ಯಾವಾಗಲೂ ಕಿರಿಕ್ಗಳ ಮೂಲಕವೇ ರಾಖಿ ಸಾವಂತ್ ಅವರು ಸುದ್ದಿ ಆಗುತ್ತಾರೆ. ಈಗಾಗಲೇ ಅವರಿಗೆ ಎರಡು ಮದುವೆ ಆಗಿ ಮುರಿದು ಬಿದ್ದಿವೆ. ಈಗ ರಾಖಿ ಸಾವಂತ್ ಅವರು ಮೂರನೇ ಬಾರಿಗೆ ಮದುವೆಯಾಗಲು ಸಜ್ಜಾಗಿದ್ದಾರೆ. ಈ ಬಾರಿ ಅವರು ಪಾಕಿಸ್ತಾನದ ಹುಡುಗನ ಕೈ ಹಿಡಿಯಲಿದ್ದಾರೆ. ಪಾಕಿಸ್ತಾನದಲ್ಲಿ ಗುರುತಿಸಿಕೊಂಡಿರುವ ನಟ, ಮಾಡೆಲ್ ಡೊಡಿ ಖಾನ್ ಜೊತೆ ರಾಖಿ ಸಾವಂತ್ ಮದುವೆ ಆಗುವುದಾಗಿ ತಿಳಿಸಿದ್ದಾರೆ. ಡೊಡಿ ಖಾನ್ ಅವರು ಅಲ್ಲಿ ಪೊಲೀಸ್ ಅಧಿಕಾರಿ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಸ್ವತಃ ಡೊಡಿ ಖಾನ್ ಅವರು ರಾಖಿ ಸಾವಂತ್ಗೆ ಮದುವೆಯ ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೋವನ್ನು ರಾಖಿ ಸಾವಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ದಿಬ್ಬಣ ತೆಗೆದುಕೊಂಡು ಭಾರತಕ್ಕೆ ಬರಲೇ ಅಥವಾ ದುಬೈಗೆ ಬರಲೇ’ ಎಂದು ಡೊಡಿ ಖಾನ್ ಕೇಳಿದ್ದಾರೆ.
‘ಅವರೇ ನನ್ನ ಪ್ರೀತಿ. ನಾವಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಅವರು ಪಾಕಿಸ್ತಾನದವರು. ನಾನು ಭಾರತದವಳು. ನಮ್ಮದು ಲವ್ ಮ್ಯಾರೇಜ್ ಆಗಲಿದೆ’ ಎಂದು ರಾಖಿ ಸಾವಂತ್ ಅವರು ಹೇಳಿದ್ದಾರೆ.
2019ರಲ್ಲಿ ಅವರು ರಿತೇಶ್ ಸಿಂಗ್ ಜೊತೆ ಮದುವೆ ಆಗಿದ್ದರು. 2022ರಲ್ಲಿ ವಿಚ್ಛೇದನ ಪಡೆದುಕೊಂಡರು. ಬಳಿಕ ಮೈಸೂರು ಮೂಲದ ಆದಿಲ್ ಖಾನ್ ಜೊತೆ ಮದುವೆ ನೆರವೇರಿತು. ಆ ಶಾದಿ ಕೂಡ ಕಿರಿಕ್ನಲ್ಲಿ ಅಂತ್ಯವಾಯಿತು. ಈ ನಡುವೆ ಮಾಜಿ ಪತಿ ಆದಿಲ್ ಖಾನ್ ಬಗ್ಗೆ ರಾಖಿ ಸಾವಂತ್ ಕಿಡಿಕಾರಿದ್ದಾರೆ. ‘ನಾನು ಈಗ ಮದುವೆ ಆಗುತ್ತಿರುವುದಕ್ಕೆ ಆದಿಲ್ ಖಾನ್ಗೆ ಹೊಟ್ಟೆ ಕಿಚ್ಚು. ಅವನಿಗೆ ಕೆಟ್ಟ ಪ್ರಚಾರ ಬೇಕು. ಆ ಮೂರ್ಖನಿಗೆ ನಾನು ಪ್ರಚಾರ ನೀಡುವುದಿಲ್ಲ’ ಎಂದು ರಾಖಿ ಸಾಂವತ್ ಹೇಳಿದ್ದಾರೆ.