ರಾಜ್ ಬಿ. ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಸ್ವಾತಿ ಮುತ್ತಿನ ಮಳೆಹನಿಯೇ’ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಎಲ್ಲರ ಗಮನ ಸೆಳೆಯುತ್ತಿದೆ. ಒಂದು ಸಿಂಪಲ್ ಪ್ರೇಮ ಕಥೆಯನ್ನು ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿರುವುದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ. ರಾಜ್. ಬಿ ಶೆಟ್ಟಿ ಜೋಡಿಯಾಗಿ ಸಿರಿ ರವಿಕುಮಾರ್ ನಟಿಸಿದ್ದಾರೆ. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ತಮ್ಮ ಆಪಲ್ ಬಾಕ್ಸ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೊದಲಿಗೆ ‘ಸ್ವಾತಿ ಮುತ್ತಿನ ಮಳೆಹನಿಯೇ’ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಈ ಸಿನಿಮಾ ಮೂಲಕವೇ ಮೋಹಕ ತಾರೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದಿಂದ ಹೊರ ನಡೆದರು. ಬಳಿಕ ಸಿರಿ ರವಿಕುಮಾರ್ ಆ ಪಾತ್ರವನ್ನು ನಿಭಾಯಿಸಿದ್ದರು. ಕೇವರ 30 ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿತ್ತು.
ಕಾರಣಾಂತರಗಳಿಂದ ‘ಸ್ವಾತಿ ಮುತ್ತಿನ ಮಳೆಹನಿಯೇ’ ಸಿನಿಮಾ ಬಿಡುಗಡೆ ತಡವಾಯಿತು. ಈಗಾಗಲೇ ಚಿತ್ರದ ಹಾಡುಗಳು ರಿಲೀಸ್ ಆಗಿ ಸಿನಿರಸಿಕರ ಮನಗೆದ್ದಿತ್ತು. ಸದ್ಯ ಟ್ರೈಲರ್ ಸಿನಿಮಾ ನೋಡಲೇಬೇಕು ಎನ್ನುವ ಕಾತರ ಮೂಡಿಸಿದೆ. ಅಷ್ಟರಮಟ್ಟಕ್ಕೆ ಟ್ರೈಲರ್ ನೋಡುಗರ ಮನಸೂರೆಗೊಳ್ಳುತ್ತಿದೆ. ಎರಡು ಮನಸುಗಳ ಪರಿಶುದ್ಧ ಪ್ರೀತಿಯ ಭಾವನೆಗಳ ತೋಳಲಾಟವನ್ನು ರಾಜ್ ಬಿ. ಶೆಟ್ಟಿ ಸೊಗಸಾಗಿ ಸೆರೆಹಿಡಿದಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ಹಾಗೂ ಪ್ರವೀಣ್ ಸಿರಿಯಾನ್ ಛಾಯಾಗ್ರಹಣ, ರಾಜ್ ಬಿ. ಶೆಟ್ಟಿ ಕಲ್ಪನೆಗೆ ಬಣ್ಣ ಹಾಗೂ ಸಂಗೀತದ ಉಡುಗೆ ತೊಡಿಸಿದಂತಿದೆ. ಗುಣ ಆಗುವುದೇ ಇಲ್ಲ ಎನ್ನುವ ಕಾಯಿಲೆಯಿಂದ ಜೀವನದ ಕೊನೆ ದಿನಗಳನ್ನು ಎಣಿಸುತ್ತಿರುವ ವ್ಯಕ್ತಿಯ ಜೀವನದಲ್ಲಿ ಭರವಸೆ ಗಾಳಿ ಬೀಸುವ ಕತೆ ಚಿತ್ರದಲ್ಲಿದೆ. ಆಸರೆ ಎನ್ನುವ ಹಾಸ್ಪೈಸ್‌ನಲ್ಲಿ ಪ್ರೇರಣಾ ಸಲಹೆಗಾರ್ತಿಯಾಗಿ ಕೆಲಸ ಮಾಡುತ್ತಿರುತ್ತಾಳೆ. ಅಲ್ಲಿಗೆ ಗ್ಯಾಸ್ಟೋ ಇನ್‌ಸ್ಟೆನಲ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅನಿಕೇತ್ ಬಂದು ದಾಖಲಾಗುತ್ತಾನೆ. ಜೀವನದ ಮೇಲೆ ವೈರಾಗ್ಯ ಮೂಡಿದ ಆತನ ಬಾಳಲ್ಲಿ ಪ್ರೇರಣ ಆಗಮನದಿಂದ ಏನೆಲ್ಲಾ ಆಗುತ್ತದೆ ಅನ್ನೋದೇ ಸಿನಿಮಾ ಕತೆ. ರಾಜ್, ಸಿರಿ ತಮ್ಮ ತಮ್ಮ ಪಾತ್ರಗಳಲ್ಲಿ ಕಳೆದು ಹೋಗಿದ್ದಾರೆ. ಚಿತ್ರದಲ್ಲಿ ಹೆಚ್ಚು ಪಾತ್ರಗಳಿಲ್ಲ. ಕೆಲವೇ ಪಾತ್ರಗಳ ಸುತ್ತಾ ಕತೆ ಸುತ್ತುತ್ತದೆ. ನಿರ್ದೇಶಕರಾಗಿ ಮಾತ್ರವಲ್ಲದೇ ರಾಜ್. ಬಿ ಶೆಟ್ಟಿ ನಟನಾಗಿಯೂ ಗಮನ ಸೆಳೆಯುತ್ತಾ ಬರುತ್ತಿದ್ದಾರೆ. ತಮಗಾಗಿಯೇ ಬರೆದುಕೊಂಡ ಪಾತ್ರದಲ್ಲಿ ರಾಜ್ ಮತ್ತೊಮ್ಮೆ ಗೆಲ್ಲುವ ಸುಳಿವು ನೀಡಿದ್ದಾರೆ. ಟ್ರೈಲರ್ ನೋಡಿದವರು ಮತ್ತೆ ಮತ್ತೆ ನೋಡುತ್ತಿದ್ದಾರೆ. ಮಿಥುನ್ ಮುಕುಂದನ್ ಹಿನ್ನೆಲೆ ಸಂಗೀತ ಟ್ರೈಲರ್‌ಗೆ ಹೆಚ್ಚಿನ ಬಲ ತುಂಬಿದೆ
ಇದನ್ನೂ ಒದಿ ವಿಶ್ವಕಪ್ ಕ್ರಿಕೆಟ್: ಫೈನಲ್ ನಲ್ಲಿ ಭಾರತ ಗೆದ್ದರೆ ಬೀಚ್ ನಲ್ಲಿ ಬೆತ್ತಲೆಯಾಗಿ ಓಡುವೆ ಎಂದ ತೆಲುಗು ನಟಿ
‘ಸ್ವಾತಿ ಮುತ್ತಿನ ಮಳೆಹನಿಯೇ’ ಟ್ರೈಲರ್ ನೋಡಿದ ಕೆಲವರು ಪ್ರೇರಣಾ ಪಾತ್ರದಲ್ಲಿ ರಮ್ಯಾ ನಟಿಸಬೇಕಿತ್ತು, ಅವರಿಗಾಗಿಯೇ ಬರೆದಂತಿದೆ ಪಾತ್ರ, ಆಕೆ ನಟಿಸಿದ್ದರೆ ನಿಜಕ್ಕೂ ಒಳ್ಳೆ ಕಂಬ್ಯಾಕ್ ಆಗುತ್ತಿತ್ತು, ಈ ಸಿನಿಮಾದಿಂದ ಆಕೆ ಹೊರ ಬರಬಾರದಿತ್ತು ಎನ್ನುತ್ತಿದ್ದಾರೆ. ಇತ್ತೀಚೆಗೆ ದೀಪಾವಳಿ ಸಂಭ್ರಮದಲ್ಲಿ ರಮ್ಯಾ ‘ಸ್ವಾತಿ ಮುತ್ತಿನ ಮಳೆಹನಿಯೇ’ ಚಿತ್ರದಿಂದ ತಾವು ಹೊರ ಬರಲು ಕಾರಣ ಏನು ಎಂದು ಹೇಳಿದ್ದರು.
“ನಿಮ್ಮಲ್ಲಿ ಹಲವರಿಗೆ ಈ ಪ್ರಶ್ನೆ ಇದೆ ಎಂದು ನನಗೆ ತಿಳಿದಿದೆ. ನಾನು ಚಿತ್ರದಿಂದ ಹೊರಗುಳಿದಿದ್ದು ಏಕೆಂದರೆ ಅದು ಓಟಿಟಿಯಲ್ಲಿ ಬಿಡುಗಡೆಯಾಗುವುದು ಎಂದು ನಿರ್ಧರಿಸಿದ್ದೇವು. ನನ್ನ ಕಮ್ ಬ್ಯಾಕ್ ಚಿತ್ರವು ಚಿತ್ರಮಂದಿರದಲ್ಲಿಯೇ ಬಿಡುಗಡೆಯಾಗಬೇಕು ಎಂದು ನಾನು ಬಯಸಿದ್ದೇ. ಚಿತ್ರವನ್ನು ಖರೀದಿಸುವುದಾಗಿ ಭರವಸೆ ನೀಡಿದ್ದ ಓಟಿಟಿ ವೇದಿಕೆ ನಂತರ ಹಿಂದೆಸರಿಯಿತು. ಕನ್ನಡದಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ,. ಆದರೆ, ನಿಮ್ಮನ್ನು ಸೇರಲು ಹಲವು ಮಾರ್ಗಗಳನ್ನು ನಾವು ಹುಡುಕುತ್ತೇವೆ” ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.