ವೇದಿಕೆಯ ಮೇಲೆ ಸಂಗೀತ ಮಾತ್ರಿಕರು ಸಂಗೀತ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ. ಸಭಿಕರಲ್ಲಿ ಸಂತಸ, ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ತೃಪ್ತ ಭಾವ. ನಡು ನಡುವೆ ಕಣ್ಮನ ಸೆಳೆಯುವ ಹಾಡು-ನೃತ್ಯ ಪ್ರದರ್ಶನ.ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ಚಿತ್ತಾರ ಮ್ಯೂಸಿಕ್ ಅವಾರ್ಡ್-2025 ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು ಹೀಗಿತ್ತು.
ಜೀವಮಾನದ ಪ್ರಶಸ್ತಿ ಪ್ರದಾನ, 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸಂಗೀತ ಸಾಧನೆಗೆ ಪ್ರಶಸ್ತಿ ಪ್ರದಾನ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಮಾಡಿ ಎಲ್ಲರಿಗೂ ಹುರುಪು ತುಂಬಿದರು.
ರೆಡ್ ಕಾರ್ಪೆಟ್ ಮೇಲೆ ವೈಯ್ಯಾರದಿಂದ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಪ್ರತಿಭೆಗಳ ಭಾವುಕ ಮಾತುಗಳು. ಅನುರಾಗ್ ಹಾಗೂ ಅನುಪಮ ಗೌಡ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿತು.
ವಿವಿಧ ವಿಭಾಗಗಳಲ್ಲಿ ಭವ್ಯ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುವಾಗ ಹಲವರಿಗೆ ಕುತೂಹಲ ಮತ್ತು ದುಗುಡ ಒಟ್ಟೋಟ್ಟಿಗೆ ಉಂಟಾಯಿತು. ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ವಿಜೇತರು ಸಂಭ್ರಮಿಸಿದರೆ, ಉಳಿದವರು ಕೈಕುಲುಕಿ ಅಭಿನಂದನೆ ಸಲ್ಲಿಸಿದರು
ವಿಶಿಷ್ಟ ಸಂಗೀತ ಸಾಧಕರಿಗೆ ವಿಶೇಷ ಪ್ರಶಸ್ತಿ
ಚಂದನವನವನ್ನು ಅನೇಕ ಸಂಗೀತ ಸಾಧಕರು ತಮ್ಮ ಕಲಾಸೇವೆಯಿಂದ ಸಮೃದ್ಧಗೊಳಿಸಿದ್ದಾರೆ. ಹಿರಿಯರು ಸ್ಫೂರ್ತಿಯ ಸೆಲೆಯಾದರೆ, ಕಿರಿಯರು ಎಳೆಯದರಲ್ಲೇ ಪ್ರೇಕ್ಷಕರ ಮನ ಮುಟ್ಟಿದ್ದಾರೆ. ಚಿತ್ತಾರದ ಪರಂಪರೆಯಂತೆ ಈ ಬಾರಿಯೂ ಅನೇಕ ಸಂಗೀತ ಸಾಧಕರನ್ನು ‘ಚಿತ್ತಾರ ವಿಶೇಷ ಪ್ರಶಸ್ತಿ’ ನೀಡಿ ಗೌರವಿಸುವ ಮೂಲಕ ಅವರ ಸಾಧನೆಯನ್ನು ಸಂಭ್ರಮಿಸಲಾಯಿತು. ಈ ಬಾರಿಯ ಆ ವಿಶೇಷ ಸಾಧಕರ ಪರಿಚಯ ಇಲ್ಲಿದೆ..
‘Golden Icon’ / ಶ್ರೀ ರಿಕ್ಕಿ ಕೇಜ್
ಕನ್ನಡದ ಹಿರಿಮೆಯನ್ನು, ಭಾರತದ ಕಲೆಯನ್ನು ವಿಶ್ವಮಟ್ಟದಲ್ಲಿ ಪ್ರತಿಬಿಂಬಿಸಿದ ಪ್ರತಿಭಾವಂತರಲ್ಲೊಬ್ಬರು ಶ್ರೀ ರಿಕ್ಕಿ ಕೇಜ್. ಇವರ ಪೂರ್ಣ ಹೆಸರು ರಾಮ್ ಜ್ಞಾನ್ ಕೇಜ್. ಮೂಲತಃ ಸಂಗೀತಗಾರರಾಗಿ ಜನಪ್ರಿಯರಾಗಿರುವ ಶ್ರೀಯುತರು ಪರಿಸರವಾದಿಯು ಹೌದು. ಒಂದು ಕಡೆ ಸಂಗೀತದ ಮೂಲಕ ಪ್ರೀತಿ ಹಂಚಿದರೆ, ಮತ್ತೊಂದು ಕಡೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಈ ಸಮಾಜಕ್ಕೆ ಒಬ್ಬ ಮಾದರಿ ವ್ಯಕ್ತಿಯಾಗಿದ್ದಾರೆ.
ಸಂಗೀತದಲ್ಲಿ ಮಹಾನ್ ಸಾಧನೆ ಮಾಡಿದವರಿಗೆ ಕೊಡಮಾಡುವ ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಗ್ರಾಮ್ಮಿ. ಇದಕ್ಕೆ ನಾಲ್ಕು ಬಾರಿ ನಾಮಿನೇಟ್ ಆಗಿ, ಮೂರು ಬಾರಿ ಗ್ರಾಮ್ಮಿ ಪ್ರಶಸ್ತಿಗೆ ಭಾಜನರಾಗಿರುವ ಅಪರೂಪದ ಸಾಧಕ.
2015 ರಲ್ಲಿ ‘ವಿಂಡ್ಸ್ ಆಫ್ ಸಂಸಾರ‘ best new age album ವಿಭಾಗದಲ್ಲಿ ಪ್ರಶಸ್ತಿ ಗೆದ್ದಿತು. ಇವರ ಡಿವೈನ್ ಟೈಡ್ಸ್ 64 ಮತ್ತು 65 ನೇ ಸಾಲಿನ ಗ್ರಾಮ್ಮಿ ಪ್ರಶಸ್ತಿ ಪಡೆಯಿತು.
ರಿಕ್ಕಿ ಕೇಜ್ ಸಂಗೀತಗಾರರಾಗಿ ಕಲಾಲೋಕದಲ್ಲಿ ಮಾಡಿದ ಸಾಧನೆ ಪರಿಗಣಿಸಿ ಕೇಂದ್ರ ಸರ್ಕಾರ 2025 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅಪ್ರತಿಮ ಸಾಧನೆ ಮಾಡಿದ ಶ್ರೀ ರಿಕ್ಕಿ ಕೇಜ್ ಅವರಿಗೆ ‘Golden Icon’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

