Sandalwood Leading OnlineMedia

ಓ ಪರಿ ಆಲ್ಬಂ ಹಾಡಿನ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಡಿಎಸ್​​​ಪಿ

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕರಾದ ದೇವಿ ಶ್ರೀಪ್ರಸಾದ್ ಅಲಿಯಾಸ್ ಡಿಎಸ್ಪಿ ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸುವುದರ ಜೊತೆಗೆ ತಮ್ಮ ಹಿಟ್ ಹಾಡುಗಳ ಮೂಲಕ ಲಕ್ಷಾಂತರ ಜನರನ್ನು ರಂಜಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ಅವರು ಸಿನಿಮಾ ಹೊರತುಪಡಿಸಿ ಆಲ್ಬಂ ಸಿಂಗಲ್ವೊಂದಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಅದೇ ‘ಓ ಪರಿ.
 
 
 
ಟಿ-ಸೀರೀಸ್ ಮೂಲಕ ಇದುವರೆಗೂ ಹಲವಾರು ಗಾಯಕರನ್ನು ಮತ್ತು ಸಂಗೀತಗಾರರನ್ನು ಮುನ್ನೆಲೆಗೆ ತಂದಿರುವ ಭೂಷಣ್ ಕುಮಾರ್, ಇದೇ ಮೊದಲ ಬಾರಿಗೆ ‘ರಾಕ್ಸ್ಟಾರ್’ ಎಂದೇ ಜನಪ್ರಿಯವಾಗಿರುವ ಡಿಎಸ್ಪಿ ಜೊತೆಗೆ ಕೈ ಜೋಡಿಸಿದ್ದಾರೆ. ಡಿಎಸ್ಪಿ ಸಂಯೋಜಿಸಿರುವ ‘ಓ ಪರಿ’ ಎಂಬ ಸಿಂಗಲ್ನ್ನು ಟಿ-ಸೀರೀಸ್ ಮೂಲಕ ಹೊರತಂದಿದ್ದಾರೆ. ಈ ಹಾಡನ್ನು ಡಿಎಸ್ಪಿ ಅವರೇ ಹಾಡಿದ್ದು, ಇತ್ತೀಚೆಗೆ ಮುಂಬೈನಲ್ಲಿ ನಡೆದ ವಿಶೇಷ ಇವೆಂಟ್ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡು ಈಗಾಗಲೇ ಯೂಟ್ಯೂಬ್ನ ಟಿ-ಸೀರೀಸ್ ಚಾನಲ್ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಜನಪ್ರಿಯವಾಗಿದೆ. ಅದರಲ್ಲೂ, ಡಿಎಸ್ಪಿ ಅವರ ಹುಕ್ ಸ್ಟೆಪ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
 
 
ಈ ಹಾಡಿನ ವಿಶೇಷತೆಯೆಂದರೆ, ಇದು ಡಿಎಸ್ಪಿ ಅವರ ಮೊದಲ ಹಿಂದಿ ಸಿಂಗಲ್ ಆದರೂ, ಇದು ಹಿಂದಿಗೆ ಮಾತ್ರ ಸೀಮಿತವಲ್ಲ. ಇದೊಂದು ಪ್ಯಾನ್ ಇಂಡಿಯಾ ಹಾಡಾಗಿದ್ದು, ಹಿಂದಿಯಲ್ಲದೆ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಮೂಡಿಬಂದಿದೆ. ವಿಶೇಷವೆಂದರೆ, ಐದೂ ಭಾಷೆಗಳಲ್ಲಿ ಡಿಎಸ್ಪಿ ಅವರೇ ಈ ಹಾಡನ್ನು ಹಾಡಿದ್ದಾರೆ.
ಈ ಹಾಡಿನ ಕುರಿತು ಮಾತನಾಡಿರುವ ಡಿಎಸ್ಪಿ, ‘ಹಿಂದಿ ಆಲ್ಬಂ ಕ್ಷೇತ್ರಕ್ಕೆ ಕಾಲಿಡುವುದಕ್ಕೆ ಕೆಲವು ಸಮಯದಿಂದ ಯೋಚಿಸುತ್ತಿದ್ದೆ. ಅದಕ್ಕೊಂದು ಅದ್ಭುತ ವೇದಿಕೆ ಕಲ್ಪಿಸಿದ್ದು ಭೂಷಣ್ ಕುಮಾರ್ ಅವರ ಟಿ-ಸೀರೀಸ್. ನನ್ನ ಬೇರೆ ಹಾಡುಗಳನ್ನು ಮೆಚ್ಚಿದಂತೆ ಈ ಹಾಡನ್ನು ಸಹ ಕೇಳುಗರು ಇಷ್ಟಪಡುತ್ತಾರೆ ಎಂಬ ನಂಬಿಕೆ ನನಗಿದೆ. ಮುಂದಿನ ದಿನಗಳಲ್ಲಿ ಈ ತರಹದ ಇನ್ನಷ್ಟು ಆಲ್ಬಂ ಹಾಡುಗಳನ್ನು ಬಿಡುಗಡೆ ಮಾಡುವ ಯೋಚನೆ ಇದೆ’ ಎಂದು ಹೇಳಿಕೊಂಡಿದ್ದಾರೆ.
 
‘ಓ ಪರಿ’ ಹಾಡು ನೋಡುವುದಕ್ಕೆ, ಕೇಳುವುದಕ್ಕೆ ಮತ್ತು ಎಂಜಾಯ್ ಮಾಡುವುದಕ್ಕೆ ಯೂಟ್ಯೂಬ್ನ ಟಿ-ಸೀರೀಸ್ ಚಾನಲ್ಗೆ ಇಂದೇ ಭೇಟಿ ಕೊಡಿ.

Share this post:

Translate »