಆಗುತ್ತಾ ಹೋಗುತ್ತದೆ. ಕೆಲವೊಂದು ಪಾತ್ರಗಳು `ಸೈಡ್-ಎ’ನಲ್ಲಿ ಪ್ರೂವ್ ಮಾಡಿ `ಸೈಡ್-ಬಿ’ನಲ್ಲೂ ಮುಂದುವರಿಯುವ ಸೂಚನೆಯನ್ನು ನಿರ್ದೇಶಕರು ಚಿತ್ರದ ಕೊನೆಯಲ್ಲಿ ನೀಡುತ್ತಾರೆ. `ಸೈಡ್-ಎ’ನಲ್ಲಿ ಇಲ್ಲದೇ ಇರುವ ಅಚ್ಚರಿ `ಸೈಡ್-ಬಿ’ನಲ್ಲಿದೆ ಎಂದು ಹೇಳುವ ಮೂಲಕ ನಿರ್ದೇಶಕರು `ಸೈಡ್-ಬಿ’ ಬಗ್ಗೆಯೂ ನಿರೀಕ್ಷೆ ಹುಟ್ಟಿಸುವಲ್ಲಿ ಸಫಲರಾಗಿದ್ದಾರೆ.
ಇದನ್ನೂ ಓದಿ: `ಜೋಗ’ದ `ಸಿನಿ’ ಬೆಳಕಿನಲ್ಲಿ ಚಿನ್ನಾರಿ ಮುತ್ತ!
`ಮನು’ ಆಗಿ ನಾಯಕ ರಕ್ಷಿತ್ ಶೆಟ್ಟಿ ಮನ ಗೆದ್ದು, ಜೀವಮಾನ ಶ್ರೇಷ್ಠ ಅಭಿನಯ ನೀಡಿದ್ದಾರೆ. ಅವರ ಈ ಹಿಂದಿನ ಯಾವುದೇ ಸಿನಿಮಾಗಳಲ್ಲಿ ಸಿಗದ ರಕ್ಷಿತ್ ಇಲ್ಲಿ ಸಿಗುತ್ತಾರೆ. ಸಿನಿಮಾ ನೋಡಿದ ಮೇಲೆ ಸ್ವತಃ ರಕ್ಷಿತ್ ಅವರೇ ತನ್ನೊಳಗಿನ ಅಸಮಾನ್ಯ ನಟನನ್ನು ಕಂಡು ಮೆಚ್ಚಿಕೊಂಡಿರಬಹುದು, ಅಷ್ಟರ ಮಟ್ಟಿ ಮನು ನೋಡುಗನ ಮನದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತಾನೆ. ಶಬ್ಧಗಳಿಲ್ಲದೇ ಮಾತನಾಡುವ ಪ್ರಯತ್ನದಲ್ಲಿ ಅಕ್ಷರಶಃ ಗೆದ್ದಿದ್ದಾರೆ ರಕ್ಷಿತ್. ಗಾಢ ಪ್ರೀತಿ, ಕಾಡುವ ಕನಸು, ಸುದೀರ್ಘ ವೇದನೆ, ಸಣ್ಣ ಭರವಸೆ, ಧುತ್ತನೆ ಎದುರಾಗುವ ಸಿಟ್ಟು.. ಹೀಗೆ ನಟನೆಗೆ ಬೇಕಾದ ಎಲ್ಲಾ ಚಾಲೆಂಜಸ್ ಇರುವ ಪಾತ್ರವನ್ನು ರಕ್ಷಿತ್ ಅದ್ಭುತವಾಗಿ ನಿಭಾಯಿಸಿದ್ದಾರೆ. `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಮತ್ತೂಂದು ಅದ್ಭುತ ಎಂದರೆ ರುಕ್ಮಿಣಿ ವಸಂತ್. `ಗ್ಲಾಮರ್ ಒಂದೇ ಅಭಿನಯದ ಸೂತ್ರ’ ಎಂದು ನಂಬಿರುವ ನಟಿ ಮಣಿಯರ ಮಧ್ಯೆ ರುಕ್ಮಿಣಿ, `ಅಭಿನಯಿಸುವುದಲ್ಲ, ಪಾತ್ರವನ್ನು ಅನುಭವಿಸುವುದು’ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಆಕ್ಟಿಂಗ್ ಮೆಥಡ್‌ನಲ್ಲಿ `ಸೆನ್ಸ್ ಮೆಮರಿ’ ಎಂಬ ಪ್ರಾಕ್ಟೀಸ್ ಇದೆ. ಆ ಪ್ರಾಕ್ಟೀಸ್ ಅನ್ನು ತನ್ನ ಅಭಿನಯಕ್ಕೆ ರುಕ್ಮಿಣಿ ಅಡಿಪಾಯ ಮಾಡಿಕೊಂಡಿರೋದು ಪ್ರಿಯಾಳನ್ನು ಪ್ರಿಯವಾಗಿಸಿದೆ. ಮೇಕಪ್‌ನ ಹಂಗಿಲ್ಲದೆ, ಕ್ಯಾಮರಾದ ಎದುರಿಸುತ್ತಿರುವ ಗುಂಗಿಲ್ಲದೆ ಕೇವಲ ಪ್ರಿಯಾಳಾಗಿ ಸಿನಿಮಾದುದ್ದಕ್ಕೂ ಕಾಣಿಸಿಕೊಂಡು ಪ್ರೇಕ್ಷಕನಿಗೆ ಕನೆಕ್ಟ್ ಆಗುತ್ತಾರೆ.
ಇದನ್ನೂ ಓದಿ: ಸದ್ದು ಮಾಡುತ್ತಿದೆ ಶಿವಣ್ಣ, ದರ್ಶನ್ ಮೆಚ್ಚಿದ ‘ಫ್ರೀಡಮ್’ ಅಲ್ಬಮ್ ಸಾಂಗ್
ನಟ ರಮೇಶ್ ಇಂದಿರಾ ಪಾತ್ರ ಪೋಷಣೆ ಅದ್ಭುತವಾಗಿದೆ. ಅವರ ಒಂದು ಪುಟ್ಟ ನಗು ಕೂಡ ನೋಡುಗನನ್ನು ಕೆಣಕುತ್ತದೆ. ಉಳಿದಂತೆ ಅಚ್ಯುತ್ ಕುಮಾರ್, ರವಿ ಭಟ್, ಗೋಪಾಲ ದೇಶಪಾಂಡೆ, ಶರತ್ ಲೋಹಿತಾಶ್ವ, ಅವಿನಾಶ್ ಪಾತ್ರಗಳು ಸಿನಿಮಾದ ಕಥೆಗೆ ಪೂರಕವಾಗಿವೆ. ಇಂತಹ ವಿಭಿನ್ನ ನರೇಶನ್‌ನ ಚಿತ್ರಕ್ಕೆ ಸಂಗೀತ ನಿರ್ದೇಶಕ ಚರಣ್ ರಾಜ್ ಸೂಕ್ತ ಸಂಗೀತವನ್ನು ನೀಡಿದ್ದಾರೆ. ಸಂಗೀತ ಹೇಗಿದೆಯೆಂದರೆ, ಪಾತ್ರದ ಯಾವುದೇ ಸಂಭಾಷಣೆ, ಭಾವನೆಯನ್ನು ಡಿಸ್ಟçಬ್ ಮಾಡುವುದಿಲ್ಲ. ಅವರಿಗೆ `ತನ್ನ ಸಂಗೀತ ಕೇಳಿಸುವುದಕ್ಕಿಂತ ಪಾತ್ರ ನೋಡುಗನಿಗೆ ತಾಕಬೇಕು’ ಅನ್ನುವ ಅವರ ಉದ್ದೇಶ ಈಡೇರಿದೆ. ಛಾಯಾಗ್ರಾಹಕ Advaitha Gurumurthy, ಯಾವುದೇ ಎಕ್ಸೆಪರಿಮೆಂಟ್ ಮಾಡದೇ, ಕಥೆಯ ಅಗತ್ಯತೆಯನ್ನು ಅರ್ಥ ಮಾಡಿಕೊಂಡು ಅತ್ಯಂತ ಸಹಜವಾಗಿ ಕಥೆ ತೋರಿಸಿದ್ದಾರೆ. ಈ ಕಥೆಗೆ ಅದೇ ಬೇಕಾಗಿತ್ತು ಕೂಡ. ಸುನೀಲ್ ಭರಧ್ವಾಜ್ ಅವರೊಡಗೂಡಿ ನಿರ್ದೇಶಕ ಹೆಮಂತ್ ರಾವ್ ಮಾಡಿರುವ ಸಂಕಲನ ಚಿತ್ರದ ಪಾತ್ರ ನೋಡುಗನಿಗೆ ಹತ್ತಿರವಾಗುವುದರಲ್ಲಿ ಮಹತ್ವದ ಪಾತ್ರ ವಹಿಸಿದೆ. ಏಕೆಂದರೆ, `ಲ್ಯಾಗ್’ ಬಗ್ಗೆ ತಲೆಕೆಡಿಸಿಕೊಂಡಿದ್ದರೆ ಭಾವಾನಾತ್ಮಕ ದೃಶ್ಯಗಳ ಮಂಕಾಗುತ್ತಿದ್ದವು. ಕೊನೆಯದಾಗಿ, ಜೈಲ್‌ನಲ್ಲಿದ್ರೂ ಮನು hair style ಕಾಲೇಜ್ ಹುಡುಗನ ಥರ ಇರುತ್ತೇ.. ಎಲ್ಲೂ ಮನುವಿನ ಬ್ಯಾಕ್‌ರೌಂಡ್ ಬಗ್ಗೆ ಹೇಳಿಲ್ಲ.. ಜೈಲ್ ಬಗ್ಗೆ ಟೂರಿಸ್ಟ್ ಗೈಡ್ ಥರ ಹೇಳ್ತಾ ಹೋಗೋದ್ ಬೋರ್ ಆಗಲ್ವಾ.. ಎಂಬ ತಗಾದೆಗಳು ಬರಬಹುದು. ಅವುಗಳನ್ನು `ಮೊಸರಲ್ಲಿ ಕಲ್ಲು ಹುಡುಕುವುದು’ ಅಂತoದುಕೊoಡು ಸುಮ್ಮನಿದ್ದುಬಿಡಬೇಕು. `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾವನ್ನು ಓ.ಟಿ.ಟಿ ಬರೋ ಮೊದಲು ಥೀಯೆಟರ್‌ನಲ್ಲೇ ನೋಡಿ.. ಏಕೆಂದರೆ ಕಡಲಿನ ಭೋರ್ಗರೆತ ನಿಮ್ಮ ಮನಸ್ಸಲ್ಲೂ ಉಂಟಾಗುತ್ತದೆ. ಆ ಒಂದು ಅನೂಹ್ಯ ಅನುಭವವನ್ನು ಮಿಸ್ ಮಾಡಿಕೊಳ್ಳಬೇಡಿ.
-ಬಿ.ನವೀನ್‌ಕೃಷ್ಣ.ಪುತ್ತೂರು