ರಿಷಬ್ ಶೆಟ್ಟಿ ಹೇಳಿಕೆ ಇತ್ತಿಚೆಗೆ ಸಾಕಷ್ಟು ವೈರಲ್ ಆಗಿತ್ತು. ಬಾಲಿವುಡ್ ಮಂದಿ ತಮ್ಮ ಸಿನಿಮಾಗಳಲ್ಲಿ ಇಂಡಿಯಾ ಬಗ್ಗೆ ಕೆಟ್ಟದಾಗಿ ಮಾತನಾಡಿ, ಕೇವಲವಾಗಿ ತೋರಿಸಿ, ಅದನ್ನು ಆರ್ಟ್ ಸಿನಿಮಾ ಎಂದು ಹೊರದೇಶದ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆದ್ದಿರುವುದನ್ನು ನೋಡಿದ್ದೇನೆ. ನನ್ನ ದೇಶ ನನ್ನ ಹೆಮ್ಮೆ, ನನ್ನ ರಾಜ್ಯ ನನ್ನ ಹೆಮ್ಮೆ, ನನ್ನ ಭಾಷೆ ನನ್ನ ಹೆಮ್ಮೆ. ಹೀಗಾಗಿ ನಾನ್ಯಾಕೆ ಅದನ್ನು ಪಾಸಿಟಿವ್ ಆಗಿ ತೋರಿಸಬಾರದು ಎಂದಿದ್ದರು. ಈ ಹೇಳಿಕೆ ಸಾಕಷ್ಟು ವೈರಲ್ ಆಗಿತ್ತು. ಇದೀಗ ತಮ್ಮ ಹೇಳಿಕೆಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಅಬುದಾಭಿಯಲ್ಲಿ ನಡೆದ ಐಫಾ ಅವಾರ್ಡ್ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದರು. ಗ್ರೀನ್ ಕಾರ್ಪೆಟ್‌ನಲ್ಲಿ ರಿಷಬ್ ಶೆಟ್ಟಿ ನಡೆಯುವಾಗ ಬಾಲಿವುಡ್ ಮಾಧ್ಯಮಗಳಿಂದ ಈ ಪ್ರಶ್ನೆ ರಿಷಬ್ ಶೆಟ್ಟಿಗೆ ಪ್ರಶ್ನೆ ಎದುರಾಗಿತ್ತು. ರಿಷಬ್ ಶೆಟ್ಟಿ ಹೇಳಿರುವುದರಲ್ಲಿ ತಪ್ಪೇನು ಇಲ್ಲ ಎಂದು ಸಾಕಷ್ಟು ಜನ ಕಾಮೆಂಟ್ ಮಾಡಿದ್ದರು. ‘ಮೇಯರ್ ಮುತ್ತಣ್ಣ’ ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಭಾರತ ದೇಶದ ಬಗ್ಗೆ ಇದೇ ರೀತಿ ಮಾತನಾಡಿರುವ ವೀಡಿಯೋ ಕೂಡ ವೈರಲ್ ಆಗಿತ್ತು. ಇಲ್ಲಿ ರಿಷಬ್ ಬಾಲಿವುಡ್ ಸಿನಿಮಾ ಮೇಕರ್ಸ್ ಬಗ್ಗೆ ಮಾತನಾಡಿದ್ದರೆ ಆ ಚಿತ್ರದಲ್ಲಿ ಶ್ರೀಮಂತರ ಚಿತ್ರಕಲೆಯ ಬಗ್ಗೆ ಮುತ್ತಣ್ಣನ ಪಾತ್ರ ಮಾತನಾಡಿತ್ತು. ಅದಕ್ಕೆ ಅಲ್ಲಿಯೇ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ರಿಷಬ್ ತಮ್ಮ ಹೇಳಿಕೆಯನ್ನು ಬೇರೆಯದ್ದೇ ಅರ್ಥದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. “ನಾನು ಹೇಳಿದ್ದನ್ನು ಸ್ವಲ್ಪ ತಿರಚಲಾಗಿದೆ. ನಾನು ಈ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟನೆ ನೀಡುತ್ತೇನೆ. ಮುಂದೆ ಆ ಬಗ್ಗೆ ವಿವರವಾಗಿ ಮಾತನಾಡೋಣ” ಎಂದು ರಿಷಬ್ ಶೆಟ್ಟಿ ಹೇಳಿರುವುದು ವರದಿಯಾಗಿದೆ.