Left Ad
ವೈರಲ್ ಆದ ‘ಕಾಂತಾರ’ ಫೇಕ್ ಪೋಸ್ಟರ್ ವಿವಾದಕ್ಕೆ ತೆರೆ ಎಳೆದ ರಿಷಬ್ ಶೆಟ್ಟಿ - Chittara news
# Tags

ವೈರಲ್ ಆದ ‘ಕಾಂತಾರ’ ಫೇಕ್ ಪೋಸ್ಟರ್ ವಿವಾದಕ್ಕೆ ತೆರೆ ಎಳೆದ ರಿಷಬ್ ಶೆಟ್ಟಿ

ಬಿಡುಗಡೆಯಾಗುವ ಮುನ್ನವೇ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರೀ ಸಂಚಲನ ಸೃಷ್ಟಿಸಿದೆ. ಸೆಪ್ಟೆಂಬರ್ 22ರಂದು ಟ್ರೇಲರ್ ಬಿಡುಗಡೆಗೊಂಡು ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ ಬಳಿಕ, ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರತಂಡಕ್ಕೆ ಒಂದು ಅಸಾಮಾನ್ಯ ಪ್ರಶ್ನೆ ಎದುರಾಯಿತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಫೇಕ್ ಪೋಸ್ಟರ್ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದರು.

ಏನು ಹೇಳಿತ್ತು ಫೇಕ್ ಪೋಸ್ಟರ್?

ಇತ್ತೀಚೆಗೆ ಹರಿದಾಡಿದ ಪೋಸ್ಟರ್‌ನಲ್ಲಿ, “ಕಾಂತಾರ ನೋಡುವವರು ಮದ್ಯಪಾನ, ಧೂಮಪಾನ ಹಾಗೂ ಮಾಂಸಾಹಾರ ಸೇವನೆ ಮಾಡಬಾರದು” ಎಂದು ಬರೆಯಲಾಗಿತ್ತು. ಈ ವಿಷಯಗಳು ಜನರಲ್ಲಿ ಕುತೂಹಲ ಹಾಗೂ ವಿವಾದಕ್ಕೆ ಕಾರಣವಾಗಿದ್ದವು.

“ಅದಕ್ಕೆ ನಮ್ಮ ಸಿನಿಮಾಗೆ ಸಂಬಂಧವಿಲ್ಲ”

ಅದು ಸಂಪೂರ್ಣ ಫೇಕ್ ಪೋಸ್ಟರ್ ಎಂದು ರಿಷಬ್ ಶೆಟ್ಟಿ ಸ್ಪಷ್ಟಪಡಿಸಿದರು. “ಒಬ್ಬೊಬ್ಬರ ಬದುಕಿನ ಶೈಲಿ, ಊಟೋಪಚಾರ ಅವರವರ ವೈಯಕ್ತಿಕ ವಿಷಯ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಆ ಪೋಸ್ಟರ್ ನಮ್ಮ ಪ್ರೊಡಕ್ಷನ್ ಹೌಸ್‌ನದ್ದೇ ಅಲ್ಲ. ನೋಡಿದಾಗ ನಮಗೂ ಶಾಕ್ ಆಯಿತು. ಕೂಡಲೇ ಪ್ರೊಡಕ್ಷನ್ ತಂಡದಲ್ಲಿ ವಿಚಾರ ಹಂಚಿಕೊಂಡೆ. ಬಳಿಕ ಆ ಪೋಸ್ಟರ್ ಹಾಕಿದವರು ಕ್ಷಮೆ ಕೇಳಿ ಅದನ್ನು ತೆಗೆದಿದ್ದಾರೆ” ಎಂದು ಅವರು ಹೇಳಿದರು.

“ಇದು ಕೇವಲ ಜನಪ್ರಿಯತೆಗಾಗಿ”

ರಿಷಬ್ ಶೆಟ್ಟಿ ಮುಂದುವರಿಸಿ, “ಒಂದು ಸಿನಿಮಾ ಟ್ರೆಂಡ್ ಆಗುವಾಗ ಕೆಲವರು ತಮ್ಮ ವಿಚಾರಗಳನ್ನು ಅದಕ್ಕೆ ಜೋಡಿಸಿ ಜನಪ್ರಿಯತೆ ಪಡೆಯಲು ಯತ್ನಿಸುತ್ತಾರೆ. ಇದೂ ಅಂತಹದ್ದೇ ಒಂದು ಪ್ರಯತ್ನ. ನಮ್ಮ ಸಿನಿಮಾಗೆ, ನಮ್ಮ ತಂಡಕ್ಕೆ ಇದರೊಂದಿಗೆ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟನೆ ನೀಡಿದರು.

Spread the love
Translate »
Right Ad