Sandalwood Leading OnlineMedia

“ಇಬ್ಬನಿ ತಬ್ಬಿದ ಇಳೆಯಲಿ”‌ ಬ್ಯಾಚುಲರ್ ಪಾರ್ಟಿ ಕೊಡಲಿರುವ ರಕ್ಷಿತ್ ಶೆಟ್ಟಿ ಮತ್ತು ತಂಡ

ರಕ್ಷಿತ್ ಶೆಟ್ಟಿ ಈಗ ಕೇವಲ ನಾಯಕರಾಗಷ್ಟೇ ಅಲ್ಲ. ನಿರ್ಮಾಪಕರಾಗೂ ಜನಪ್ರಿಯ. ತಮ್ಮ ಪರಂವಃ ಸ್ಟುಡಿಯೋಸ್ ಮೂಲಕ ಯುವಪ್ರತಿಭೆಗಳಿಗೆ ಅವಕಾಶ ನೀಡುತ್ತಾ ಬರುತ್ತಿದ್ದಾರೆ ರಕ್ಷಿತ್ ಶೆಟ್ಟಿ.
ಪ್ರಸ್ತುತ ಪರಂವಃ ಸ್ಟುಡಿಯೋಸ್ ನಿರ್ಮಿಸುತ್ತಿರುವ “ಬ್ಯಾಚುಲರ್ ಪಾರ್ಟಿ” ಹಾಗೂ “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರಗಳ ಮುಹೂರ್ತ ಸಮಾರಂಭ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರರಂಗದಲ್ಲಿ ಹೊಸರೀತಿಯ ಕಥೆಗಳು ಬರಬೇಕು. ಹೊಸರೀತಿಯಲ್ಲಿ ಯೋಚಿಸುವ ಕಥೆಗಾರರನ್ನು ನಾವು ಬರಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಮ್ಮ ಪರಂವಃ ಸ್ಟುಡಿಯೋಸ್ ಸದಾ ಸಿದ್ದ. ನನ್ನ ಜೊತೆ “ಕಿರಿಕ್ ಪಾರ್ಟಿ” ಸಮಯದಿಂದ ಜೊತೆಗಿರುವ ಚಂದ್ರಜಿತ್ ಬೆಳ್ಳಿಯಪ್ಪ “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರವನ್ನು ಹಾಗೂ ಅಭಿಜಿತ್ ಮಹೇಶ್ “ಬ್ಯಾಚುಲರ್ ಪಾರ್ಟಿ” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಎರಡು ಬೇರೆಯದೇ ತರಹದ ಕಥೆಗಳು. ಎರಡು ಚಿತ್ರಗಳಿಗೂ ಶುಭವಾಗಲಿ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ರಕ್ಷಿತ್ ಶೆಟ್ಟಿ.
 
 
 
ನನಗೆ ಅವಕಾಶ ನೀಡಿರುವ ರಕ್ಷಿತ್ ಶೆಟ್ಟಿ ಅವರಿಗೆ ಧನ್ಯವಾದ. “ಬ್ಯಾಚುಲರ್ ಪಾರ್ಟಿ” ಹಾಸ್ಯ ಪ್ರಧಾನವಾದ ಉತ್ತಮ ಮನೋರಂಜನೆಯ ಚಿತ್ರ. ದಿಗಂತ್ ಮಂಚಾಲೆ, ರಿಷಬ್ ಶೆಟ್ಟಿ, ಅಚ್ಯುತಕುಮಾರ್, ಸಿರಿ ರವಿಕುಮಾರ್ ಮುಂತಾದವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತದೆ ಎಂದರು ನಿರ್ದೇಶಕ ಅಭಿಜಿತ್ ಮಹೇಶ್. ನಾನು, ಅಭಿಜಿತ್ ಹಾಗೂ ಚಂದ್ರಜಿತ್ ಒಟ್ಟಾಗಿ “ಕಿರಿಕ್ ಪಾರ್ಟಿ” ಯಲ್ಲಿ ಕೆಲಸ ಮಾಡಿದವರು. ಈಗ ಮತ್ತೊಮ್ಮೆ ಒಟ್ಟಾಗಿ ಸೇರಿದ್ದೇವೆ‌. ಅಭಿಜಿತ್ ಮಹೇಶ್ “ಬ್ಯಾಚುಲರ್ ಪಾರ್ಟಿ” ಯಲ್ಲಿ ಒಳ್ಳೆಯ ಪಾತ್ರ ನೀಡಿದ್ದಾರೆ. ಎರಡೂ ತಂಡಕ್ಕೂ ಒಳಿತಾಗಲಿ ಎಂದರು ರಿಷಬ್ ಶೆಟ್ಟಿ.
 
 
ನನಗೆ ಪರಂವಃ ಸ್ಟುಡಿಯೋಸ್ ನಲ್ಲಿ ಇದು ಎರಡನೇ ಚಿತ್ರ. ಅಭಿಜಿತ್ ಮಹೇಶ್ ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಎಲ್ಲರನ್ನು ನಕ್ಕು ನಗಿಸುವ ಉತ್ತಮ ಕಾಮಿಡಿ ಜಾನರ್ ನ ಚಿತ್ರ ಇದಾಗಲಿದೆ ಎಂದು ನಟ ದಿಗಂತ್ ತಿಳಿಸಿದರು. ಚಿತ್ರದಲ್ಲಿ ಅಭಿನಯಿಸುತ್ತಿರುವ ಸಿರಿ ರವಿಕುಮಾರ್ ಹಾಗೂ ಜಯಲಕ್ಷ್ಮಿ ಸಹ ಪತ್ರಿಕಾಗೋಷ್ಠಿಯಲ್ಲಿದ್ದರು.
 
 
 
ಚಿತ್ರದ ಆರಂಭದ ದಿನದಿಂದಲೂ ನನ್ನ ತಂಡಕ್ಕೆ ಒಳ್ಳೆಯ ಕನಸುಗಳನ್ನು ತುಂಬಿದ್ದೀನಿ. ಅವರ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ನನ್ನ ಮೇಲಿದೆ. ನನ್ನ ನಂಬಿ ಬಂಡವಾಳ ಹಾಕಿರುವ ನಿರ್ಮಾಪಕರಿಗೆ ಹಣ ವಾಪಸು ಬರಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ.‌ ನೋಡಿದ ಜನ ಕೆಲವು ವರ್ಷಗಳವರೆಗೂ ನೆನಪಿನಲ್ಲಿಟ್ಟಿಕೊಳ್ಳಬೇಕು ಅಂತಹ ಸಿನಿಮಾ ಮಾಡಲು ಪ್ರಯತ್ನ ಮಾಡುತ್ತೇನೆ. ರಾತ್ರಿ ಮಲಗಿದ್ದಾಗ ಒಂದು ಒಳ್ಳೆಯ ಕನಸು ಬೀಳುತ್ತದೆ. ಆ ಕನಸಿನಿಂದ ಬೆಳಗ್ಗೆ ಎದ್ದ ಕೂಡಲೇ ಒಂದು ತರಹ ಉತ್ಸಾಹವಿರುತ್ತದೆ. ಆ ರೀತಿ ನಮ್ಮ ಚಿತ್ರದ ಕಥೆ ಸಾಗುತ್ತದೆ. “ಇಬ್ಬನಿ ತಬ್ಬಿದ ಇಳೆಯಲಿ” ಒಂದೊಳ್ಳೆ ರೊಮ್ಯಾನ್ಸ್ ಡ್ರಾಮ ಎನ್ನಬಹುದು ಎಂದು ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಚಿತ್ರದ ಬಗ್ಗೆ ಮಾಹಿತಿ ನೀಡಿದರು.
 
ಇಂತಹ ಒಳ್ಳೆಯ ತಂಡದ ಜೊತೆಗೆ ಭಾಗಿಯಾಗಿರುವುದಕ್ಕೆ ಸಂತೋಷವಾಗಿದೆ ಎಂದು ನಾಯಕ ವಿಹಾನ್ ತಿಳಿಸಿದರು.”ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರದಲ್ಲಿ ಅಭಿನಯಿಸುತ್ತಿರುವುದು ಖುಷಿ ತಂದಿದೆ. ಪಾತ್ರ ಕೂಡ ಚೆನ್ನಾಗಿದೆ.‌ ಇದು ನನ್ನ ಮೊದಲ ಪತ್ರಿಕಾಗೋಷ್ಠಿ ಎಂದರು ನಾಯಕಿ ಅಂಕಿತಾ ಅಮರ್.

Share this post:

Related Posts

To Subscribe to our News Letter.

Translate »