Left Ad
ದಕ್ಷಿಣ ಭಾರತದ ಪಿವಿಆರ್ - ಐನಾಕ್ಸ್ ಮಲ್ಟಿಪ್ಲೆಕ್ಸ್ ಗಳಲ್ಲಿ "ಸಲಾರ್" ಪಾರ್ಟ್ 1: ಸೀಸ್‍ಫೈರ್" ಚಿತ್ರ ಬಿಡುಗಡೆ ಮಾಡದಿರಲು ಹೊಂಬಾಳೆ ಫಿಲಂಸ್‍ ನಿರ್ಧಾರ - Chittara news
# Tags

ದಕ್ಷಿಣ ಭಾರತದ ಪಿವಿಆರ್ – ಐನಾಕ್ಸ್ ಮಲ್ಟಿಪ್ಲೆಕ್ಸ್ ಗಳಲ್ಲಿ “ಸಲಾರ್” ಪಾರ್ಟ್ 1: ಸೀಸ್‍ಫೈರ್” ಚಿತ್ರ ಬಿಡುಗಡೆ ಮಾಡದಿರಲು ಹೊಂಬಾಳೆ ಫಿಲಂಸ್‍ ನಿರ್ಧಾರ

ಹೊಂಬಾಳೆ ಫಿಲಂಸ್‍ನ ಮಹತ್ವಾಕಾಂಕ್ಷೆಯ ಚಿತ್ರವಾದ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’, ಡಿ. 22ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಈ ಮಧ್ಯೆ, ಚಿತ್ರವನ್ನು ದಕ್ಷಿಣ ಭಾರತದ ಪಿವಿಆರ್- ಐನಾಕ್ಸ್ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡದಿರುವುದಕ್ಕೆ ಹೊಂಬಾಳೆ ಫಿಲಂಸ್‍ ತೀರ್ಮಾನಿಸಿದೆ.
ಇಂಥದ್ದೊಂದು ನಿರ್ಧಾರಕ್ಕೆ ಕಾರಣವಾಗಿರುವುದು ಶಾರುಖ್‍ ಖಾನ್‍ ಅಭಿನಯದ ‘ಡಂಕಿ’. ಈ ಚಿತ್ರವು ಡಿ. 21ರ ಗುರುವಾರ ಬಿಡುಗಡೆಯಾಗುತ್ತಿದ್ದು, ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಜೊತೆಗೆ ಕ್ಲಾಶ್‍ ಆಗುತ್ತಿದೆ. ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಏಕಪರದೆಯ ಚಿತ್ರಮಂದಿರಗಳು ಎರಡೂ ಚಿತ್ರಗಳನ್ನು ಎರಡೆರೆಡು ಪ್ರದರ್ಶನ ಮಾಡಬೇಕು ಎಂದು ತೀರ್ಮಾನಿಸಿದ್ದರು. ಆದರೆ, ‘ಡಂಕಿ’ ವಿತರಕರು ಮಾತ್ರ ತಮಗೆ ನಾಲ್ಕೂ ಪ್ರದರ್ಶನಗಳನ್ನು ಕೊಡುವುದಾದರೆ ಮಾತ್ರ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಅನುಮತಿ ನೀಡಲಾಗುವುದು ಎಂದಿದ್ದರು.ಯಾವಾಗ ಏಕಪರದೆಯ ಚಿತ್ರಮಂದಿರಗಳ ಸಂಘಗಳು ಎರಡೂ ಚಿತ್ರಗಳನ್ನು ಪ್ರದರ್ಶಿಸುವ ತೀರ್ಮಾನ ತೆಗೆದುಕೊಂಡಿತೋ, ಆಗ ‘ಡಂಕಿ’ ಚಿತ್ರದ ವಿತರಕರು ಮಲ್ಟಿಪ್ಲೆಕ್ಸ್ ನತ್ತ ವಾಲಿದರು. ಅಲ್ಲಿ ಹೆಚ್ಚು ಪ್ರದರ್ಶನಗಳನ್ನು ಗಿಟ್ಟಿಸಿದರು. ಪಿವಿಆರ್ – ಐನಾಕ್ಸ್ ಮತ್ತು ಮಿರಾಜ್‍ ಮಲ್ಟಿಪ್ಲೆಕ್ಸ್ ಗಳಲ್ಲಿ ‘ಸಲಾರ್’ಗಿಂತ ‘ಡಂಕಿ’ ಚಿತ್ರಕ್ಕೆ ಹೆಚ್ಚಿನ ಪ್ರದರ್ಶನಗಳನ್ನು ಕೊಡುವುದಕ್ಕೆ ಮಲ್ಟಿಪ್ಲೆಕ್ಸ್ ಗಳು ಸಹ ಒಪ್ಪಿವೆ.


ತಮ್ಮ ಚಿತ್ರಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿರುವ ಹೊಂಬಾಳೆ ಫಿಲಂಸ್‍, ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರವನ್ನು ದಕ್ಷಿಣ ಭಾರತದ ಪಿವಿಆರ್-ಇನಾಕ್ಸ್ ಮತ್ತು ಮಿರಾಜ್‍ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನಿಸಿದೆ. ಮಿಕ್ಕಂತೆ ಬೇರೆ ಮಲ್ಟಿಪ್ಲೆಕ್ಸ್ ಚೈನ್‍ಗಳಾದ ಸಿನಿಪೊಲಿಸ್‍ ಮತ್ತು ಏಕಪರದೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.
‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಂಸ್‍ನಡಿ ವಿಜಯ್‍ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

Spread the love
Translate »
Right Ad