ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ಯಾನ್ ಇಂಡಿಯಾ ಚಿತ್ರ ‘ಸಲಾರ್’, ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಚಿತ್ರವು ಮೊದಲ ದಿನವೇ 178.7 ಕೋಟಿ ರೂ ಸಂಪಾದಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ಮಾಡಿದೆ. ಕನ್ನಡದ ನಿರ್ಮಾಣದ ಸಂಸ್ಥೆಯೊಂದು ರಾಷ್ಟ್ರೀಯ ಮಟ್ಟದಲ್ಲಿ ಇಂಥದ್ದೊಂದು ದಾಖಲೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಕನ್ನಡದಲ್ಲಿ ‘ಮಾಸ್ಟರ್ ಪೀಸ್’, ‘ರಾಜಕುಮಾರ’, ‘ಯುವರತ್ನ’, ‘ಕೆಜಿಎಫ್ 1 ಮತ್ತು 2’, ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್, ತನ್ನ ನಿರ್ಮಾಣದ ಚಿತ್ರಗಳ ಮೂಲಕ ಜಗತ್ತಿನ ಗಮನ ಸೆಳೆದಿರುವುದಷ್ಟೇ ಅಲ್ಲ, ಕನ್ನಡ ಚಿತ್ರಗಳನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಮೂಲಕ ಎಲ್ಲರ ಗಮನ ಸೆಳೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ ಅಕ್ಷಯ್ ಕುಮಾರ್ ತುಂಬಾ ಪ್ರತಿಭಾವಂತ ನಟ: ಜಾಕ್ವೆಲಿನ್ ಫೆರ್ನಾಂಡೀಸ್
‘ಸಲಾರ್’ ಪ್ಯಾನ್ ಇಂಡಿಯಾ ಚಿತ್ರವಾದರೂ, ಈ ಚಿತ್ರದ ಹಿಂದಿರುವ ತಾಂತ್ರಿಕ ತಂಡದವರೆಲ್ಲರೂ ಕನ್ನಡದವರಾಗಿದ್ದಾರೆ. ನಿರ್ಮಾಪಕರಾದ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಛಾಯಾಗ್ರಾಹಕ ಭುವನ್ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿರುವ ಹಲವು ತಂತ್ರಜ್ಞರು ಹಾಗೂ ಕಲಾವಿದರು ಈ ನೆಲದ ಮಣ್ಣಿನವರಾಗಿದ್ದು, ಇದು ಕನ್ನಡದ ಪ್ರತಿಭಾ ಸಂಪತ್ತಿನ ಒಂದು ಉದಾಹರಣೆಯಷ್ಟೇ.
‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.