ಒಂದು ಕಾಲದಲ್ಲಿ ತಮ್ಮ ನಿರ್ದೇಶನದ ಚಿತ್ರಗಳು ಮಾತನಾಡುವಂತೆ ಮಾಡುತ್ತಿದ್ದವರು ರಾಮ್ ಗೋಪಾಲ್ ವರ್ಮಾ. ಆದರೆ. ಆ ನಂತರ ರಾಮ್ ಗೋಪಾಲ್ ವರ್ಮಾ ಸಿನಿಮಾ ಆಸಕ್ತಿ ಕಡಿಮೆಯಾಯ್ತು. ಒಳ್ಳೆ ಚಿತ್ರಗಳನ್ನು ಮಾಡುವುದನ್ನು ಮರೆತು ಮಾತನ್ನೇ ಬಂಡವಾಳವನ್ನಾಗಿಸಿಕೊಳ್ಳಲು ಶುರು ಮಾಡಿದರು. ಸದಾ ಕಾಲ ಯಾವದಾದರೂ ಒಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿ ಸುದ್ದಿಯಾದರು. ಕೆಲಸಕ್ಕೆ ಬಾರದ್ದನ್ನೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಟ್ರೋಲ್ ಆಗಲು ಶುರುವಾದರು.ಇದರ ನಡುವೆ ಮುಂಬೈನ ಸ್ಥಳೀಯ ಕೋರ್ಟ್ ರಾಮ್ ಗೋಪಾಲ್ ವರ್ಮಾ ಶಾಕ್ ನೀಡಿದೆ. ಮೂರು ತಿಂಗಳ ಶಿಕ್ಷೆ ವಿಧಿಸಿದೆ.
2018ರಲ್ಲಿ ರಾಮ್ ಗೋಪಾಲ್ ವರ್ಮಾ ವಿರುದ್ದ ಮುಂಬೈನಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಮಹೇಶ್ಚಂದ್ರ ಮಿಶ್ರಾ ಎನ್ನುವವರು ರಾಮ್ ಗೋಪಾಳ್ ವರ್ಮಾ ವಿರುದ್ದ ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅನೇಕ ಬಾರಿ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದ್ದರೂ ಕೂಡ ಭಂಡ ಧೈರ್ಯದ ರಾಮ್ ಗೋಪಾಲ್ ವರ್ಮಾ ಕ್ಯಾರೇ ಎಂದಿರಲಿಲ್ಲ. ಹೀಗಾಗಿಯೇ ನಿನ್ನೆ ಈ ಪ್ರಕರಣದ ವಿಚಾರಣೆಯನ್ನು ಮತ್ತೊಮ್ಮೆ ನಡೆಸಿದ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೆಗೋಷಿಯೇಬಲ್ ಇನ್ಸ್ಟುಮೆಂಟ್ಸ್ ಕಾಯ್ದೆಯ ಸೆಕ್ಷನ್ 138ರ ಅಡಿಯಲ್ಲಿ ದೋಷಿ ಎಂದು ಹೇಳಿದೆ. ರಾಮ್ ಗೋಪಾಲ್ ವರ್ಮಾ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.
ಮುಂದಿನ ಮೂರು ತಿಂಗಳಲ್ಲಿ ದೂರುದಾರರಿಗೆ 3.72 ರೂಪಾಯಿಗಳನ್ನ ಪರಿಹಾರ ನೀಡುವಂತೆ ಆದೇಶಿಸಿರುವ ನ್ಯಾಯಾಲಯ ಪರಿಹಾರ ಪಾವತಿಸಲು ವಿಫಲವಾದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ. ಇನ್ನುಳಿದಂತೆ ಸತತ ಸೋಲುಗಳಿಂದ ಹೈರಾಣಾಗಿರುವ ರಾಮ್ ಗೋಪಾಲ್ ವರ್ಮಾ, ಕೊರೊನಾ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಆ ನಂತರ ತಮ್ಮ ಕಚೇರಿಯನ್ನು ಮಾರಿದ್ದರು.