ಬಾಲಿವುಡ್ನ ಸ್ಟಾರ್ ನಟರಾದ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಬ್ಬರ ಕಾಂಬಿನೇಷನ್ಗೆ ದೊಡ್ಡ ಪ್ರೇಕ್ಷಕವರ್ಗ ಇದೆ. ಹಿಂದಿ ಸಿನಿಮಾದಲ್ಲಿ ಅವರಿಬ್ಬರು ಜೊತೆಯಾಗಿ ನಟಿಸಿದರೆ ಭಾರಿ ಹೈಪ್ ಸೃಷ್ಟಿ ಆಗುತ್ತದೆ. ಹಾಗಿರುವಾಗ ಹಾಲಿವುಡ್ ಸಿನಿಮಾದಲ್ಲಿ ಅವರಿಬ್ಬರು ತೆರೆ ಹಂಚಿಕೊಂಡರೆ? ನಿರೀಕ್ಷೆಯ ಸುನಾಮಿ ಗ್ಯಾರಂಟಿ. ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡುವಂತಹ ಸುದ್ದಿ ಕೇಳಿಬಂದಿದೆ. ಹಾಲಿವುಡ್ ಸಿನಿಮಾವೊಂದರಲ್ಲಿ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಅವರಿಗೆ ಭಾರತದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲಿ ಕೂಡ ಬೇಡಿಕೆ ಇದೆ. ಹಾಗಾಗಿ ಎಲ್ಲ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಈ ನಟರನ್ನು ಹಾಲಿವುಡ್ ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಗಂತ ಅವರು ಪ್ರಮುಖ ಪಾತ್ರಗಳನ್ನು ಮಾಡುತ್ತಿಲ್ಲ. ಬದಲಿಗೆ, ಇಬ್ಬರೂ ಕೂಡ ಹಾಲಿವುಡ್ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿದೆ.
ಹಾಲಿವುಡ್ನ ಈ ಸಿನಿಮಾ ಯಾವುದು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆದರೆ ಈ ಚಿತ್ರಕ್ಕೆ ದುಬೈನಲ್ಲಿ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದ ಸಲುವಾಗಿ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಅವರು ಈಗಾಗಲೇ ದುಬೈಗೆ ಹೋಗಿದ್ದಾರೆ. ಫೆಬ್ರವರಿ 19ರ ತನಕ ಅವರಿಬ್ಬರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಅಧಿಕೃತ ನ್ಯೂಸ್ ಹೊರಬರುವುದು ಬಾಕಿ ಇದೆ.