ವಿಶ್ವದ ಅತಿದೊಡ್ಡ ಥೀಮ್ ಪಾರ್ಕ್ ಮತ್ತು ಫಿಲ್ಮ್ ಸ್ಟುಡಿಯೋ, ರಾಮೋಜಿ ಫಿಲ್ಮ್ ಸಿಟಿಯನ್ನು ಸ್ಥಾಪಿಸಿ ಭಾರತೀಯ ಚಿತ್ರರಂಗಕ್ಕೆ ಕೊಡುಗೆಯನ್ನಾಗಿ ನೀಡಿದ ರಾಮೋಜಿ ರಾವ್ ಶನಿವಾರ ನಸುಕಿನ ಜಾವ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್ ನ ಸ್ಟಾರ್ ಆಸ್ಪತ್ರೆಯಲ್ಲಿ ಬೆಳಗಿನ ಜಾವ 3:45ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 88 ವರ್ಷವಾಗಿತ್ತು.ಇದನ್ನೂ ಓದಿ:ಐರಾ- ಯಥರ್ವ್ಗೆ ಬೊಂಬಾಟ್ ಗಿಫ್ಟ್ ಕಳಿಸಿದ ‘ಕಲ್ಕಿ’ ಮಾಮ ಪ್ರಭಾಸ್
1936ರ ನವೆಂಬರ್ 16 ರಂದು ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಗ್ರಾಮದಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ ರಾಮೋಜಿ ರಾವ್, 1969ರಲ್ಲಿ ಅನ್ನದಾತ ಪತ್ರಿಕೆಯನ್ನ ಆರಂಭಿಸುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು.
ಆ ನಂತರ ಈ ನಾಡು ದಿನಪತ್ರಿಕೆಯ ಮೂಲಕ ಆಂಧ್ರಪ್ರದೇಶದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದರು. ಇನ್ನೂ ರಾಮೋಜಿ ರಾವ್ ಅವರು ತೆಲುಗು ರಾಜಕೀಯದಲ್ಲೂ ಸಕ್ರಿಯ ಪಾತ್ರ ವಹಿಸಿದ್ದರು. ರಾಜಕೀಯ ನಾಯಕರಿಗೆ ಮಹತ್ವದ ಸಲಹೆಗಳನ್ನ ನೀಡುವ ಮೂಲಕ ಮಾರ್ಗದರ್ಶಿಯಾಗಿದ್ದರು.
ಭಾರತ ಸರ್ಕಾರವು ರಾಮೋಜಿ ರಾವ್ ಅವರಿಗೆ ದೇಶದ ಎರಡನೇ ಅತಿ ದೊಡ್ಡ ನಾಗರಿಕ ಪುರಸ್ಕಾರವಾದ ಪದ್ಮ ವಿಭೂಷಣ ಪುರಸ್ಕಾರವನ್ನು 2016ರಲ್ಲಿ ಪ್ರಧಾನ ಮಾಡಿತ್ತು. ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ ಹಾಗೂ ಶಿಕ್ಷಣ ರಂಗದಲ್ಲಿ ರಾಮೋಜಿ ರಾವ್ ಅವರು ನೀಡಿದ ಕೊಡುಗೆಗಳನ್ನು ಪರಿಣಿಸಿ ಅವರಿಗೆ ಈ ಪುರಸ್ಕಾರ ನೀಡಲಾಗಿತ್ತು.
ದೀರ್ಘಕಾಲದಿಂದಲೂ ರಕ್ತದೊತ್ತಡ ಹಾಗೂ ಉಸಿರಾಟ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಜೂನ್ 5ರಂದು ಹೃದಯ ಸಂಬಂಧಿ ಸಮಸ್ಯೆಯಿಂದ ಉಸಿರಾಟಕ್ಕೆ ತೀವ್ರ ತೊಂದರೆಯಾಗಿತ್ತು.ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯ ನಂತರ ಹೃದಯ ಸ್ಟೆಂಟ್ ಹಾಕಲಾಯಿತು.ಇದನ್ನೂ ಓದಿ:
ಬಳಿಕ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇರುವ ಅವರ ಮನೆಗೆ ರವಾನೆ ಮಾಡಲಾಗಿದೆ. ರಾಮೋಜಿ ರಾವ್ ಅವರ ನಿವಾಸದಲ್ಲೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ರಾಮೋಜಿ ರಾವ್ ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.