ನಟಿ ರಮ್ಯಾ ಬೆಳ್ಳಿಪರದೆಗೆ ಬರಲು ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ. ಕಂಬ್ಯಾಕ್‌ಗೆ ಗಟ್ಟಿ ಸ್ಟೋರಿಯನ್ನೇ ಆಯ್ಕೆ ಮಾಡಿಕೊಂಡು ಡಾಲಿಗೆ ನಾಯಕಿಯಾಗಿ ರಮ್ಯಾ ಬರುತ್ತಿದ್ದಾರೆ. ಕೆಲ ದಿನಗಳ ಹಿಂದೆ ರಮ್ಯಾ ಮತ್ತು ಡಾಲಿ ಜೊತೆಯಾಗುತ್ತಿದ್ದಾರೆ ಎಂಬ ಸುದ್ದಿ ಸಖತ್ ಸೌಂಡ್ ಮಾಡಿತ್ತು. ಇದೀಗ ಈ ಸುದ್ದಿ ನಿಜವಾಗಿದೆ.
ಮೋಹಕ ತಾರೆ ರಮ್ಯಾ ಡಾಲಿ ಧನಂಜಯ್ ಚಿತ್ರದಲ್ಲಿ ನಟಿಯಾಗಿ ಅಭಿನಯಿಸುತ್ತಿರುವ ಸುದ್ದಿ ಹೊರಬಿದ್ದಿದ್ದು, ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ. ಟ್ರೆಂಡಿಂಗ್ ಪಟ್ಟಿಯಲ್ಲಿರುವ ನಟ ಡಾಲಿ ಧನಂಜಯ್ ಜತೆ ರಮ್ಯಾ ಜೋಡಿಯಾಗಿ ಹೇಗೆ ಕಾಣಿಸಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹಾಗೂ ಸಿನಿ ಪ್ರಿಯರಲ್ಲಿ ಹೆಚ್ಚಾಗಿದೆ.
ಡಾಲಿ ಧನಂಜಯ್ ನಟನೆಯ ಉತ್ತರಕಾಂಡ’ ಸಿನಿಮಾವೇ ರಮ್ಯಾ ಅವರ ಕಂಬ್ಯಾಕ್ ಸಿನಿಮಾ ಆಗಲಿದೆ. ಈಗ ‘ಉತ್ತರಕಾಂಡ’ ಚಿತ್ರಕ್ಕಾಗಿ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ. ಸದ್ಯ ಈ ಚಿತ್ರಕ್ಕೆ ಪೂಜೆ ನೆರವೇರಿಸಲಾಗಿದೆ.
`ರತ್ನನ್ ಪ್ರಪಂಚ’ ಚಿತ್ರತಂಡದೊಂದಿಗೆ ಮತ್ತೆ ಡಾಲಿ ಜೊತೆಯಾಗಿದ್ದು, ಈ ಚಿತ್ರದ ಭಿನ್ನ ಪ್ರಯತ್ನಕ್ಕೆ ರಮ್ಯಾ ಕೂಡ ಸಾಥ್ ನೀಡಿದ್ದಾರೆ. ಈ ಸಿನಿಮಾ ಮೂಹರ್ತ ಕಾರ್ಯಕ್ರಮದಲ್ಲಿ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿ ಗಣ್ಯರು ಭಾಗಿಯಾಗಿದ್ದರು. ವಿಜಯ್ ಕಿರಗಂದೂರು ಅರ್ಪಿಸುವ ಈ ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್ ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದು, ಇದು ಧನಂಜಯ್ ಹಾಗೂ ರೋಹಿತ್ ಕಾಂಬಿನೇಷನ್‌ನ ಎರಡನೇ ಸಿನಿಮಾ ಆಗಿದೆ.
https://www.instagram.com/p/CkpT3P2IKJF/
ಈ ಚಿತ್ರಕ್ಕಾಗಿ ರಮ್ಯಾ ಅವರು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ರತ್ನನ್ ಪ್ರಪಂಚ’ ಚಿತ್ರದಲ್ಲಿ ರಮ್ಯಾ ನಟಿಸಬೇಕಿತ್ತು. ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಈಗ ಡಾಲಿ ಧನಂಜಯ್ ಜೊತೆ ಅಭಿನಯಿಸಲು ಕಾಲ ಕೂಡಿಬಂದಿದೆ. ಈ ಬಗ್ಗೆ ರಮ್ಯಾ ಮಾತನಾಡಿದ್ದಾರೆ. ‘ಇಂತಹ ಒಳ್ಳೆಯ ತಂಡದ ಜೊತೆ ಕೈ ಜೋಡಿಸಿ ಬೆಳ್ಳಿಪರದೆಗೆ ಹಿಂದಿರುಗುತ್ತಿರುವುದು ಸಂತೋಷ ತಂದಿದೆ. ಇತ್ತೀಚಿನ ದಿನಗಳಲ್ಲಿ ಈ ತಂಡದ ಜೊತೆಗಿನ ಒಡನಾಟ ಚೆನ್ನಾಗಿದೆ. ತಂಡದವರೆಲ್ಲರೂ ನನ್ನ ಮೇಲೆ ತೋರುತ್ತಿರುವ ಅಭಿಮಾನ ಹಾಗು ಬಾಂಧವ್ಯ ನೋಡಿದರೆ ಒಂದು ಒಳ್ಳೆಯ ಜಾಗದಲ್ಲಿದ್ದೀನಿ ಅನ್ನೋ ಭಾವನೆ ಕೊಟ್ಟಿದೆ’ ಎಂದು ರಮ್ಯಾ ಹೇಳಿದ್ದಾರೆ.
ರಮ್ಯಾ ಜೊತೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಡಾಲಿ ಧನಂಜಯ್ ಖುಷಿ ಆಗಿದ್ದಾರೆ. ಈ ಚಿತ್ರ ಸಂಪೂರ್ಣ ಉತ್ತರ ಕರ್ನಾಟಕದ ಸೊಗಡಿನಲ್ಲಿ, ಭಾಷೆಯಲ್ಲಿ ಮೂಡಿಬರಲಿದೆ. ಅಲ್ಲಿಯೇ ಪೂರ್ತಿ ಚಿತ್ರೀಕರಣ ಆಗಲಿದೆ. 2023ರ ಜನವರಿಯಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ. ಅರವಿಂದ ಕಶ್ಯಪ್ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಂಯೋಜನೆ, ದೀಪು ಎಸ್. ಕುಮಾರ್ ಸಂಕಲನ ಮಾಡಲಿದ್ದಾರೆ. ‘ಉತ್ತರ ಕಾಂಡ’ ಚಿತ್ರದಲ್ಲಿ ಇನ್ನೂ ಅನೇಕ ಕಲಾವಿದರು ನಟಿಸಲಿದ್ದು, ಅವರ ಬಗ್ಗೆ ನಂತರದ ದಿನಗಳಲ್ಲಿ ಮಾಹಿತಿ ನೀಡಲಿದೆ ಚಿತ್ರತಂಡ.
ರಮ್ಯಾ ಮತ್ತು ಧನಂಜಯ್ ಮೊದಲ ಬಾರಿಗೆ ತೆರೆಯ ಮೇಲೆ ಜೋಡಿಯಾಗುತ್ತಿದ್ದಾರೆ. ಇವರಿಬ್ಬರ ಜೋಡಿ ತೆರೆಯ ಮೇಲೆ ಕಮಾಲ್ ಮಾಡೋದನ್ನ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.