‘ಟಾಲಿವುಡ್’ಗೆ ಎಂಟ್ರಿ ಕೊಟ್ಟ ನಟ ರೂಪೇಶ್ ಶೆಟ್ಟಿ
ತುಳು ಚಿತ್ರರಂಗದಲ್ಲಿ ‘ಗಿರಿಗಿಟ್’ ಚಿತ್ರದ ಮೂಲಕ ಖ್ಯಾತಿಯ ತುದಿಗೇರಿದ ನಟ ರೂಪೇಶ್ ಶೆಟ್ಟಿ ಕನ್ನಡದಲ್ಲಿ ಇತ್ತೀಚೆಗೆ ಗೋವಿಂದ ಗೋವಿಂದ’ ಚಿತ್ರದಲ್ಲಿ ಭಾವನಾ ಮೆನನ್ ಜೊತೆಗಿನ ತಮ್ಮ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ‘ಲವ್ ಮಿ ಔರ್ ಹೇಟ್ ಮಿ’ ಚಿತ್ರದಲ್ಲಿಯೂ ಡಾರ್ಲಿಂಗ್ ಕೃಷ್ಣ ಹಾಗೂ ರಚಿತಾ ರಾಮ್ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ರೂಪೇಶ್ ಶೆಟ್ಟಿ, ಇನ್ನೊಂದೆಡೆ ತಮ್ಮದೆ ನಟನೆ ಹಾಗೂ ನಿರ್ದೇಶನದ ‘ಸರ್ಕಸ್’ ತುಳು ಚಿತ್ರದ ಷೂಟಿಂಗ್ ಮುಗಿಸಿ ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸದ ನಡುವೆ ತೆಲುಗು ಚಿತ್ರದ ಪ್ರಮುಖ ಪಾತ್ರದಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ಆ್ಯಂಟನಿ ಎಂ ನಿರ್ದೇಶನದ ಈ ಚಿತ್ರವನ್ನು ಚೇತನ್ ರಾಜ್ ಫಿಲ್ಮ್ಸ್ ನಿರ್ಮಿಸುತ್ತಿದ್ದು ಇದರಲ್ಲಿ ರೂಪೇಶ್ ಶೆಟ್ಟಿ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ತೆಲುಗು ಚಿತ್ರರಂಗಕ್ಕೆ ಕನ್ನಡದ ಮತ್ತೊಂದು ಪ್ರತಿಭೆ ತೆಲುಗಿನಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹೈದರಾಬಾದ್ ನಲ್ಲಿ ಸದ್ಯ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯಗೊಂಡಿದೆ.
ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿರುವ ‘ಮಂಕು ಭಾಯ್ ಫಾಕ್ಸಿ ರಾಣಿ’ ಕನ್ನಡ ಚಿತ್ರವೂ ಮುಂದಿನ ಆಗಸ್ಟ್ ಸೆಪ್ಟೆಂಬರ್ ನಲ್ಲಿ ತೆರೆ ಕಾಣುವ ಸಾಧ್ಯತೆಗಳಿವೆ.