ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಜೀವನದ ಅತೀ ಸಂಕಷ್ಟಕರ ಅಧ್ಯಾಯವೊಂದನ್ನು ಬಹಿರಂಗಪಡಿಸಿದ್ದಾರೆ. ಅವರು 7.5 ವರ್ಷಗಳ ಕಾಲ ಅಪರೂಪದ ಟ್ರೈಜಿಮಿನಲ್ ನ್ಯೂರಾಲ್ಜಿಯಾ (Trigeminal Neuralgia) ಎಂಬ ನರಶೂಲೆಯಿಂದ ಬಳಲಿದರು. ಈ ಕಾಯಿಲೆಯಿಂದ ಬಂದ ನೋವನ್ನು ವಿವರಿಸುತ್ತಾ, “ಅಂತಹ ನೋವು ಶತ್ರುವಿಗೂ ಬರಬಾರದು” ಎಂದು ಸಲ್ಲು ಹೇಳಿಕೊಂಡರು.

ಪ್ರೈಮ್ ವಿಡಿಯೋದಲ್ಲಿ ಬರಲಿರುವ ‘ಟೂ ಮಚ್’ ಟಾಕ್ ಶೋದಲ್ಲಿ ಆಮಿರ್ ಖಾನ್ ಜೊತೆ ಮಾತನಾಡಿದ ಸಲ್ಮಾನ್, ತಮ್ಮ ನೋವಿನ ಅನುಭವಗಳನ್ನು ಹಂಚಿಕೊಂಡರು. “ನೋವು ಪ್ರತಿ 4-5 ನಿಮಿಷಗಳಿಗೊಮ್ಮೆ ಬರುತ್ತಿತ್ತು. ಮಾತನಾಡುವಾಗ ಇದ್ದಕ್ಕಿದ್ದಂತೆ ಚುಚ್ಚುವಂತ ನೋವು ತಟ್ಟುತ್ತಿದ್ದಿತು. ಬೆಳಗಿನ ಉಪಹಾರ ತಿನ್ನಲು ಒಂದೂವರೆ ಗಂಟೆ ಬೇಕಾಗುತ್ತಿತ್ತು. ಕೆಲವೊಮ್ಮೆ ನೇರವಾಗಿ ಊಟಕ್ಕೆ ಹೋಗುತ್ತಿದ್ದೆ. ಆಮ್ಲೆಟ್ ಕತ್ತರಿಸಿ ತಿನ್ನುವಷ್ಟು ಸಹ ಸಾಧ್ಯವಾಗುತ್ತಿರಲಿಲ್ಲ” ಎಂದು ಅವರು ಹೇಳಿದರು.

ಆ ಸಮಯದಲ್ಲಿ ಜನರು ಸಲ್ಮಾನ್ ಹಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ಭಾವಿಸಿದ್ದರು. ಆದರೆ ಸತ್ಯ ಬೇರೆ. ಅವರು ದಿನಕ್ಕೆ 750 ಎಂಜಿ ಪೇನ್‌ಕಿಲ್ಲರ್ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಿದ್ದರೂ, ನೋವು ಕಡಿಮೆಯಾಗುತ್ತಿರಲಿಲ್ಲ. ಈ ಕಾಯಿಲೆಯ ಪ್ರಾರಂಭವು ‘ಪಾರ್ಟ್ನರ್’ ಸಿನಿಮಾದ ಶೂಟಿಂಗ್ ವೇಳೆ ಗಮನಕ್ಕೆ ಬಂದಿತಂತೆ. ಸಹನಟಿ ಲಾರಾ ದತ್ತಾ ಅವರ ಮುಖದಿಂದ ಕೂದಲು ಕೀಳುವಾಗ ತೀವ್ರ ನೋವು ತಟ್ಟಿದರೂ, ಆಗ ಅದನ್ನು ತಮಾಷೆಯಾಗಿ ತೆಗೆದುಕೊಂಡಿದ್ದರು.
ವೈದ್ಯರ ಪ್ರಕಾರ, ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎನ್ನುವುದು ಮುಖದ ಒಂದು ಭಾಗದಲ್ಲಿ ಆಕಸ್ಮಿಕವಾಗಿ ತೀವ್ರ ವಿದ್ಯುತ್ ಆಘಾತದಂತಿರುವ ನೋವು ಉಂಟುಮಾಡುವ ದೀರ್ಘಕಾಲದ ಕಾಯಿಲೆ. ಸಂಪೂರ್ಣ ಗುಣಮುಖವಾಗದಿದ್ದರೂ, ವೈದ್ಯಕೀಯ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಳ ಮೂಲಕ ನೋವನ್ನು ನಿಯಂತ್ರಿಸಬಹುದು.
ಸಲ್ಮಾನ್ ಖಾನ್ ಅವರ ಹೋರಾಟವು ಕೇವಲ ದೈಹಿಕ ಪರೀಕ್ಷೆಯಲ್ಲ, ಮಾನಸಿಕ ಶಕ್ತಿಯೂ ಹೌದು. ಇಂದು ಅವರು ಹೇಳುವ ಪ್ರತಿಯೊಂದು ಮಾತು ಅವರ ಬದುಕಿನ ಹೋರಾಟದ ಸಾಕ್ಷಿಯಾಗಿದೆ.
