ಪ್ರಶಾಂತ್ ನೀಲ್ ಕೆ.ಜಿ.ಎಫ್ ಚಿತ್ರದ ಮೂಲಕ ಭಾರತದ ಸ್ಟಾರ್ ಡೈರೆಕ್ಟರ್ ಲಿಸ್ಟ್‌ಗೆ ಸೇರಿದರು.ಕನ್ನಡ ಚಿತ್ರರಂಗದಿಂದ ಕಣ್ಮರೆಯಾಗಿರುವ ಪ್ರಶಾಂತ್ ನೀಲ್ ತೆಲುಗು ಚಿತ್ರರಂಗದಲ್ಲಿಯೇ ಬಿಡಾರ ಹೂಡಿದ್ದಾರೆ. ಅಲ್ಲಿನ ಸ್ಟಾರ್‌ಗಳಿಗೆ ಚಿತ್ರವನ್ನು ಮಾಡುತ್ತಿದ್ದಾರೆ.ಆ ಪೈಕಿ ಜ್ಯೂನಿಯರ್ ಎನ್.ಟಿ.ಆರ್ ಚಿತ್ರ ಕೂಡ ಒಂದು. ಆದರೆ ಈ ಚಿತ್ರ ಘೋಷಣೆಯಷ್ಟೇ ಆಗಿದೆ. ನಾಲ್ಕು ವರ್ಷವಾದರೂ ಕೂಡ ಚಿತ್ರದ ಚಿತ್ರೀಕರಣ ಶುರುವಾಗಿಲ್ಲ. ಸಹಜವಾಗಿ ಇದರಿಂದ ಜ್ಯೂ.ಎನ್.ಟಿ.ಆರ್ ಅಭಿಮಾನಿಗಳು ಬೇಸರಗೊಂಡಿದ್ದು ಇದೆ. ಕಾಲ ಕಾಲಕ್ಕೆ ತಮ್ಮ ಅಸಮಾಧಾನ ಹೊರ ಹಾಕಿದ್ದು ಇದೆ. ಆದರೆ ಈಗ ಜ್ಯೂ.ಎನ್.ಟಿ.ಆರ್ ಅಭಿಮಾನಿಗಳಿಗೆ ಪ್ರಶಾಂತ್ ನೀಲ್ ಖುಷಿಯ ಸಮಾಚಾರ ಕೊಡಲು ಸಿದ್ಧರಾಗಿದ್ಧಾರೆ. ಹಾಗೂ ಹೀಗೂ ದೊಡ್ಡ ಮನಸು ಮಾಡಿ ಜ್ಯೂ.ಎನ್.ಟಿ.ಆರ್ ಜೊತೆಗಿನ ತಮ್ಮ ಚಿತ್ರದ ಚಿತ್ರೀಕರಣವನ್ನು ಶುರು ಮಾಡುತ್ತಿದ್ದಾರೆ. ಹೀಗೊಂದು ಸುದ್ದಿ ಸದ್ಯ ಹೈದರಾಬಾದ್‌ನಲ್ಲಿ ಕೇಳಿ ಬರುತ್ತಿದೆ.
ಆ ಪ್ರಕಾರ ಮುಂದಿನ ವಾರದಿಂದ ಅಂದರೆ ಫೆಬ್ರವರಿ 17ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ವಿಕಾರಾಬಾದ್ ಕಾಡಿನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದ್ದು ಸದ್ಯ ಜ್ಯೂ.ಎನ್.ಟಿ.ಆರ್ ಅನುಪಸ್ಥಿತಿಯಲ್ಲಿ ಚಿತ್ರದ ಚಿತ್ರೀಕರಣವನ್ನು ಪ್ರಶಾಂತ್ ನೀಲ್ ಶುರು ಮಾಡಲಿದ್ದಾರೆ. ಹೃತಿಕ್ ರೋಷನ್ ಅವರ ಜೊತೆ ಸದ್ಯ ವಾರ್ 2 ಚಿತ್ರದ ಚಿತ್ರೀಕರಣದಲ್ಲಿರುವ ಜ್ಯೂ.ಎನ್.ಟಿ.ಆರ್ ವಾರದ ನಂತರ ಬಂದು ಪ್ರಶಾಂತ್ ನೀಲ್ ಮತ್ತು ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ.
ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್.ಟಿ.ಆರ್ ಸಂಗಮಕ್ಕೆ ಸಾಕ್ಷಿಯಾಗಲಿರುವ ಚಿತ್ರದಲ್ಲಿ ಕೂಡ ರುಕ್ಮಿಣಿ ವಸಂತ್ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚುವುದು ನೂರಕ್ಕೆ ನೂರು ಸತ್ಯ ಎನ್ನುವ ಸುದ್ದಿ ಕೂಡ ಇದೆ. ಇನ್ನು ಪ್ರಶಾಂತ್ ನೀಲ್ ಸಿನಿಮಾ ಅಂದರೆ ಆ ಸಿನಿಮಾ ಎರಡು ಭಾಗಗಳಲ್ಲಿ ಬರಲೇಬೇಕು ಎಂಬ ಅಲಿಖಿತ ನಿಯಮ ಇದೆ. ಈ ಚಿತ್ರಕ್ಕೂ ಕೂಡ ಈ ನಿಯಮ ಅನ್ವಯವಾಗುವ ಸಾಧ್ಯತೆ ಇದೆ. ಜ್ಯೂ.ಎನ್.ಟಿ.ಆರ್ ಅಭಿನಯದ ಈ ಚಿತ್ರ ಕೂಡ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಂಡವಾಳ ಹೂಡಲಿದೆ. ಮುಂದಿನ ವರ್ಷ ಸಂಕ್ರಾಂತಿಗೆ ಚಿತ್ರ ತೆರೆಗೆ ಬರಲಿದೆ ಎನ್ನುವ ಸುದ್ದಿ ಕೂಡ ಹಬ್ಬಿದೆ.