ಹೆಸರಾಂತ ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ನಿರ್ಮಿಸಿರುವ, ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ, ಬಹು ನಿರೀಕ್ಷಿತ “ಕಾಂತಾರ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿರುವ ಈ ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
“ಕಾಂತಾರ” ಎಂದರೆ ನಿಗೂಡವಾದ ಕಾಡು. ಪ್ರಕೃತಿ ಹಾಗೂ ಮನುಷ್ಯನ ನಡುವಿನ ಅವಿನಾಭಾವ ಸಂಬಂಧವನ್ನು ಜಾನಪದ ಸೊಗಡಿನ ಮೂಲಕ ತೋರಿಸುವ ಪ್ರಯತ್ನ ಈ ಚಿತ್ರದಲ್ಲಾಗಿದೆ. ಭೂಮಿಯ ಸುತ್ತ ಈ ಕಥೆ ನಡೆಯುತ್ತದೆ. ದಕ್ಷಿಣ ಕನ್ನಡದ ಭೂಮಿ, ಪರಶುರಾಮ ಸೃಷ್ಟಿ ಎಂದೆ ಪ್ರಸಿದ್ದಿ. ಈ ಭಾಗದಲ್ಲಿ ನಡೆಯುವ ದೈವಾರಾಧನೆ, ಕಂಬಳ ಮುಂತಾದ ಜಾನಪದ ಕ್ರೀಡೆಗಳನ್ನು “ಕಾಂತಾರ” ಚಿತ್ರದಲ್ಲಿ ನೋಡುವುದೆ ಕಣ್ಣಿಗೆ ಹಬ್ಬ.. ಟ್ರೇಲರ್ ನಲ್ಲೇ ಇಷ್ಟು ಕುತೂಹಲ ಮೂಡಿಸಿರುವ “ಕಾಂತಾರ” ಚಿತ್ರ ಇದೇ ತಿಂಗಳ 30ರಂದು ಬಿಡುಗಡೆಯಾಗುತ್ತಿದೆ.
ಶಿವ ಹಾಗೂ ಮುರಳಿಧರ ಎಂಬ ಮುಖ್ಯಪಾತ್ರಗಳಿದ್ದು, ಶಿವನಾಗಿ ರಿಷಬ್ ಶೆಟ್ಟಿ, ಮುರಳಿಧರ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ” ಚಿತ್ರದ ನಂತರ ರಿಷಬ್ ಶೆಟ್ಟಿ ಮತ್ತೊಂದು ಸಾಮಾಜಿಕ ಕಳಕಳಿಯುಳ್ಳ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಡು, ಟ್ರೇಲರ್ ನಿಂದ ಈಗಾಗಲೇ ಜನಮನ ಗೆದ್ದಿರುವ “ಕಾಂತಾರ” ಚಿತ್ರದ ಬಿಡುಗಡೆಗಾಗಿ ಕನ್ನಡ ಕಲಾರಸಿಕರು ಕಾತುರದಿಂದ ಕಾಯುತ್ತಿದ್ದಾರೆ.