ರಶ್ಮಿಕಾ ತಮ್ಮ ವೃತ್ತಿಜೀವನವನ್ನು ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಮೂಲಕ ಆರಂಭಿಸಿದರು. ಆದರೆ ಇತ್ತೀಚೆಗೆ, ಕಾಂತಾರಾ ಚಿತ್ರದ ಕುರಿತು ಕಾಮೆಂಟ್ ಮಾಡಿದ್ದಕ್ಕಾಗಿ ಕನ್ನಡ ಚಲನಚಿತ್ರ ಪ್ರಿಯರು ಅವರನ್ನು ಟ್ರೋಲ್ ಮಾಡಿದರು. ಅಲ್ಲದೇ ಬ್ಯಾನ್ ಮಾತುಗಳು ಸಹ ಕೇಳಿಬಂದವು. ಅನೇಕ ಬಾರಿ ಕನ್ನಡತಿಯಾದರೂ ಕನ್ನಡದಲ್ಲಿ ಮಾತನಾಡದೇ ರಶ್ಮಿಕಾ ಟ್ರೋಲ್ ಆಗಿದ್ದು ಇದೆ. ಇದೀಗ ರಶ್ಮಿಕಾ ಕಾಂತರ ಸಿನಿಮಾ ವಿಚಾರ ಮತ್ತು ಬ್ಯಾನ್ ವಿಚಾರವಾಗಿ ಮೌನ ಮುರಿದಿದ್ದಾರೆ.
ರಶ್ಮಿಕಾ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಸೂಪರ್ ಹಿಟ್ ಸಿನಿಮಾ ಕಾಂತಾರ ನೋಡಿಲ್ಲ, ಸಂದರ್ಶನದಲ್ಲಿ ತಮ್ಮ ಮೊದಲ ನಿರ್ಮಾಣ ಸಂಸ್ಥೆಯ ಹೆಸರು ಹೇಳಿಲ್ಲ ಅಂತಾ ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾರನ್ನ ಬ್ಯಾನ್ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಅದಕ್ಕೆಲ್ಲಾ ಇದೀಗ ಸ್ವತಃ ರಶ್ಮಿಕಾ ಅವರೇ ಉತ್ತರ ನೀಡಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ಅತಿಥಿಯಾಗಿ ಆಗಮಿಸಿದ್ದ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ರಶ್ಮಿಕಾನ ಬ್ಯಾನ್ ಮಾಡಬೇಕು ಎನ್ನುತ್ತಿರುವುದು ಸೋಶಿಯಲ್ ಮೀಡಿಯಾ ಚರ್ಚೆ ಅಷ್ಟೆ. ಚಿತ್ರರಂಗದಿಂದ ಯಾರು ಈ ಮಾತನ್ನು ಹೇಳಿಲ್ಲ.
ಕನ್ನಡ ಚಿತ್ರರಂಗದಿಂದ ನನ್ನನ್ನು ಬ್ಯಾನ್ ಮಾಡಿದ್ದಾರೆ ಎಂದು ಹೇಳುತ್ತಿರುವ ಸುದ್ದಿಯಲ್ಲಿ ವಾಸ್ತವ ಇಲ್ಲ. ಈವರೆಗೆ ಇಂತಹ ವಿಚಾರ ನನ್ನ ಬಳಿಗೆ ಬಂದಿಲ್ಲ ಎಂದಿದ್ದಾರೆ. ಕನ್ನಡ ಸಿನಿಮಾಗಳ ಮೇಲೆ ಯಾವಾಗಲೂ ನನಗೆ ಪ್ರೀತಿ ಇದ್ದೇ ಇದೆ. ವಾಸ್ತವ ತಿಳಿದುಕೊಳ್ಳದೇ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ.
`ಕಾಂತಾರ’ ಬಿಡುಗಡೆಯಾದ ಎರಡು ದಿನಕ್ಕೆ ಸಿನಿಮಾ ನೋಡಿದ್ರಾ? ಎಂದು ಕೇಳಿದ್ದರು. ನೋಡಿರಲಿಲ್ಲ. ಅದಕ್ಕೆ ಸರಿಯಾಗಿ ಸ್ಪಂದಿಸಿರಲಿಲ್ಲ. ಆ ನಂತರ ಸಿನಿಮಾ ನೋಡಿ ಚಿತ್ರತಂಡಕ್ಕೆ ಮೆಸೇಜ್ ಮಾಡಿದ್ದೆ. ಅವರು ಥ್ಯಾಂಕ್ಯೂ ಎಂದು ರಿಪ್ಲೇ ಮಾಡಿದ್ದರು ಎಂದು ಈ ವೇಳೆ ರಶ್ಮಿಕಾ ತಿಳಿಸಿದ್ದಾರೆ.
ನನ್ನ ವೈಯಕ್ತಿಕ ವಿಚಾರಗಳನ್ನು ಕ್ಯಾಮೆರಾ ಮುಂದೆ ಇಟ್ಟು ಪ್ರಪಂಚಕ್ಕೆ ತೋರಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ನನ್ನ ವೈಯಕ್ತಿಕ ವಿಚಾರಗಳು ಪ್ರಪಂಚಕ್ಕೆ ಬೇಕಾಗಿಲ್ಲ. ವೃತ್ತಿಪರವಾಗಿ ನನ್ನ ಸಿನಿಮಾಗಳ ಬಗ್ಗೆ ಮಾತನಾಡುವುದು ನನ್ನ ಜವಾಬ್ದಾರಿ. ನನ್ನ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅದನ್ನೆಲ್ಲಾ ಅವರ ವಿವೇಚನೆಗೆ ಬಿಡುತ್ತೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.