ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆದ ನಂತರ ಸಂಚಲನ ಸೃಷ್ಟಿಯಾಗಿತ್ತು. ಸ್ಟಾರ್ ಮನೆಗೆ ತೆರಳಿ ಚೂರಿ ಚುಚ್ಚುವುದು ಅಂದರೆ ಸಾಮಾನ್ಯ ಮಾತಾ ? ಪೊಲೀಸರ ಮೇಲೆ ಕೂಡ ಗಂಟೆ ಉರುಳಿದಂತೆ ಒತ್ತಡ ಹೆಚ್ಚಾಗಲು ಶುರುವಾಯ್ತು. ಹೀಗಾಗಿಯೇ ಹಿಂದೆ-ಮುಂದೆ ನೋಡದ ಪೊಲೀಸರು ಆಕಾಶ್ ಕನೋಜಿಯಾ ಎಂಬ ವ್ಯಕ್ತಿಯನ್ನು ಬಂಧಿಸಿದರು. ಮರು ಮಾತನಾಡುವ ಅವಕಾಶವನ್ನು ಕೂಡ ನೀಡದೆ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದರು. ಸಾಲದಕ್ಕೆ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡಿದ್ದು ಇದೇ ವ್ಯಕ್ತಿಯೆಂದು ಫೋಟೊವನ್ನು ಕೂಡ ತೇಲಿ ಬಿಟ್ಟರು.
ದುರ್ದೈವ ಅಂದರೆ ಕರೆದುಕೊಂಡು ಬಂದ ವ್ಯಕ್ತಿಗೂ ಈ ಪ್ರಕರಣಕ್ಕೂ ಸಂಬಂಧವೇ ಇರಲಿಲ್ಲ. ಈ ವಿಚಾರ ಗೊತ್ತಾಗುವಷ್ಟರಲ್ಲಿ ಅನಾಹುತ ನಡೆದು ಹೋಗಿತ್ತು. ಕಣ್ಣೇದುರೇ ಆಕಾಶ್ ಕನೋಜಿಯಾ ಬದುಕು ಸರ್ವ ನಾಶವೂ ಆಯ್ತು. ಹೌದು, ಅಸಲಿಗೆ ಆಕಾಶ್ ಕನೋಜಿಯಾ ದುಡಿದು ತಿನ್ನುವ ಕಾರ್ಮಿಕ. ಹೊಟ್ಟೆಪಾಡಿಗಾಗಿ ಟೂರ್ಸ್ ಕಂಪನಿಯೊಂದರಲ್ಲಿ ಡ್ರೈವರ್ ಆಗಿ ಆಕಾಶ ಕೆಲಸ ಮಾಡುತ್ತಿದ್ದರು. ಹೇಗೋ ಬದುಕು ಕಟ್ಟಿಕೊಳ್ಳುತ್ತಿದ್ದ ಆಕಾಶ್ ಸದ್ಯದಲ್ಲಿಯೇ ಮದುವೆ ಕೂಡ ಆಗುವವರಿದ್ದರು. ಹುಡುಗಿಯನ್ನು ಕೂಡ ನೋಡಿದ್ದರು. ಮೊನ್ನೆಯ ದಿವಸ ತಮ್ಮ ಅಜ್ಜಿಯ ಆರೋಗ್ಯವನ್ನು ವಿಚಾರಿಸಿ ಮದುವೆಯಾಗಲಿರುವ ತನ್ನ ಹುಡುಗಿಯನ್ನು ಭೇಟಿಯಾಗಲು ತೆರಳುತ್ತಿದ್ದರು ಆಕಾಶ್ ಕನೋಜಿಯಾ. ಆದರೆ, ಇದೇ ಸಮಯದಲ್ಲಿ ಪೊಲೀಸರು ಆಕಾಶ್ ಅವರನ್ನು ಬಂಧಿಸಿದರು. ರಾಯಪುರಕ್ಕೆ ಕರೆದುಕೊಂಡು ಬಂದರು. ಈಗ ಸೈಫ್ ಅಲಿ ಖಾನ್ ಮೇಲೆ ಹಲ್ಲೆಯನ್ನು ಆಕಾಶ್ ಕನೋಜಿಯಾ ನಡೆಸಿದ್ದು ಎಂಬ ಸುದ್ದಿ ಫೋಟೊ ಸಮೇತ ಕಾಡ್ಗಿಚ್ಚಿನಂತೆ ಹಬ್ಬಿದ್ದ ಹಿನ್ನೆಲೆ ಆಕಾಶ್ ಇದ್ದ ಕೆಲಸವನ್ನು ಕೂಡ ಕಳೆದುಕೊಂಡಿದ್ದಾರೆ. ಮಾಲೀಕರಿಗೆ ಕರೆ ಮಾಡಿದರೆ ಆರೋಪಿಗಳಿಗೆ ನಮ್ಮ ಕಂಪನಿಯಲ್ಲಿ ಕೆಲಸ ಇಲ್ಲ ಎಂದು ಹೇಳಿ ಅಮಾನತ್ತು ಮಾಡಿರುವ ವಿಚಾರವನ್ನು ಹೇಳಿದ್ದಾರೆ. ಇದರಿಂದ ಮಾನಸಿಕ ಆಘಾತಕ್ಕೊಳಗಾದ ಆಕಾಶ್ ಕನೋಜಿಯಾಗೆ ಆ ನಂತರ ತನ್ನ ಮದುವೆ ಕೂಡ ಮುರಿದು ಬಿದ್ದಿದೆ ಎನ್ನುವ ಸುದ್ದಿ ಬರಸಿಡಲಿನಂತೆ ಬಂದೆರಗಿದೆ. ಹುಡುಗಿ ಮನೆಯವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಲು ಆಕಾಶ್ ಕನೋಜಿಯಾ ಪ್ರಯತ್ನ ಮಾಡಿದ್ದರಾದರೂ ಅದು ಸಾಧ್ಯವಾಗಿಲ್ಲ.
ಹೀಗಾಗಿಯೇ ಈಗ ತಮ್ಮ ಆಕ್ರೋಶವನ್ನು ಹೊರ ಹಾಕಿರುವ ಆಕಾಶ್ ಕನೋಜಿಯಾ ಪೊಲೀಸರ ತಪ್ಪಿಂದ ನನ್ನ ಬದುಕೇ ಸರ್ವನಾಶವಾಗಿದೆ ಇದಕ್ಕೆಲ್ಲ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಕರಣದಿಂದ ನನ್ನ ಕೆಲಸ ಹೋಯ್ತು, ಮದುವೆ ಮುರಿದು ಬಿತ್ತು, ನನ್ನ ಕುಟುಂಬದ ಮಾನ ಹಾನಿ ಆಯ್ತು ಎಂದು ಕಣ್ಣೀರು ಹಾಕಿದ್ದಾರೆ. ಸೈಫ್ ಅಲಿ ಖಾನ್ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣುವ ವ್ಯಕ್ತಿ ನಾನಲ್ಲ ಎಂದು ಹೇಳಿದರೂ, ಪರಿಪರಿಯಾಗಿ ಕೈ ಮುಗಿದು ಬೇಡಿಕೊಂಡರು ಕೂಡ ಪೊಲೀಸರು ನನ್ನ ಒಂದು ಮಾತನ್ನು ಕೂಡ ಕೇಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.