Sandalwood Leading OnlineMedia

 ಶಿವಣ್ಣ ಅಭಿನಯದ ‘ಸಾಗಾ ಆಫ್ ಅಶ್ವತ್ಥಾಮ’  ಬಗ್ಗೆ ನಿರ್ದೇಶಕರಿಂದಲೇ ಹೊಸ ಅಪ್ಡೇಟ್!

ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು, ಒಂದೇ ಸಮಯಕ್ಕೆ ಎರಡ್ಮೂರು ಚಿತ್ರಗಳಲ್ಲಿ ನಟಿಸುವ ಏಕೈಕ ಸ್ಟಾರ್ ನಟ ಎಂದರೆ ಸೆಂಚುರಿ ಸ್ಟಾರ್ ಶಿವ ರಾಜ್‌ಕುಮಾರ್ ಎಂದರೆ ತಪ್ಪಾಗಲಾರದು. ಹೀಗೆ ಒಟ್ಟಿಗೆ ಒಂದಕ್ಕೂ ಹೆಚ್ಚು ಚಿತ್ರಗಳಿಗೆ ಕಾಲ್ ಶೀಟ್ ಕೊಡುವ ಅಭ್ಯಾಸವಿರುವ ಶಿವ ರಾಜ್‌ಕುಮಾರ್ ಈಗಲೂ ಘೋಸ್ಟ್ ಹಾಗೂ ಕರಟಕ ದಮನಕ ಎಂಬ ಎರಡು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಘೋಸ್ಟ್ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಿದ್ದು, ಸದ್ಯ ಶಿವರಾಜ್‌ಕುಮಾರ್ ಯೋಗರಾಜ್ ಭಟ್ ನಿರ್ದೇಶನದ ಮಲ್ಟಿಸ್ಟಾರರ್ ಕರಟಕ ದಮನಕ ಚಿತ್ರದಲ್ಲಿ ಪ್ರಭುದೇವ ಜತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಘೋಸ್ಟ್ ಮುಕ್ತಾಯವಾದ ಬಳಿಕ ಶಿವಣ್ಣ ಭೈರತಿ ರಣಗಲ್ ಚಿತ್ರದಲ್ಲಿ ಬ್ಯುಸಿಯಾಗಲಿದ್ದಾರೆ. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಸ್ಯಾಂಡಲ್‌ವುಡ್ ಕಿಂಗ್ ಬ್ಯುಸಿಯಾಗಿದ್ದು, ಇವುಗಳ ಜತೆಗೆ ಇನ್ನೂ ಹಲವು ಚಿತ್ರಗಳು ಸಹ ಘೋಷಣೆಯಾಗಿವೆ. ಇನ್ನು ಶಿವ ರಾಜ್‌ಕುಮಾರ್ ಅವರ ಹಲವು ಚಿತ್ರಗಳು ಘೋಷಣೆಗೊಂಡು ನಂತರದ ದಿನಗಳಲ್ಲಿ ಚಿತ್ರೀಕರಣ ಆರಂಭವಾಗುವುದಕ್ಕೂ ಮುನ್ನವೇ ನಿಂತುಹೋದ ಉದಾಹರಣೆಗಳಿವೆ. ಅಂತಹ ಚಿತ್ರಗಳ ಸಾಲಿಗೆ ‘ಸಾಗಾ ಆಫ್ ಅಶ್ವತ್ಥಾಮ’ ಚಿತ್ರವೂ ಸೇರಿಕೊಂಡಿದೆಯಾ ಎಂಬ ಅನುಮಾನ ಶುರುವಾಗಿದೆ. ಏಕೆಂದರೆ ಸಾಗಾ ಆಫ್ ಅಶ್ವತ್ಥಾಮ ಚಿತ್ರ ಘೋಷಣೆಯಾಗಿ ಎರಡು ವರ್ಷಗಳೇ ಕಳೆದಿದ್ದರೂ ಚಿತ್ರದ ಚಿತ್ರೀಕರಣ ಆರಂಭವಾಗದೇ ಇರುವುದು.

 

ಇದನ್ನೂ ಓದಿಹಿರಿಯ ನಿರ್ದೇಶಕ ಜಿ.ಕೆ.ಮುದ್ದುರಾಜ್ ನಿರ್ದೇಶನದ “ಎಜುಕೇಟೆಡ್ ಬುಲ್ಸ್” ಆರಂಭ

ಹೌದು, ಈ ಹಿಂದೆ ರಕ್ಷಿತ್ ಶೆಟ್ಟಿಗೆ ಅವನೇ ಶ್ರೀಮನ್ನಾರಾಯಣ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಸಚಿನ್ ಬಿ ರವಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿದೆ. ಎರಡು ವರ್ಷಗಳ ಹಿಂದೆ ಶಿವರಾಜ್‌ಕುಮಾರ್ ಅವರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ವಿಶೇಷ ಪೋಸ್ಟರ್ ಹಂಚಿಕೊಂಡಿದ್ದ ಸಚಿನ್ ತಾವು ಶಿವಣ್ಣನಿಗೆ ನಿರ್ದೇಶನ ಮಾಡಲಿರುವ ಸುದ್ದಿಯನ್ನು ಖುಷಿಯಿಂದ ಹಂಚಿಕೊಂಡಿದ್ದರು. ಆದರೆ ಎರಡು ವರ್ಷ ಕಳೆದರೂ ಸಹ ಚಿತ್ರದ ಚಿತ್ರೀಕರಣ ಆರಂಭವಾಗದೇ ಇರುವುದು ಸದ್ಯ ಕೆಲವರಲ್ಲಿ ಅನುಮಾನ ಮೂಡಿಸಿದ್ದು, ಈ ಪೈಕಿ ನೆಟ್ಟಿಗನೋರ್ವ ನೇರವಾಗಿ ನಿರ್ದೇಶಕ ಸಚಿನ್ ಅವರ ಟ್ವಿಟರ್ ಖಾತೆಯನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿ ಚಿತ್ರ ಆರಂಭವಾಗುವುದರ ಕುರಿತು ಅನುಮಾನದಿಂದ ಬರೆದುಕೊಂಡಿದ್ದಾರೆ. ‘ದ ಸಾಗಾ ಆಫ್ ಅಶ್ವತ್ಥಾಮ ಒ೦ದು ಸೂಪರ್ ಹೀರೊ ಫ್ರಾಂಚೈಸ್ ಆಗಿದ್ದು, ಚಿತ್ರದಲ್ಲಿ ಪೌರಾಣಿಕ ಪಾತ್ರವೊಂದು ಈಗಿನ ಕಾಲದಲ್ಲಿ ಬದುಕುವ ಕಥೆ ಇರಲಿದೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಚಿತ್ರ ಅನೇಕ ದಿನಗಳ ಹಿಂದೆಯೇ ಶುರುವಾಗಬೇಕಿತ್ತು, ಆದರೆ ಇನ್ನೂ ಸಹ ಗ್ಯಾರೇಜ್‌ನಲ್ಲಿಯೇ ಇದೆ, ನಿರ್ದೇಶಕ ಸಚಿನ್ ಅವರು ಏನಾದ್ರೂ ಅಪ್‌ಡೇಟ್ ಕೊಟ್ರೆ ಚೆನ್ನಾಗಿರುತ್ತೆ ಎಂದೂ ಸಹ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:  `ಕೊರಗಜ್ಜ’ ಚಿತ್ರಕ್ಕೆ ಹಾಲಿವುಡ್ ತಂತ್ರಜ್ಞರ ಮೆರಗು

ಈ ಟ್ವೀಟ್‌ಗೆ ಉತ್ತರಿಸಿರುವ ಸಚಿನ್ “ಚಿತ್ರವನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಮಾಡಲು ಪ್ರಯತ್ನಿಸುತ್ತಿದ್ದೇನೆ. ಸುಮ್ಮನೆ ಅರ್ಧದಷ್ಟು ಅಪ್‌ಡೇಟ್ ನೀಡಲು ಬಯಸುವುದಿಲ್ಲ. ಎಲ್ಲವೂ ಸಿದ್ಧವಾದ ನಂತರ ನಾನು ನಿಮಗೆ ಎಲ್ಲವನ್ನೂ ತಿಳಿಸುತ್ತೇನೆ. ಕಾಳಜಿಗಾಗಿ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಚಿತ್ರದ ಕೆಲಸಗಳು ನಡೆಯುತ್ತಿದ್ದು, ಚಿತ್ರ ಸೆಟ್ಟೇರಲಿದೆ ಎಂಬ ಮಾಹಿತಿಯನ್ನು ಆದಷ್ಟು ಬೇಗ ನೀಡುವುದಾಗಿ ಸಚಿನ್ ಹೇಳಿಕೊಂಡಿದ್ದಾರೆ. ಇನ್ನು ಈ ಚಿತ್ರಕ್ಕೆ ಪುಷ್ಕರ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ.

 

 

 

Share this post:

Related Posts

To Subscribe to our News Letter.

Translate »