ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ಗಳಾಗಿ ಅಬ್ಬರಿಸುತ್ತಿದ್ದಾರೆ. ಇಬ್ಬರ ನಡುವೆ ನಡುವೆ ಆತ್ಮೀಯ ಒಡನಾಟವಿದೆ. ಇದೀಗ ಯಶ್ ಅವರ ಮುದ್ದಾದ ಮಕ್ಕಳಿಗೆ ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ನಟನೆಯ ಕಲ್ಕಿ ಸಿನಿಮಾ ತಂಡದಿಂದ ವಿಶೇಷ ಗಿಫ್ಟ್ ಬಂದಿದೆ. ಚಿತ್ರದ ಪ್ರಮೋಷನ್ ಭಾಗವಾಗಿ ಯಶ್-ರಾಧಿಕಾ ದಂಪತಿಯ ಮಕ್ಕಳಿಗೆ ಕಲ್ಕಿ ಟೀಂ ಕೆಲವು ಗಿಫ್ಟ್ಗಳನ್ನು ಕಳುಹಿಸಿದೆ
ಇತ್ತೀಚೆಗೆ ಬುಜ್ಜಿ ವಾಹನದ ಮಾದರಿಯ ಪುಟ್ಟ ಗೊಂಬೆಯನ್ನು ನಟ ರಾಮ್ಚರಣ್ ಹಾಗೂ ಉಪಾಸನಾ ಮಗಳು ಕ್ಲಿಂಕಾರಗೆ ಚಿತ್ರತಂಡ ನೀಡಿತ್ತು. ಅದೇ ತರಹದ ಉಡುಗೊರೆ ಈಗ ಯಶ್- ರಾಧಿಕಾ ಪಂಡಿತ್ ಮಕ್ಕಳಾದ ಐರಾ ಹಾಗೂ ಯಥರ್ವ್ಗೆ ತಲುಪಿದೆ. ಈ ವಿಚಾರವನ್ನು ಸ್ವತಃ ರಾಧಿಕಾ ಪಂಡಿತ್ ಇನ್ಸ್ಟಾಗ್ರಾಮ್ನಲ್ಲಿ ಖಚಿತಪಡಿಸಿದ್ದಾರೆ. ಈ ಮೂಲಕ ಬಹಳ ವಿಭಿನ್ನವಾಗಿ ‘ಕಲ್ಕಿ 2898 AD’ ಚಿತ್ರತಂಡ ಪ್ರಚಾರ ಮಾಡುತ್ತಿದೆ.
ಬುಜ್ಜಿ ಗೊಂಬೆ ಜೊತೆಗೆ ಸಣ್ಣ ಪತ್ರವನ್ನು ಚಿತ್ರತಂಡ ಕಳುಹಿಸಿಕೊಟ್ಟಿದೆ. ರಾಧಿಕಾ ಪಂಡಿತ್ ಫೋಟೊ ಸಮೇತ ಪೋಸ್ಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಚಿತ್ರಕ್ಕಾಗಿ ಆ ವಿಶೇಷ ಕಾರ್ ಅನ್ನು ಮಹೀಂದ್ರಾ ರಿಸರ್ಚ್ ವ್ಯಾಲಿ ಹಾಗೂ ಜಯಮ್ ಆಟೋಮೋಟಿವ್ ಜಂಟಿಯಾಗಿ ನಿರ್ಮಿಸಿವೆ. 3 ಚಕ್ರಗಳ ಈ ವಾಹನದಲ್ಲಿ ಒಬ್ಬರು ಮಾತ್ರ ಕುಳಿತು ಪ್ರಯಾಣಿಸಬಹುದಾಗಿದೆ. ನಾಗಚೈತನ್ಯಾ ಇತ್ತೀಚೆಗೆ ಈ ಕಾರ್ ಏರಿ ಸುತ್ತಾಡಿದ ವಿಡಿಯೋ ವೈರಲ್ ಆಗಿತ್ತು.
ಕಲ್ಕಿ 2898 ಎಡಿ ಸಿನಿಮಾದ ಟ್ರೈಲರ್ ಜೂನ್ 10ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ. ಚಿತ್ರದಲ್ಲಿ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಜೊತೆ ಪ್ರಭಾಸ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಠಾಣಿ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಚಿತ್ರ ತಂಡ ಹೊಂದಿದೆ. ನಾಗ್ ಅಶ್ವಿನ್ ಬರೆದು ನಿರ್ದೇಶಿಸಿರುವ ಕಲ್ಕಿ ಭಾರತೀಯ ಸಿನಿ ಅಂಗಳದ ಬಹುನಿರೀಕ್ಷಿತ ಚಿತ್ರವಾಗಿದೆ. ಚಿತ್ರಕ್ಕೆ ಸಿ ಅಶ್ವಿನ್ ದತ್ 600 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಚಿತ್ರ ಜೂನ್ 27ರಂದು ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿರುವ ಹಿನ್ನೆಲೆ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಭಾಗಿಯಾಗಲ್ಲ ಎಂದು ವರದಿಯಾಗಿದೆ.