ಮುಂಬೈ: ರಿಯಲ್ ಸ್ಟಾರ್ ಉಪೇಂದ್ರ ಏನೇ ಮಾಡುವುದಿದ್ದರೂ ಡಿಫರೆಂಟ್ ಆಗಿ ಮಾಡುತ್ತಾರೆ ಎನ್ನುವುದಕ್ಕೆ ಇದು ಮತ್ತೊಂದು ಉದಾಹರಣೆ. ತಮ್ಮ ಮುಂಬರುವ ಯುಐ ಸಿನಿಮಾದ ಹಾಡನ್ನು ಉಪ್ಪಿ ಆಂಡ್ ಟೀಂ ಮುಂಬೈನ ಗೂಗಲ್ ಕಚೇರಿಯಿಂದ ಬಿಡುಗಡೆ ಮಾಡಿದೆ.
ಇದನ್ನು ಲೈವ್ ಆಗಿ ಯೂ ಟ್ಯೂಬ್ ನಲ್ಲಿ ನೋಡಲು ಅಭಿಮಾನಿಗಳಿಗೆ ಅವಕಾಶವನ್ನೂ ನೀಡಿದೆ. ಉಪೇಂದ್ರ, ನಿರ್ಮಾಪಕ ಕೆಪಿ ಶ್ರೀಕಾಂತ್ ಸೇರಿದಂತೆ ಚಿತ್ರತಂಡ ಮುಂಬೈನ ಗೂಗಲ್ ಕಚೇರಿಯಿಂದ ಹಾಡು ಬಿಡುಗಡೆ ಮಾಡಿದೆ. ಯುಐ ಸಿನಿಮಾದ ಫಸ್ಟ್ ಸಿಂಗಲ್ ಜೊತೆ ವೈಬ್ ಮಾಡಲು ಸಿದ್ಧರಿದ್ದೀರಾ ಎಂದು ಕೆಲವೇ ಕ್ಷಣಗಳ ಮೊದಲು ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನು ನೋಡಿ ಅಭಿಮಾನಿಗಳು ಇದು ಇನ್ಯಾವತರ ಹುಳ ಬಿಡುತ್ತಿದ್ದಾರಪ್ಪಾ ಎಂದು ತಲೆಕೆರೆದುಕೊಂಡಿದ್ದರು. ಅಂದುಕೊಂಡಂತೇ ಇಂದು ಮಧ‍್ಯಾಹ್ನ 12 ಗಂಟೆಗೆ ಫುಲ್ ಹಾಡು ಬಿಡುಗಡೆ ಮಾಡಿದ್ದಾರೆ. ಯುಐ ಸಿನಿಮಾ ತಂಡ ಬಿಡುಗಡೆ ಮಾಡುತ್ತಿರುವ ಮೊದಲ ಹಾಡು ಇದಾಗಿದೆ.
ವಿಶೇಷವೆಂದರೆ ಈ ಹಾಡಿನಲ್ಲಿ ಉಪೇಂದ್ರ ಟ್ರೋಲ್ ಗಳಿಗೇ ಟ್ರೋಲ್ ಮಾಡಿದ್ದಾರೆ. ಆ ಮೂಲಕ ಮತ್ತೆ ತಮ್ಮ ಮ್ಯಾಜಿಕ್ ಏನೆಂದು ತೋರಿಸಿದ್ದಾರೆ. ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್-ಉಮಾಪತಿ ಗೌಡ ವಿವಾದದಲ್ಲಿ ಬಳಕೆಯಾಗಿದ್ದ ‘ತಗಡು’, ಕಳೆದ ಬಾರಿ ಲೋಕಸಭೆ ಚುನಾವಣೆ ವೇಳೆ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿದ್ದ ದರ್ಶನ್-ಯಶ್ ರನ್ನು ‘ಜೋಡೆತ್ತು’ ಎಂದಿದ್ದು ಎಲ್ಲವೂ ಉಪೇಂದ್ರ ಹಾಡಿನ ಸಾಹಿತ್ಯವಾಗಿದೆ. ಈ ಹಾಡು ನೋಡಿದರೆ ಇದು ಟ್ರೆಂಡ್ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.
ಆರಂಭದಿಂದಲೂ ಉಪೇಂದ್ರ ತಮ್ಮ ಯುಐ ಸಿನಿಮಾ ಬಗ್ಗೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರೇಕ್ಷಕರಿಗೆ ಅಚ್ಚರಿ ಕೊಡುತ್ತಲೇ ಇದ್ದಾರೆ. ಉಪೇಂದ್ರ ಬಹಳ ಸಮಯದ ನಂತರ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿರುವುದರಿಂದ ಪ್ರೇಕ್ಷಕರಲ್ಲೂ ಭಾರೀ ಕುತೂಹಲವಿದೆ.