*ನಾಯಕನಾಗಿ ಭಡ್ತಿಪಡೆದ ಧರ್ಮಣ್ಣ: ರಾಜಯೋಗ ಫಸ್ಟ್ ಲುಕ್ ಅನಾವರಣ*
ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಎನ್ನುವುದು ಬಹಳ ಮುಖ್ಯ. ಪ್ರತಿಭೆಯ ಜೊತೆಗೆ ಅದೃಷ್ಟವಿದ್ದರೆ ಮಾತ್ರವೇ ಹೆಸರು ಖ್ಯಾತಿ ಗಳಿಸಲು ಸಾಧ್ಯ. ಅದರ ಜೊತೆ ಯೋಗವೂ ಇರಬೇಕಾಗುತ್ತದೆ. ಹಾಗೇ ಮನುಷ್ಯನ ಜೀವನದಲ್ಲಿ ರಾಜಯೋಗ ಬಂತೆಂಕಮಲದರೆ ಆತ ಮುಟ್ಟಿದ್ದೆಲ್ಲವೂ ಚಿನ್ನ ಎನ್ನುವಂತಾಗುತ್ತದೆ. ಈಗ ಅದೇ ಶೀರ್ಷಿಕೆಯಡಿ ಚಲನಚಿತ್ರವೊಂದು ನಿರ್ಮಾಣವಾಗುತ್ತಿದೆ. ಈ ಚಿತ್ರದ ಮೂಲಕ ಪೋಷಕ ನಟನಾಗಿದ್ದ ಧರ್ಮಣ್ಣ ಕಡೂರು ನಾಯಕನಾಗಿ ಭಡ್ತಿ ಪಡೆಯುತ್ತಿದ್ದಾರೆ. ಈಗಾಗಲೇ ಚಿತ್ರೀಕರಣವನ್ನೂ ಪ್ರಾರಂಭಿಸಿ ಒಂದು ಹಂತ ಮುಗಿಸಿಕೊಂಡಿರುವ ಈ ಚಿತ್ರದ ಫಸ್ಟ್ ಲುಕ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
ಲಿಂಗರಾಜ ಉಚ್ಚಂಗಿದುರ್ಗ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕನ್ನಡ ಗೊತ್ತಿಲ್ಲ ನಿರ್ಮಿಸಿದ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆಎನ್, ಅರ್ಜುನ್ ಅಣತಿ ಅಲ್ಲದೆ ಧರ್ಮಣ್ಣ ಸಹೋದರ ಹೊನ್ನಪ್ಪ ಕಡೂರು ಈ ಆರು ಜನ ನಿರ್ಮಾಪಕರು ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ನಾಯಕನಟ ಧರ್ಮಣ್ಣ ಮಾತನಾಡುತ್ತ ನನ್ನ ಪಾತ್ರದಲ್ಲಿ ಕಾಮಿಡಿ, ಎಮೋಷನ್ ಎಲ್ಲಾ ಇದೆ, ಈ ಥರದ ಪಾತ್ರವನ್ನು ಹಿಂದೆಂದೂ ಮಾಡಿಲ್ಲ, ಗ್ರಾಮೀಣ ಭಾಗದಲ್ಲಿ ನಡೆಯೋ ಕಥೆಯನ್ನು ಲಿಂಗರಾಜು ಅವರು ಮಾಡಿಕೊಂಡಿದ್ದಾರೆ. ಇಲ್ಲಿ ಎಲ್ಲ ಪಾತ್ರಗಳಿಗೂ ಸಮಾನ ಅವಕಾಶವಿದೆ. ನನ್ನನ್ನು ನಂಬಿ ಇಂಥ ದೊಡ್ಡ ಪಾತ್ರವನ್ನು ಕೊಟ್ಟಿದ್ದಾರೆ ಎಂದು ಹೇಳಿದರು, ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿರುವ ನಿರೀಕ್ಷಾರಾವ್ ಮಾತನಾಡುತ್ತ ಮೂಢನಂಬಿಕೆ, ನಂಬಿಕೆಗಳ ಮಧ್ಯೆ ನಡೆಯುವ ಕಥೆ. ನನ್ನದು ಕುಟುಂಬದ ಗೃಹಿಣಿಯ ಪಾತ್ರ ಎಂದು ಹೇಳಿಕೊಂಡರು. ಚಿತ್ರದಲ್ಲಿ 6 ಹಾಡುಗಳಿದ್ದು, ಅಕ್ಷಯ್ ರಿಶಭ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ವಿಷ್ಣುಪ್ರಸಾದ್ ಕ್ಯಾಮೆರಾವರ್ಕ್ ನಿಭಾಯಿಸಿದ್ದಾರೆ. ಬಿ.ಎಸ್.ಕೆಂಪರಾಜು ಅವರ ಸಂಕಲನ ಈ ಚಿತ್ರಕ್ಕಿದೆ, ನಾಗೇಂದ್ರ ಶಾ ನಾಯಕನ ತಂದೆಯ ಪಾತ್ರ ನಿರ್ವಹಿಸಿದ್ದು, ರಂಗ ದಿಗ್ಗಜ ಕೃಷ್ಣ ಮೂರ್ತಿ ಕವತ್ತಾರ್ ಚಿತ್ರದ ಪ್ರಮುಖ ಪಾತ್ರವಾದ ಜನರನ್ನು ದಾರಿ ತಪ್ಪಿಸುವ ಜೋತಿಷಿಯ ಪಾತ್ರ ಮಾಡಿದ್ದಾರೆ. ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಉಳಿದ ಪಾತ್ರವರ್ಗದಲ್ಲಿದ್ದಾರೆ.