ಸಂಗೀತ ನಿರ್ದೇಶಕ ಮತ್ತು ಗಾಯಕ ರಘು ದೀಕ್ಷಿತ್ ಹಾಗೂ ಪ್ರತಿಭಾವಂತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಅವರು ಜೀವನ ಸಂಗಾತಿಗಳಾಗಿದ್ದಾರೆ. ಆಪ್ತರು, ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಸಡಗರದ ವಾತಾವರಣದಲ್ಲಿ ಈ ಮದುವೆ ನೆರವೇರಿದೆ.

ಮದುವೆಯ ಸುಂದರ ಕ್ಷಣಗಳ ಫೋಟೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ನವಜೋಡಿಗೆ ಹಾರೈಸುತ್ತಿದ್ದಾರೆ. “ಮಧುರ ಸ್ವರಗಳ ಈ ಸಂಗಮ ಸದಾ ಸುಖ-ಸಂತೋಷದಿಂದ ಇರಲಿ” ಎಂದು ಹಲವರು ಶುಭಾಶಯ ಕೋರಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಇಬ್ಬರೂ ಗುರುತಿಸಿಕೊಂಡಿರುವ ಪ್ರತಿಭಾವಂತರು. ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹಾಗೂ ಕೊಳಲು ವಾದಕಿಯಾಗಿಯೂ ಖ್ಯಾತಿ ಪಡೆದಿರುವ ವಾರಿಜಶ್ರೀ — ಹಲವು ಸಂಗೀತ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಸ್ನೇಹ ಬೆಳೆದು ಪ್ರೀತಿಯಾಗಿ ಮಾರ್ಪಟ್ಟಿತು. ಕುಟುಂಬದವರ ಒಪ್ಪಿಗೆಯೊಂದಿಗೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಯಮುನಾ ಶ್ರೀನಿಧಿ, ಅಯ್ಯೋ ಶ್ರದ್ಧಾ ಸೇರಿದಂತೆ ಹಲವಾರು ಸ್ನೇಹಿತರು ಈ ಶುಭ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ಯಮುನಾ ಶ್ರೀನಿಧಿ ಅವರು ಮದುವೆಯ ಫೋಟೋಗಳನ್ನು ಹಂಚಿಕೊಂಡು ಹೃತ್ಪೂರ್ವಕವಾಗಿ ಹಾರೈಸುತ್ತಾ, “ಕನ್ನಡದ ಹೆಮ್ಮೆಯ ಸಂಗೀತಗಾರ ರಘು ದೀಕ್ಷಿತ್ ಮತ್ತು ಪ್ರತಿಭಾವಂತ ವಾರಿಜಾ ವೇಣುಗೋಪಾಲ್ ಅವರ ಜೀವನ ಸಂಗಮವು ಪ್ರೀತಿ, ಸಂತೋಷ ಮತ್ತು ಸಂಗೀತದ ರಾಗಗಳಿಂದ ತುಂಬಿರಲಿ” ಎಂದು ಬರೆದಿದ್ದಾರೆ.
50 ವರ್ಷದ ರಘು ದೀಕ್ಷಿತ್ ಅವರಿಗೆ ಇದು ಎರಡನೇ ಮದುವೆ. ಮೊದಲ ಪತ್ನಿ ಡ್ಯಾನ್ಸರ್ ಮಯೂರಿ ಉಪಾಧ್ಯ ಅವರೊಂದಿಗೆ 2005ರಲ್ಲಿ ವಿವಾಹವಾದ ಅವರು 2019ರಲ್ಲಿ ವಿಚ್ಛೇದನ ಪಡೆದಿದ್ದರು. ನಂತರ ಮತ್ತೊಂದು ಮದುವೆ ಬಗ್ಗೆ ಯೋಚನೆ ಇರಲಿಲ್ಲದರೂ, ವಾರಿಜಶ್ರೀ ಜೊತೆಗಿನ ಸ್ನೇಹದ ಒಡನಾಟ ಹೊಸ ಬದುಕಿನ ನಿರ್ಧಾರಕ್ಕೆ ಕಾರಣವಾಯಿತು. 34 ವರ್ಷದ ವಾರಿಜಶ್ರೀ ಈಗ ರಘು ದೀಕ್ಷಿತ್ ಅವರ ಜೀವನದ ಹೊಸ ಪ್ರೇರಣೆ.
ಸಂಗೀತದ ಮೂಲಕ ಲಕ್ಷಾಂತರ ಹೃದಯಗಳನ್ನು ಗೆದ್ದ ಈ ದಂಪತಿಗೆ, ಅಭಿಮಾನಿಗಳು ‘ನಿಮ್ಮ ಜೀವನವೂ ಸಂಗೀತದಂತೆಯೇ ಮಧುರವಾಗಿರಲಿ’ ಎಂದು ಹಾರೈಸುತ್ತಿದ್ದಾರೆ.
