‘ಆರ್‌ಎಕ್ಸ್ ಸೂರಿ’ ಮತ್ತು ‘ಭೈರಾದೇವಿ’ ಚಿತ್ರಗಳ ನಿರ್ದೇಶಕ ಶ್ರೀಜೈ, ಇದೀಗ ತಮ್ಮ ಹೊಸ ಸಿನಿಮಾದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ವಿಜಯದಶಮಿಯ ಶುಭ ಸಂದರ್ಭದಲ್ಲಿ, ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿತು. ಸಮಾರಂಭವನ್ನು ಚಿತ್ರತಂಡ ಸರಳವಾಗಿ ಆಯೋಜಿಸಿತ್ತು.

ಚಿತ್ರವನ್ನು ತಾತ್ಕಾಲಿಕವಾಗಿ “ಪ್ರೊಡಕ್ಷನ್ ನಂ.1” ಎಂಬ ವರ್ಕಿಂಗ್ ಟೈಟಲ್‌ನಡಿ ಘೋಷಿಸಲಾಗಿದೆ. ಶೀಘ್ರದಲ್ಲೇ ಚಿತ್ರದ ಮುಹೂರ್ತ ನಡೆಯಲಿದ್ದು, ಅದರ ನಂತರ ಚಿತ್ರೀಕರಣ ಆರಂಭವಾಗಲಿದೆ.
ಈ ಚಿತ್ರದಲ್ಲಿ ನಾಯಕನಾಗಿ ಸಂದೀಪ್ ನಾಗರಾಜ್ ಕಾಣಿಸಿಕೊಂಡಿದ್ದಾರೆ. ಅವರು ಹಿಂದಿನ ದಿನಗಳಲ್ಲಿ ‘ಗೂಗ್ಲಿ’ ಮತ್ತು ‘ಗೋವಿಂದಾಯ ನಮಃ’ ಚಿತ್ರಗಳಲ್ಲಿ ಸಹನಟನಾಗಿ ಕಾಣಿಸಿಕೊಂಡಿದ್ದರು. ಇದೀಗ, ಹೊಸ ಚಿತ್ರದಲ್ಲಿ ಅವರು ವಿಭಿನ್ನ ಶೈಲಿಯ ಮಾಸ್ ಹೀರೋ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
‘ಭೈರಾದೇವಿ’ ನಂತರ, ನಿರ್ದೇಶಕ ಶ್ರೀಜೈ ಈಗ ಸಂಪೂರ್ಣ ಮಾಸ್ ಎಲಿಮೆಂಟ್ ಎಂಟರ್ಟೈನರ್ ಚಿತ್ರ ಮಾಡಲು ಮುಂದಾಗಿದ್ದಾರೆ.

ಚಿತ್ರವನ್ನು ಡ್ರೀಮ್ ವರ್ಲ್ಡ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರಕ್ಕೆ ಸೋಲೋಮನ್ ಛಾಯಾಗ್ರಾಹಕರಾಗಿದ್ದು, ಕೆಜಿಎಫ್ ಖ್ಯಾತಿಯ ಸಂಕಲನಕಾರ ಶ್ರೀಕಾಂತ್ ಸಂಪಾದನೆ ಮಾಡಲಿದ್ದಾರೆ. ‘ಭೈರಾದೇವಿ’ ಚಿತ್ರಕ್ಕೆ ಸಂಗೀತ ನೀಡಿದ್ದ ಸೆಂಥಿಲ್ ಪ್ರಶಾಂತ್, ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲಿದ್ದಾರೆ.
ಉಳಿದ ಕಲಾವಿದರ ಹೆಸರುಗಳನ್ನು ಚಿತ್ರತಂಡ ಮುಹೂರ್ತದ ವೇಳೆ ಘೋಷಿಸಲಿದೆ. ಚಿತ್ರತಂಡ ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸಲು ಯೋಜನೆ ರೂಪಿಸಿದೆ.
