Sandalwood Leading OnlineMedia

‘Sanju Weds Geetha 2’ movie review: ನೂಲಿನಂತೆ ಸೀರೆ, ನಿರ್ದೇಶಕರಂತೆ ಸಿನಿಮಾ!

 

 

ಚಿತ್ರ: ಸಂಜು ವೆಡ್ಸ್ ಗೀತಾ- ೨

ನಿರ್ದೇಶನ: ನಾಗಶೇಖರ್

ನಿರ್ಮಾಣ: ಛಲವಾದಿ ಕುಮಾರ್

ಚಿತ್ರಕಥೆ/ಸಂಭಾಷಣೆ ; ಡಿ.ಜೆ.ಚಕ್ರವರ್ತಿ

ತಾರಾಗಣ: ಶ್ರೀನಗರ ಕಿಟ್ಟಿ, ರಚಿತಾ ರಾಮ್, ಸಂಪತ್ ರಾಜ್, ಚೇತನ್ ಚಂದ್ರ, ತಬಲಾ ನಾಣಿ, ಸಾಧು ಕೋಕಿಲ, ರಂಗಾಯಣ ರಘು

 

ಸಂಜು ಸೀರೆ ನೇಯುವ ಮುಗ್ಧ, ಗೀತಾ ಅಗರ್ಭ ಶ್ರೀಮಂತ ಸ್ನಿಗ್ಧ ಸುಂದರಿ. ಸೀರೆ ಕಾರಣಕ್ಕೆ ಸಂಧಿಸುವ ಇವರಿಬ್ಬ ಪ್ರೇಮಕ್ಕೆ ಗೀತಾಳ ತಂದೆಯೇ ವಿಲನ್ ಆದರೂ ಅವರನ್ನು ಧಿಕ್ಕರಿಸಿ ಮದುವೆಯಾಗಿ ಅಮರ ಪ್ರೇಮಿಗಳಾಗುತ್ತಾರೆ. ಇಂತಹ ಅಮರ ಪ್ರೇಮಿಗಳ ನಡುವೆ `ವಿಷ’ ಹಿಂಡುವ ತಂದೆಯ ಮುಂದೆ ಇವರಿಬ್ಬರೂ ಬಾಳಿ ಬದುಕುತ್ತಾರಾ? ಗೀತಾಳ ಬಹುದಿನದ ಕನಸ್ಸನ್ನು ಸಂಜು ಈಡೇರಿಸುತ್ತಾನಾ? ಎಂಬುದೇ ಚಿತ್ರದ ಕಥೆ.

 

                                         ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ Max Movie Review: ತಲೆಗೆ ಹೊಕ್ಕಿದ ಬೋಧನೆಯ `ಹುಳ’ಕ್ಕೆ ರಂಜನೆಯ ಲಸಿಕೆ!

 

ಚಿತ್ರದ ಆರಂಭದಲ್ಲಿಯೇ `ನಿದ್ರೇಸಕರು’ ಮಳೆಯ ಸದ್ದು ಮಾತ್ರ ಕೇಳಿಸಿ ಪ್ರೇಕ್ಷಕನನ್ನು ನಿದ್ರೆಗೆ ದೂಡುತ್ತಾರೆ. ಅದಕ್ಕೆ ಕಾರಣ ಪ್ರೇಕ್ಷಕ ಎಚ್ಚರವಿದ್ದರೆ ಟೈಟಲ್ ಕಾರ್ಡ್ನಲ್ಲಿ ಪ್ರಮಾದವನ್ನು ಗಮನಿಸುತ್ತಾನೆ ಎಂದು. ಹೆಂಗಿದೆ ಲಾಜಿಕ್! ಅದಕ್ಕೆ ಒಂದು ಉದಾಹರಣೆ ತಬಲಾ ನಾಣಿಯನ್ನು `ನಿದ್ರೇಸಕರು’ ನಾನಿ ಮಾಡಿದ್ದಾರೆ.  ಮಳೆ ಸೌಂಡ್ ಮುಗಿದ ಮೇಲೆ.. ಮಳೆಯ ದೃಶ್ಯ ಮುಂದುವರಿದು ಒಂದು ಅದ್ಭುತ ಸಾಂಗ್‌ನೊ0ದಿಗೆ ಕಥೆ ತೆರೆದುಕೊಳ್ಳುತ್ತದೆ. ಮದುವೆಯ 10ನೇ ವಾರ್ಷಿಕೋತ್ಸವಕ್ಕೆ ಮುದ್ದಿನ ಹೆಂಡತಿಗೆ ಸಂಜು, ತಾನೇ ನೇಯ್ದ ಸೀರೆ, ಅದರ ಜೊತೆ ಎರಡು ಗೊಂಬೆ, ರೋಲ್ಸ್ ರಾಯ್ಸ್ ಕಾರು ಕೊಟ್ಟು,  ಹೆಲಿಕಾಪ್ಟರ್‌ನಲ್ಲಿ ಹೈದರಾಬಾದ್‌ಗೆ ಕರೆಸಿಕೊಳ್ಳುತ್ತಾನೆ. ತಾನಿರುವ ಜಾಗಕ್ಕೆ ಮುದ್ದಿನ ಹೆಂಡತಿಯನ್ನು ಕರೆಸಿಕೊಳ್ಳುವ ಹಾದಿಯಲ್ಲಿ ‘ಇತ್ತೀಚೆಗೆ ನೀನು ಯಾರ ಜೊತೆಗೆ ಗಂಟೆಗಟ್ಟಲೆ ಮಾತಾಡುತ್ತಿದ್ದೀಯ?’ ಎಂದು ಕೇಳುವ ಮೂಲಕ ಕಥೆಗೆ ಒಂದು ಟ್ವಿಸ್ಟ್ ಕೊಡುತ್ತಾನೆ. ಇದನ್ನು ಕೇಳಿ ಗೀತಾ ಕಣ್ಣಿರೀಟ್ಟರೆ, ಪ್ರೇಕ್ಷಕರು ದಂಗಾಗುತ್ತಾರೆ. ಈ ಅಮರ ಪ್ರೇಮಿಗಳ ದಾಂಪತ್ಯಕ್ಕೆ ಲೆಮೆನ್ ಹಿಂಡುತ್ತಿರುವವರು ಯಾರು? ಎಂಬ ಉತ್ತರಕ್ಕೆ ‘ಸಂಜು ವೆಡ್ಸ್ ಗೀತಾ 2’ ನೋಡಬೇಕು.

 

ನಾಗಶೇಖರ್ ಚಿತ್ರಗಳೆಂದರೆ ಅಲ್ಲೊಂದು ನವಿರಾದ ಪ್ರೇಮಕಥೆ, ಕಾಡುವ ಸೆಂಟಿಮೆ0ಟ್, ಊಹೆಗೆ ನಿಲುಕದ ಟ್ವಿಸ್ಟ್, ಜನಪರ ಧ್ವನಿ.. ಎಲ್ಲವೂ ಇರುತ್ತದೆ. ‘ಸಂಜು ವೆಡ್ಸ್ ಗೀತಾ 2’ನಲ್ಲೂ ಕೂಡ ಎಲ್ಲವೂ ಇದೆ, ಆದರೆ ಮನಸ್ಸಿಗೆ ನಾಟುವುದಿಲ್ಲ.  ಒಂದು ರೀತಿಯಲ್ಲಿ ಎಲ್ಲಾ ಇದ್ದು, ಎನೂ ಇಲ್ಲ ಅನ್ನವು ಭಾವ. ಪಾರ್ಟ್-2ಗಳ ಟ್ರೆಂಡ್‌ಗಾಗಿಯೋ,  ಮೊದಲ ಚಿತ್ರದ ಜನಪ್ರಿಯತೆಯ ಪ್ರೇರಣೆಯಿಂದಲೋ ಚಿತ್ರ ಮಾಡಿ ತನ್ನದೇ ಮೊದಲ ಚಿತ್ರಕ್ಕೆ ಮೋಸ ಮಾಡಿದ್ರಾ? ಮಧುರವಾದ ಹಾಡುಗಳು, ಕಣ್ಸೆಳೆಯುವ ದೃಶ್ಯಗಳಿಗಷ್ಟೇ ಪ್ರೇಕ್ಷಕ ಉಘೇ ಅಂದು ಬಿಡುತ್ತಾನೆ ಅನ್ನುವ ಓವರ್ ಕಾನ್ಫಿಡೆನ್ಸಾ?

 

ಚಿತ್ರದಲ್ಲಿ ಕಥೆಯನ್ನು `ನಿದ್ರೇಸಕರು’ ಫಾಸ್ಟ್ ಆಗಿ ಹೇಳಿದರೂ ಸಿನಿಮಾ ತುಂಬಾ ಸ್ಲೋ ಅನ್ನಿಸುತ್ತದೆ. ರೇಷ್ಮೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯಗಳನ್ನು ತರೆದಿಡುವ ದೃಶ್ಯಗಳು ಡಾಕ್ಯುಮೆಂಟರಿ ಥರ ಕಾಣುತ್ತವೆ. ರೇಷ್ಮೆ ಬೆಳೆಗಾರರ ಜೀವನ ರೂಪಿಸಲು ನಾಯಕ-ನಾಯಕಿ ಮುಂದಾಗಿ, ಇದ್ದಕ್ಕಿದ್ದ ಹಾಗೆ ಉದ್ದ ಗಡ್ಡ ಬಿಟ್ಟುಕೊಂಡು ಓಪನ್ ಬೆನ್ಸ್ನಲ್ಲಿ ಓಡಾಡುವ ಸಂಜುವಿನ success story ಎಲ್ಲಿಯೂ ಇಲ್ಲ! ಡಿ.ಜೆ ಚಕ್ರವರ್ತಿಯವರ ಸಂಭಾಷಣೆ, ಚಿತ್ರಕಥೆಯನ್ನು `ನಿದ್ರೇಸಕರು’ ಪರಿಣಾಮಕಾರಿಯಾಗಿ ತೆರೆಯ ಮೇಲೆ ತಂದಿದ್ದೇ ಆದರೆ ನಿಜಕ್ಕೂ 2025ರ ಸೂಪರ್ ಹಿಟ್ ಚಿತ್ರ ಇದಾಗುತ್ತಿತ್ತು. ಆದರೆ ಬರಹಗಾರರಿಗಿಂತ ದೃಶ್ಯ ವೈಭವ ಮತ್ತು ಸಂಗೀತ ಮೂಲಕವಷ್ಟೇ ಸಿನಿಮಾವನ್ನು ಗೆಲ್ಲಿಸಿಬಿಡಬಲ್ಲೆ ಅನ್ನುವ ಮನೋಭಾವ ಇಲ್ಲಿ ಮುಳುವಾಗುವುದರ ಜೊತೆಗೆ ಡಿ.ಜೆ ಚಕ್ರವರ್ತಿಯಂತಹ ಸಮರ್ಥ ಬರಹಗಾರರಿಗೂ ನ್ಯಾಯ ಸಂದಿಲ್ಲ.

 

ಅಭಿನಯದ ವಿಚಾರಕ್ಕೆ ಬರುವುದಾದರೆ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ತಮ್ಮ ಪಾತ್ರದ ಬಗ್ಗೆ ಇನ್ನಷ್ಟು ಆಳಕ್ಕೆ ಇಳಿಯಬೇಕಿತ್ತು ಎಂದು ಭಾಸವಾಗುತ್ತದೆ. ಸಂಪತ್ ರಾಜ್ ಎಂದಿನ0ತೆ ಡೈಲಾಗ್‌ ಅಚ್ಚುಕಟ್ಟಾಗಿ ಒಪ್ಪಿಸಿದ್ದಾರೆ. ವಿನೋದ್ ಗೊಬ್ಬರಗಾಲ ಮತ್ತು ಸಾಧು ಕೋಕಿಲ ಕಪಿ ಚೇಷ್ಟೇಗೆ ದೊಡ್ಡ ನಮಸ್ಕಾರ. ಚೇತನ್ ಚಂದ್ರ ಡಾಕ್ಟರ್ ಎಂಬುದನ್ನೂ ಇಡೀ ಪ್ರಪಂಚದಲ್ಲಿ `ನಿದ್ರೇಸಕರು’ ಮಾತ್ರ ಒಪ್ಪಿಕೊಳ್ಳಬೇಕು. ರಂಗಾಯಣ ರಘು ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ. ಆದರೆ, ನಟ ತಬಲಾ ನಾಣಿ ಸಿಕ್ಕ ಅವಕಾಶವನ್ನು ಆಕಾಶ ಎಂದುಕೊ0ಡು ಪಾತ್ರವೇ ತಾವಾಗಿ ಅಭಿನಯಿಸಿದ್ದಾರೆ. 

 

ಶ್ರೀಮಂತಿಕೆ ಮತ್ತು ಅದ್ಧೂರಿತನಕ್ಕೆ ಕೊಟ್ಟ ಮಹತ್ವವನ್ನು ಚಿತ್ರಕಥೆ ಮತ್ತು ಅಭಿನಯಕ್ಕೂ ಕೊಟ್ಟಿದ್ದರೆ, ಚಿತ್ರ ಇನ್ನಷ್ಟು ನೋಡೆಬಲ್ ಆಗುತ್ತಿತ್ತು. ಸತ್ಯ ಹೆಗಡೆ ಛಾಯಾಗ್ರಹಣ `ನಿದ್ರೇಸಕರ’ ಬೇಜಾವಾಬ್ದರಿತನದ ನಡುವೆ ಸಾಕಷ್ಟು ರಿಲೀಫ್ ಕೊಟ್ಟರೆ, ಶ್ರೀಧರ್ ಸಂಭ್ರಮ್ ಅವರ ಸಂಗೀತ ನಿಜಕ್ಕೂ ಒಂದು ಸಂಭ್ರಮ. ಕವಿರಾಜರ ಸಾಹಿತ್ಯ ಹಿತವಾಗಿದೆ. ನಿರ್ಮಾಪಕ ಛಲವಾದಿ ಕುಮಾರ್ ಛಲ ಹಿಡಿದು ರಿಲೀಸ್ ಮಾಡಿದ ಚಿತ್ರ ತೆರೆಯ ಮೇಲೆ ಅದ್ಧೂರಿಯಾಗಿ ಮೂಡಿಬಂದಿದೆ. ಆದರೆ, ಇವೆಲ್ಲವನ್ನೂ ಒಗ್ಗೂಡಿಸುವ ಒಂದು ಗಟ್ಟಿತನದ ಫ್ರೇಮ್ ಮಿಸ್ ಆಗಿದೆ. ಈ ಹಿಂದೆ `ಗುಡಿ’ ಕಟ್ಟಲು ಹೋಗಿ ದೊಡ್ಡ ಪ್ರಮಾದ ಮಾಡಿದ್ದ `ನಿದ್ರೇಸಕರು’ ಈ ಬಾರಿ ಅದ್ಯಾವುದೂ ಮಾಡಿಲ್ಲ ಅನ್ನುವುದು ದೊಡ್ಡ ರಿಲೀಫ್! ಹಾಗಿದ್ದರೆ ಚಿತ್ರ ಹೀಗಿದ್ದರೂ `ತ್ರಿ ಸ್ಟಾರ್’ ಯಾಕೆಂದರೆ, ಛಲವಾದಿ ಕುಮಾರ್, ಡಿ.ಜೆ ಚಕ್ರವರ್ತಿ, ಸತ್ಯ ಹೆಗಡೆ, ಶ್ರೀಧರ್ ಸಂಭ್ರಮ್ ಮತ್ತು ತಬಲಾ ನಾಣಿಯವರ ಸಿನಿಮಾ ಬದ್ಧತೆಗೆ.

 

Share this post:

Related Posts

To Subscribe to our News Letter.

Translate »