Sandalwood Leading OnlineMedia

ಕಣ್ಮನ ಸೆಳೆಯುತ್ತಿದೆ “ರುದ್ರ ಗರುಡ ಪುರಾಣ” ಚಿತ್ರದ “ಕಣ್ಮುಂದೆ ಬಂದು” ಹಾಡು

 

ರಿಷಿ ಅಭಿನಯದ ಈ ಚಿತ್ರ ಡಿಸೆಂಬರ್ 27 ರಂದು ತೆರೆಗೆ .

ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ಹಾಗೂ ಪ್ರಸ್ತುತ ತೆಲುಗು ಚಿತ್ರರಂಗದಲ್ಲೂ ಮನೆಮಾತಾಗಿರುವ ನಟ ರಿಷಿ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ “ರುದ್ರ ಗರುಡ ಪುರಾಣ” ಚಿತ್ರದ “ಕಣ್ಮುಂದೆ ಬಂದು” ಹಾಡು ಬಿಡುಗಡೆ ಹಾಗೂ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ಹಿರಿಯ ನಟ ಅವಿನಾಶ್ ಚಿತ್ರದ ಬಿಡುಗಡೆ ದಿನಾಂಕವನ್ನು ತಿಳಿಸಿದರೆ, ಮತ್ತೊಬ್ಬ ಹಿರಿಯ ನಟ ಕೆ.ಎಸ್.ಶ್ರೀಧರ್ “ಕಣ್ಮುಂದೆ ಬಂದು” ಹಾಡನ್ನು ಅನಾವರಣಗೊಳಿಸಿದರು. ತಾವು ಕೂಡ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ತಿಳಿಸಿದ ನಟ ದ್ವಯರು ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದವರು ಮಾತನಾಡಿದರು.

READ MORE ; ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

ಪುನೀತ್ ರಾಜಕುಮಾರ್ ಸ್ಮರಣೆಯೊಂದಿಗೆ ಮಾತು ಆರಂಭಿಸಿದ ನಟ ರಿಷಿ, ಒಂದು ಚಿತ್ರ ಉತ್ತಮವಾಗಿ‌ ಬರಲು ಇಬ್ಬರು ಪ್ರಮುಖರು. ಅದು ನಿರ್ಮಾಪಕ ಹಾಗೂ ನಿರ್ದೇಶಕ. ನಮ್ಮ ಚಿತ್ರದ ನಿರ್ದೇಶಕರಾದ ನಂದೀಶ್ ಉತ್ತಮವಾದ ಕಥೆ ಮಾಡಿಕೊಂಡಿದ್ದಾರೆ. ಅವರ ಕಥೆಯನ್ನು ತೆರೆಯ ಮೇಲೆ ಯಾವುದೇ ಕೊರತೆ ಇಲ್ಲದ ಹಾಗೆ ತರಲು ನಿರ್ಮಾಪಕ ಲೋಹಿತ್ ಸಹಕಾರ ನೀಡಿದ್ದಾರೆ. ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ನನ್ನದು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ. ಕಥೆಯ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಇಂದು ಬಿಡುಗಡೆಯಾಗಿರುವ “ಕಣ್ಮುಂದೆ ಬಂದು” ಹಾಡು ಎಲ್ಲರ ಹೃದಯಕ್ಕೆ ಹತ್ತಿರವಾಗಲಿದೆ. ಚಿತ್ರ ಡಿಸೆಂಬರ್ 27 ರಂದು ಬಿಡುಗಡೆಯಾಗಲಿದೆ. ಒಂದೊಳ್ಳೆ ತಂಡದ ಜೊತೆಗೆ ಕೆಲಸ ಮಾಡಿದ ಖುಷಿ ಇದೆ ಎಂದರು. ನಾಯಕಿ ಪ್ರಿಯಾಂಕ ಕುಮಾರ್ ಸಹ ಚಿತ್ರಕ್ಕೆ ಎಲ್ಲರ ಬೆಂಬಲ ಕೋರಿದರು.

 

READ MORE ; Bagheera Review: ಸಾಮಾನ್ಯನೊಬ್ಬನ ಅಸಾಮಾನ್ಯ ಕಥೆ!

ಚಿತ್ರತಂಡದ ಎಲ್ಲರ ಸಹಕಾರದಿಂದ ನಮ್ಮ ಚಿತ್ರ ಬಿಡುಗಡೆ ಹಂತಕ್ಕೆ ಬಂದು ತಲುಪಿದೆ. ಡಿಸೆಂಬರ್ 27 ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ನಮ್ಮ ಚಿತ್ರ ಜನರಿಗೆ ತಲುಪಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ನಂದೀಶ್. ನಿರ್ಮಾಪಕ ಲೋಹಿತ್ ಅವರು ಸಹ ಚಿತ್ರತಂಡದವರಿಗೆ ಧನ್ಯವಾದ ತಿಳಿಸಿ, ಚಿತ್ರವನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿಕೊಂಡರು. ಹೆಸರಾಂತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಬಳಿ ಕಾರ್ಯ ನಿರ್ವಹಿಸಿರುವ ಕೆ.ಪಿ(ಕೃಷ್ಣಪ್ರಸಾದ್) ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಇಂದು ಬಿಡುಗಡೆಯಾದ ಹಾಡು ಹಾಗೂ ಹಾಡಿದವರ ಬಗ್ಗೆ ಕೆ.ಪಿ ಮಾಹಿತಿ ನೀಡಿದರು. ದೇವಿ ಶ್ರೀ ಪ್ರಸಾದ್ ಅವರು ವಿಡಿಯೋ ಮೂಲಕ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಚಿತ್ರದ ಛಾಯಾಗ್ರಾಹಕ ಸಂದೀಪ್ ಕುಮಾರ್, ಹಾಡು ಬರೆದಿರುವ ಮಂಜು ಮಾಂಡವ್ಯ, ಚಿತ್ರದಲ್ಲಿ ನಟಿಸಿರುವ ಅಶ್ವಿನಿ ಗೌಡ, ಶಿವರಾಜ್ ಕೆ.ಆರ್ ಪೇಟೆ, ರಾಮ್ ಪವನ್, ನಂದ, ವಂಶಿ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು “ರುದ್ರ ಗರುಡ ಪುರಾಣ”ದ ಬಗ್ಗೆ ಮಾತನಾಡಿದರು. ನಿರ್ಮಾಪಕಿ ಅಶ್ವಿನಿ ವಿಜಯ್ ಲೋಹಿತ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

 

Share this post:

Translate »