ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಹಲವರು ಇತ್ತೀಚೆಗೆ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟ, ನಿರ್ಮಾಪಕ, ನಿರ್ದೇಶಕರಾಗಿ ತಮ್ಮದೇ ರೀತಿಯಲ್ಲಿ ಕಲಾಸೇವೆ ಮಾಡಿದ್ದಾರೆ. ಈಗ ಆ ಸಾಲಿಗೆ ಡಾ.ಪಿ.ವಿ.ಆರ್ ಲೀಲಾ ಮೋಹನ್ ಸಹ ಸೇರ್ಪಡೆಯಾಗಿದ್ದಾರೆ. ಡಾ. ಲೀಲಾ ಮೋಹನ್, ಎಚ್.ಎಸ್.ಆರ್ ಲೇಔಟ್ ನಲ್ಲಿ ಪಡಿತೆಮ್ ಹೆಲ್ತ್ ಕೇರ್ ಸೆಂಟರ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅದಲ್ಲದೆ ಮಣಿಪಾಲ್, ಕೊಲಂಬಿಯಾ ಏಷ್ಯಾ, ಮದರ್ ಹುಡ್ ಮುಂತಾದ ಆಸ್ಪತ್ರೆಗಳಲ್ಲಿ ಜನರಲ್ ಫಿಸಿಶಿಯನ್ ಹಾಗೂ ಡಯಾಬಿಟಿಸ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅವರು ಇದೇ ಜೂನ್ 23ರಂದು ಬಿಡುಗಡೆಯಾಗುತ್ತಿರುವ ‘ರೋಡ್ ಕಿಂಗ್’ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ, ಕೊಲೆಯ ಬೆನ್ನು ಹತ್ತಿದ `ಆರಂಭ’!
‘ರೋಡ್ ಕಿಂಗ್’, ಲೀಲಾ ಮೋಹನ್ ಅವರ ಮೊದಲ ಚಿತ್ರವೇನಲ್ಲ. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಗಡಿಯಾರ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು, ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಉಗ್ರಾವತಾರ’ ಚಿತ್ರದಲ್ಲಿ ಸೈಕೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನಾಯಿ ಇದೆ ಎಚ್ಚರಿಕೆ’, ‘ಪುಟಾಣಿ ಪಂಟರ್ ಗಳು’ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಕನ್ನಡವಲ್ಲದೆ ತೆಲುಗಿನ ‘ಕಲ್ಯಾಣಮಸ್ತು’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾದರೂ ನಟನೆ ಎನ್ನುವುದು ಪ್ಯಾಶನ್ ಎನ್ನುವ ಲೀಲಾ ಮೋಹನ್, ‘ಚಿಕ್ಕಂದಿನಿಂದ ನಟಿಸುವ ಆಸಕ್ತಿ ಇತ್ತು. ಈ ಟಿವಿ ಕನ್ನಡದ ‘ಬದುಕು’ ಧಾರಾವಾಹಿಯಲ್ಲಿ ನಟಿಸಿದ್ದೆ. ಆಮೇಲೆ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗದಲ್ಲಿ ತೊಡಗಿಸಿಕೊಂಡಿದ್ದರಿಂದ ನಟನೆಯಿಂದ ದೂರ ಉಳಿಯಬೇಕಾಯಿತು. ಆ ನಂತರ ಲಾಫಿಂಗ್ ಪೀಕಾಕ್ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭಿಸಿ ಕಿರುಚಿತ್ರಗಳಲ್ಲಿ ನಟಿಸಿದ್ದೆ. ಕೆಲವು ಮ್ಯೂಸಿಕ್ ಆಲ್ಬಂ ನಿರ್ಮಾಣದಲ್ಲೂ ತೊಡಗಿಸಿಕೊಂಡೆ. ಕಳೆದ ಕೆಲವು ವರ್ಷಗಳಿಂದ ಪುನಃ ಅಭಿನಯದಲ್ಲಿ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರೆ.
ಇದನ್ನೂ ಓದಿ: FTII ವಿಧ್ಯಾರ್ಥಿ ಜೊತೆ ತಮನ್ನಾ ಹಸೆಮಣೆಗೆ!?
ಹಾಲಿವುಡ್ ನಿರ್ದೇಶಕ Randy Kent ನಿರ್ದೇಶನದ ‘ರೋಡ್ ಕಿಂಗ್’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಡಾ. ಲೀಲಾ ಮೋಹನ್, ಅದೇ ನಿರ್ದೇಶಕರ ‘ರೋಡ್ ಕಿಂಗ್ 2’ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಈ ಚಿತ್ರದ ಘೋಷಣೆ ಸದ್ಯದಲ್ಲೇ ಆಗಲಿದೆ. ವೈದ್ಯಕೀಯ ವೃತ್ತಿ, ನಟನೆಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿರುವ ಡಾ. ಲೀಲಾ ಮೋಹನ್ ಅವರ ಸೇವೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಅವರಿಗೆ ರಾಷ್ಟ್ರೀಯ ರತ್ನ, ಸಾಧಕ ರತ್ನ, ಕರ್ನಾಟಕ ರತ್ನಶ್ರೀ, ವರ್ಷದ ಕನ್ನಡ ರತ್ನ, ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.