ಕಿರುತೆರೆಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻರಾಮಾಚಾರಿʼ ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಸಾಲು ಸಾಲು ಸಂಸ್ಕೃತ ಮಂತ್ರಗಳನ್ನು ಪಟ-ಪಟನೆ ಉಚ್ಚರಿಸುವ ರಾಮಾಚಾರಿ ಪಾತ್ರದಲ್ಲಿ ವೀಕ್ಷಕರನ್ನು ರಂಜಿಸುತ್ತಿರುವ ನಾಯಕನೇ ರಿತ್ವಿಕ್ ಕೃಪಾಕರ್. ಇವರು ಹುಟ್ಟಿ ಬೆಳೆದದ್ದು ಮೈಸೂರಿನಲ್ಲಿ. ತಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಿನಿಮಾ ನಿರ್ದೇಶನವನ್ನು ಕಲಿಯುವವರಿಗೆ ಪಾಠ ಮಾಡುವ ಪ್ರೊಫೆಸರ್. ಹೆಸರು ಪ್ರವೀಣ್‌ಕೃಪಾಕರ್. ತಾಯಿ ಹೇಮಾ ಕೃಪಾಕರ್. ವಿಶೇಷ ಚೇತನ ತಾಯಿ ವಾತ್ಸಲ್ಯದಲ್ಲಿ ಮಕ್ಕಳಿಗೆ ಪಾಠ ಹೇಳುವ ಮೇಡಂ. ಇವರು ನಡೆಸುವ ವಿಶೇಷ ಚೇತನರ ಶಾಲೆಗೊಂದು ಮೈಸೂರಿನಲ್ಲಿ ಹಿರಿಮೆ ಇದೆ. ಇಂತಹ ವಾತ್ಸಲ್ಯ ಪೂರ್ಣ ಮನೆಯಲ್ಲಿ ಬೆಳೆದ ರಿತ್ವಿಕ್‌ಗೆ ರಂಗಭೂಮಿ ಸೇರುವವರೆಗೂ ನಟನೆ ಮೇಲೆ ಆಸಕ್ತಿ ಇರಲಿಲ್ಲ. ಇವರ ಮನೆಗೆ ದೊಡ್ಡದೊಡ್ಡ ನಿರ್ದೇಶಕರು ಬರುತ್ತಿದ್ದರೂ. ಇವರಿಗೆ ಸಿನಿಮಾ ನನ್ನ ಬದುಕನ್ನು ಕಟ್ಟಿಕೊಡುತ್ತದೆ ಎಂಬ ನಿರೀಕ್ಷೆಯೇ ಇರಲಿಲ್ಲ. ಶಿಕ್ಷಣಕ್ಕೆ ಮಹತ್ವ ನೀಡುತ್ತಿದ್ದರಿಂದ ರಿತ್ವಿಕ್‌ಗೆ ಓದು ಹವ್ಯಾಸವಾಯಿತು. ಪುಸ್ತಕಗಳಲೇ ಪ್ರಪಂಚವಾಯಿತು.
ರಿತ್ವಿಕ್‌ಗೆ ಪ್ರಾಣಿಗಳೆಂದರೆ ಇಷ್ಟ. ಅದಕ್ಕಾಗಿಯೇ ಅವರು ಪದವಿ ಶಿಕ್ಷಣದಲ್ಲಿ ಪ್ರಾಣಿ ಶಾಸ್ತ್ರವನ್ನು ಆಯ್ಕೆ ಮಾಡಿಕೊಂಡರು. ಅವರು ಕೆಲಸಕ್ಕಾಗಿ ಅಥವಾ ಬದುಕು ಕಟ್ಟಿಕೊಳ್ಳಲಿಕ್ಕಾಗಿ ವಿದ್ಯಾಭ್ಯಾಸ ಮಾಡಲಿಲ್ಲ. ಬದಲಿಗೆ ಇವರಿಗೆ ಯಾವ ವಿಷಯ ತಿಳಿದುಕೊಳ್ಳಬೇಕು ಎಂಬ ಬಗ್ಗೆ ಆಸಕ್ತಿ ಬೆಳಸಿಕೊಂಡರು. ಅದೇ ವಿಷಯದ ಮೇಲೆ ಅಧ್ಯಯನ ನಡೆಸಿ ಪದವಿಯನ್ನು ಪಡೆದುಕೊಂಡರು. ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲೇ ಅವರಿಗೆ ಭವಿಷ್ಯ ಏನೆಂಬುದರ ಬಗ್ಗೆ ಅವರಿಗೆ ಅರಿವಿತ್ತು. ಭವಿಷ್ಯವನ್ನು ನಾವು ಕಟ್ಟಿಕೊಳ್ಳುವಂತಹದ್ದು ಎಂಬ ಸತ್ಯ ಅರ್ಥವಾಗಿತ್ತು. ಅದಕ್ಕಾಗಿ ಅವರು “ನಾಳೆ ಎನ್ನುವುದು ನನಗೆ ಶ್ರೀಮಂತವಾಗಿ ಇರಬಾರದು, ಅನುಭವಿಸಲಿಕ್ಕೆ ವಿಶಾಲವಾಗಿರ ಬೇಕು ಎನ್ನುತ್ತಾರೆ” ರಿತ್ವಿಕ್, ಇಂತಹ ಮನಸ್ಥಿತಿಗೆ ಕಾರಣ ಅವರು ಬೆಳೆದು ಬಂದ ವಾತಾವರಣ. ಅವರ ಮನೆಯಲ್ಲಿಯೇ ಆಟವಾಡಿಕೊಂಡು ಬೆಳೆದ ವಿಶೇಷ ಚೇತನ ಮಕ್ಕಳನ್ನು ನೋಡಿದಾಗ ‘ಖುಷಿ’ ಎನ್ನುವುದು ಏನು ಎಂಬುದು ಸ್ಪಷ್ಟವಾಗಿ ಅರ್ಥವಾಗಿತ್ತು. ಆ ಮಕ್ಕಳೆಲ್ಲ ಆ ಕ್ಷಣಕ್ಕೆ ಬದುಕುತ್ತಾರೆ. ಅವರು ಬದುಕುವ ಪ್ರತಿಯೊಂದು ಕ್ಷಣಗಳು ಅವರದ್ದೇ ಆಗಿರುತ್ತವೆ ಮತ್ತು ಪ್ರತೀ ಕ್ಷಣಗಳಲ್ಲು ಅವರಿಷ್ಟದಂತೆ ಬದುಕುತ್ತಾರೆ.
ಯಾರೂ ಕಾಣಲಾಗದ ಕನಸನ್ನು ನಾನು ಕಾಣಬೇಕು. ಆ ಕಂಡ ಕನಸುಗಳನ್ನು ಸಾಕಾರ ಮಾಡಿಕೊಳ್ಳಬೇಕು. ನಾ ಬದುಕುವ ಒಂದೊಂದು ಕ್ಷಣಗಳನ್ನು ನೆನಪಿಟ್ಟುಕೊಳ್ಳುವಂತೆ ಬದುಕಬೇಕು. ಈ ಬದುಕು ಮುಗಿದು ಹೋಗುವಾಗ ಇನ್ನೇನೋ ಮಾಡಬೇಕೆಂದುಕೊಂಡದ್ದು ಉಳಿದುಹೊಗಿದೆ ಎಂದು ಎನಿಸಬಾರದು. ಪ್ರತಿಯೊಂದನ್ನು ಯೋಚಿಸಿ ಮತ್ತು ಯೋಜಿಸಿ ಬದುಕಬೇಕು. ಬದುಕಿಗೆ ಅತೀ ಮುಖ್ಯವಾಗಿ ಒಂದು ಟೈಮ್ ಟೇಬಲ್ ಇರಬೇಕು. ಅದರಂತೆಯೇ ಗುರಿಯೆಡೆಗೆ ನನ್ನ ಪಯಣವಿರಬೇಕು’ ಎಂದು ಹೇಳುವ ರಿತ್ವಿಕ್ ಕೃಪಾಕರ್, ಬದುಕಿನಲ್ಲಿ ಬಹಳ ಲೆಕ್ಕಾಚಾರದವರು.
ರಂಗಭೂಮಿಯಲ್ಲಿ ಗೊತ್ತಾದ ಸತ್ಯ !!
ರಿತ್ವಿಕ್ ಹತ್ತನೇ ತರಗತಿಯಲ್ಲಿ ಓದುತ್ತಿರುವಾಗಲೇ ರಂಗಭೂಮಿಯನ್ನು ಪ್ರವೇಶಿಸಿದರು. ರಂಭೂಮಿ ಕಲಾವಿದ, ನಟ ಮಂಡ್ಯ ರಮೇಶ್ ಅವರು ಸ್ಥಾಪಿಸಿರುವ ‘ನಟನ’ ಇವರ ಮೊದಲ ರಂಗ ಶಾಲೆ. ರಂಗ ಶಾಲೆಗೆ ಬಂದ ಮೇಲೆ ರಂಗಭೂಮಿಯೆಡೆಗಿನ ಆಕರ್ಷಣೆ ದಿನೇ ದಿನೇ ಹೆಚ್ಚಾಗುತ್ತಾ ಹೋಯಿತು. ಅಭಿನಯದಲ್ಲಿ ಆಸಕ್ತಿ ಬೆಳೆದು ಕಲಾ ಕ್ಷೇತ್ರವನ್ನೇ ಭವಿಷ್ಯದ ವೃತ್ತಿ ಯಾಗಿಸಿಕೊಂಡರು. ಇನ್ನು ಬದುಕಿನಲ್ಲಿ ಏನೇ ಮಾಡಿದರು ಈ ಕ್ಷೇತ್ರದಲ್ಲೇ ಸಾಧನೆ ಮಾಡಬೇಕು ಅಂತ ಸಂಕಲ್ಪ ಮಾಡಿದರು. ಅದರಂತೆ ಅಭಿನಯದಲ್ಲಿ ಆಳವಾಗಿ ಅಭ್ಯಾಸ ಮಾಡುತ್ತಾ ಹೊಸ ಹೊಸ ವಿಚಾರಗಳನ್ನು ಕಲಿಯುತ್ತಿದ್ದಾರೆ. ಇವರ ಬದುಕಿನಲ್ಲಿ ‘ನಟನ ‘ಶಾಲೆ ಒಂದು ಮಹತ್ವದ ತಿರುವನ್ನು ನೀಡಿತು ಎಂದೇ ಹೇಳಬಹುದು. ರಿತ್ವಿಕ್ ಸಿನಿಮಾ ಹಿನ್ನೆಲೆಯಿಂದ ಬಂದವರಾಗಿದ್ದರೂ, ಅವರಿಗೆ ಸಿನಿಮಾ ಆಸಕ್ತಿ ಬೆಳೆದಿರಲಿಲ್ಲ. ಅವರ ಕನಸ್ಸೇ ಬೇರೆಯಾಗಿತ್ತು. ‘ನಟನ’ ರಂಗ ಶಾಲೆ ಸೇರಿದ ನಂತರವೇ, ತಮಗೆ ಅಭಿನಯದಲ್ಲಿ ಆಸಕ್ತಿ ಬೆಳೆಯಿತು ಎನ್ನುತ್ತಾರೆ ರಿತ್ವಿಕ್. ಬದುಕಿನಲ್ಲಿ ಸಂಭವಿಸುವ ಎಲ್ಲಾ ನೋವನ್ನು, ಎಲ್ಲಾ ನಲಿವನ್ನು, ಎಲ್ಲಾ ಭಾವನೆಗಳನ್ನು ಒಬ್ಬ ಕಲಾವಿದ ಮಾತ್ರ ಅನುಭವಿಸಲು ಸಾಧ್ಯ. ಒಂದು ಜನ್ಮದಲ್ಲಿ ನಾನಾ ಬಗೆಯ ಜನರ ಪಾತ್ರ ಮಾಡುವ ಅವಕಾಶ ಇರೋದು ಸಹ ಈ ರಂಗದಲ್ಲಿ ಮಾತ್ರ. ಹೀಗಾಗಿ ಅವರು ಕಲಾವಿದನಾಗಿ ಮುಂದುವರೆಯಲು ನಿರ್ಧರಿಸಿದರು.
ರಿತ್ವಿಕ್ ತಯಾರಿಯ ಹಿಂದೆ ಏನಿದೆ?
ರಿತ್ವಿಕ್ ತಯಾರಿ ಹೇಗಿದೆಯಪ್ಪ ಅಂದರೇ ನಾವು ಐ.ಎ.ಎಸ್ ಗೆ ಪ್ರಿಪೇರ್ ಆಗುವ ವಿದ್ಯಾರ್ಥಿಗಳು ಹೇಗೆ ಅಭ್ಯಾಸ ಮಾಡುತ್ತಾರೋ, ಹಾಗೆಯೇ ರಿತ್ವಿಕ್ ತಯಾರಿ ನಡೆಸುತ್ತಾರೆ. ಇದು ಇವತ್ತಿನಿಂದಲ್ಲ, ಕಳೆದ ಹತ್ತು ವರ್ಷಗಳಿಂದ ಹೀಗೆಯೇ ಬದುಕುತ್ತಿದ್ದಾರೆ. ಇವರ ಮುಂದಿನ ಒಂದು ತಿಂಗಳ ಬದುಕು ಇವತ್ತೇ ಟೈಮ್ ಟೇಬಲ್‌ನಲ್ಲಿ ಫಿಕ್ಸ್ ಆಗಿರುತ್ತೆ. ಆ ಟೈಮ್ ಟೇಬಲ್‌ನಲ್ಲಿ ಅವರು ಬೆಳಿಗ್ಗೆ ಏಳುವುದರಿಂದ ರಾತ್ರಿ ಮಲಗುವವರೆಗೂ ಎಲ್ಲವೂ ಹೀಗೆಯೇ ನಡೆಯುತ್ತದೆ ಎಂದು ಬರೆದಿರುತ್ತಾರೆ. ಒಂದು ವೇಳೆ ಕಾರಣಾಂತರಗಳಿಂದ ಮಿಸ್ ಆದರೇ ಅದಕ್ಕೆ ಅಲ್ಲೇ ಏನು ಕಾರಣ ಯಾಕೆ ಮಿಸ್ ಆಯಿತು ? ಎಂದು ಅದರಿಂದ ನನ್ನಗುರಿಗೆ ಏನು? ಅಡಚಣೆ ಆಯಿತು ಎಂದು ಎಲ್ಲವನ್ನು ಬರೆದಿಡುತ್ತಾರೆ. ಬದುಕನ್ನು ಒಂದು ಅಚಲವಾದ ಶಿಸ್ತಿನೊಂದಿಗೆ ಬದುಕುತ್ತಿರುವ ಈ ಅಪಟ್ಟ ಕನ್ನಡ ಕಲಾವಿದ. ತನ್ನ ಊಟ, ತಾನು ಓದುವ ಪುಸ್ತಕ, ನೋಡುವ ಸಿನಮಾ ಎಲ್ಲವನ್ನು ಮುಂಚೆಯ ಪ್ಲಾನ್ ಮಾಡಿಕೊಂಡು ಅದರಂತೆಂಯೇ ಇಂದಿಗೂ ಬದುಕುತ್ತಿರುವ ಶಿಸ್ತಿನ ಕಲಾವಿದ.
ಒಬ್ಬ ನಟ ಇಷ್ಟೆಲ್ಲಾ ಕಲಿಯಬೇಕಾ?
ನಟನಾಗಲು ಇಷ್ಟೆಲ್ಲಾ ಕಲಿಬೇಕಾ ಎಂದರೆ? ಹೌದು ಎನ್ನುತ್ತಾರೆ ರಿತ್ವಿಕ್. ರಿತ್ವಿಕ್ ನಟಿಸೋದರ ಜೊತೆಗೆ ಹಾಡುವುದು, ಡಾನ್ಸ್, ಕರಾಟೆ, ಮಾರ್ಷಲ್ ಆರ್ಟ್ಸ್, ಸ್ಟಂಟ್ ಹಾಗೂ ಫೈಟ್ಸ್ ಇನ್ನು ಅದೇನೇನೋ ಸಂಬಂಧವೇ ಇಲ್ಲದ ಎಡಿಟಿಂಗ್, ಮ್ಯೂಸಿಕ್ ಕಂಪೋಸ್, ಮ್ಯೂಸಿಕಲ್ ಇಂಷ್ಟುಮೆಂಟ್ಸ್, ಪ್ರೊಡಕ್ಷನ್ ಕೆಲಸಗಳನ್ನ ಕಲಿಯುತ್ತಿದ್ದಾರೆ. ಅವರಿಗೆ ಕಲಿಕೆ ಎಂದರೇ ಅದು ನಿರಂತರವಂತೆ, ಒಂದು ಸಿನಿಮಾವಾಗಬೇಕಾದರೇ ಎಷ್ಟು ಜನ ದುಡಿಯುತ್ತಾರೋ ಅಷ್ಟು ಜನರ ಕೆಲಸ ನನಗೆ ಮಾಡಲು ಗೊತ್ತಿರಬೇಕು ಎನ್ನುತ್ತಾರೆ ರಿತ್ವಿಕ್. ಇನ್ನು ನಟನೆಯ ವಿಷಯಕ್ಕೆ ಬಂದರೇ ಬೀದಿಯಲ್ಲಿ ನಿಂತು ಪಾನಿಪುರಿ ಮಾರುವವನಿಂದ ಹಿಡಿದು ನಾನು ನೋಡುವ ಪ್ರತಿಯೊಂದು ಜೀವಿಯೂ ಒಂದೊಂದು ಪಾತ್ರ. ಆ ಪಾತ್ರವನ್ನು ಅವರು ಹಾಗೆ ತಪ್ಪಿಲ್ಲದೆ ನಿರ್ವಹಿಸುತ್ತಿದ್ದಾರೋ ಹಾಗೆ, ಆ ಪಾತ್ರಗಳನ್ನು ನನಗೆ ಮಾಡಬೇಕಾದ ಸಂದರ್ಭ ಬಂದರೇ ಆ ಪಾತ್ರಕ್ಕೆ ಮೋಸವಾಗದಂತೆ ಅಭಿನಯಿಸಬೇಕು ಅನ್ನುತ್ತಾರೆ ರಿತ್ವಿಕ್. ಅಭಿನಯದ ಬಗ್ಗೆ ಅಗಾಧವಾದ ಅಧ್ಯಯನ ನಡೆಸಿ ಅಭ್ಯಸಿಸುತ್ತಿರೋ ಈ ಕಲಾವಿದ ಮುಂದೆ ಇಡೀ ಭಾರತದಲ್ಲಿ ಒಬ್ಬ ಒಳ್ಳೆಯ ಕಲಾವಿದ ಎಂದು ಗುರುತಿಸಿಕೊಳ್ಳಬೇಕು ಎಂಬ ಮಹಾದಾಸೆ ಹೊತ್ತಿದ್ದಾರೆ.
ಸಿನಿಮಾಗಳ ಅವಕಾಶಗಳು ಬರುತ್ತಿವೆಯಾ?
ಇಷ್ಟೆಲ್ಲಾ ಕ್ವಾಲಿಟಿ ಇರೋ ರಿತ್ವಿಕ್‌ಗೆ ಸಿನಿಮಾ ಅವಕಾಶಗಳು ಬರದೇ ಇರುತ್ತಯೇ, ಬರುತ್ತಿವೆ. ಆದರೆ ಬರುವ ಅವಕಾಶಗಳೆಲ್ಲವನ್ನು ಒಪ್ಪಿಕೊಳ್ಳದೆ ಒಳ್ಳೆಯ ಪಾತ್ರ ಮತ್ತು ಒಳ್ಳೆಯ ಎಕ್ಸಿಕ್ಯೂಟ್ ಟೀಮ್‌ಗಾಗಿ ಕಾಯುತ್ತಿದ್ದಾರೆ. ಅಂತಹ ಕೆಲವು ಟೀಮ್‌ಗಳು ಬಂದಿವೆಯಂತೆ ಅವರು ಸಂಪೂರ್ಣ ಕಥೆಯನ್ನು ರೆಡಿ ಮಾಡಿಕೊಂಡು ಬರುವ ಭರವಸೆ ನೀಡಿ ಹೋಗಿದ್ದಾರಂತೆ. ಯಾವುದಕ್ಕೂ ಆತುರ ಪಡದೆ ನಿಧಾನವಾದರು ಸಿನಿಮಾ ಚೆನ್ನಾಗಿ ಬರಬೇಕು ಅಂದು ಕೊಂಡು ಕಾಯುತ್ತಿದ್ದಾರೆ. ಇನ್ನೂ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ‘ರಾಮಾಚಾರಿ’ಯ ಧಾರಾವಾಹಿಯಲ್ಲಿ ಪುಟಗಟ್ಟಲೆ ಮಂತ್ರವನ್ನು ಪಠಿಸುತ್ತಾ, ಕರ್ನಾಟಕದ ಮನೆ ಮಂದಿಯ ಮನಸ್ಸನ್ನು ಗೆದ್ದಿರುವ ಇವರಿಗೆ ನೆರೆ ರಾಜ್ಯದ ಬೇರೆ ಭಾಷೆಯ ಇಂಡಸ್ಟ್ರಿಯಿಂದಾಲೂ ಅವಕಾಶಗಳ ಕರೆ ಬಂದಿದೆಯಂತೆ. ಕನ್ನಡಕ್ಕೆ ನನ್ನ ಪ್ರಥಮ ಆದ್ಯತೆ ಎಂದು ಡಾ|| ರಾಜ್ ಕುಮಾರ್ ಅವರ ನೀತಿಯನ್ನು ಪಾಲಿಸುತ್ತಿರುವ ಈ ಕಲಾವಿದ ನಾಡಿಗೆ ಕೀರ್ತಿರುವಂತಹ ಕಲಾವಿದನಾಗಿ ಬೆಳೆಯುವುದರಲ್ಲಿ ಸಂಶಯವೇ ಇಲ್ಲ. ಕೇವಲ ಕನ್ನಡಿಗರ ಮೆಚ್ಚುಗೆಯ ಚಪ್ಪಾಳೆ ಮತ್ತು ಆಶೀರ್ವಾದವೊಂದಿದ್ದರೆ ಸಾಕು, ಈ ಕಲಾವಿದ ಬೆಳೆದು ಹೆಮ್ಮರವಾಗ ಬಲ್ಲ.