ವೃತ್ತಿಯಿಂದ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ನಿರ್ದೇಶಕ ಚಿಕ್ಕಣ್ಣ ರಾಮಕೃಷ್ಣಯ್ಯ ‘ಎಲೆಕ್ಟಾçನಿಕ್ ಸಿಟಿ’ ಚಿತ್ರಕತೆ ಸಿದ್ದಪಡಿಸಲು ಒಂದೂವರೆ ವರ್ಷ ತೆಗೆದುಕೊಂಡಿದ್ದಾರೆ. ಹೀಗೇ ತಾಳ್ಮೆಯಿಂದ ಚಿತ್ರಕತೆ ಸಿದ್ದಪಡಿಸಿ, ಚಿತ್ರ ನಿರ್ದೇಶಿಸಿದ್ದರಿಂದ ‘ಎಲೆಕ್ಟಾçನಿಕ್ ಸಿಟಿ’ ಉತ್ತಮವಾಗಿ ಮೂಡಿ, ದೇಶ-ವಿದೇಶಗಳಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿ ೩೦ ಪ್ರಶಸ್ತಿಗಳನ್ನು ಪಡೆದಿರುವುದು ನಿರ್ದೇಶಕರ ಶ್ರಮಕ್ಕೆ ಸಂದ ಗೌರವವಾಗಿದೆ. ತ್ರಿಕೋನ ಪ್ರೇಮಕತೆ ಹೊಂದಿರುವ ‘ಎಲೆಕ್ಟಾçನಿಕ್ ಸಿಟಿ’ ಚಿತ್ರದಲ್ಲಿ ಎಲೆಕ್ಟಾçನಿಕ್ ಯಂತ್ರಗಳ ಮಧ್ಯೆ ಕೆಲಸ ಮಾಡುವ ಟೆಕ್ಕಿಗಳ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ಅವರ ವೈಯಕ್ತಿಕ ಸಂಸಾರದ ಮೇಲೆ ಬೀರುವ ದುಷ್ಪರಿಣಾಮಗಳನ್ನು ನಿರ್ದೇಶಕ ಆರ್. ಚಿಕ್ಕಣ್ಣ ಬಹಳ ನವಿರಾಗಿ, ಅಷ್ಟೇ ಅರ್ಥಗರ್ಭಿತವಾಗಿ ತೆರೆಮೇಲೆ ತಂದಿದ್ದಾರೆ.
ತಾಂತ್ರಿಕ ಕ್ಷೇತ್ರಗಳಲ್ಲಿ ದುಡಿಯುವವರು ಒತ್ತಡ ಜೀವನದಿಂದ ಹೊರಬಂದು, ಆರೋಗ್ಯಕರ ನೆಮ್ಮದಿ ಬದುಕನ್ನು ಕಾಣುವುದು ಹೇಗೆಂಬ ಮಾರ್ಗದರ್ಶನ ಸಹ ಚಿತ್ರ ಮಾಡುತ್ತದೆಯಂತೆ. ಯಾವುದೇ ಚಿತ್ರ ಪ್ರೇಕ್ಷಕರ ಮನಸ್ಸಿಗೆ ನಾಟುವಂತೆ ನಿರ್ಮಿಸುವುದು ನಿರ್ದೇಶಕರ ಕೌಶಲ್ಯ. ಇದು ಹೊಸ ನಿರ್ದೇಶಕರಾದ ಚಿಕ್ಕಣ್ಣನವರಿಗೆ ಮೊದಲ ಚಿತ್ರದಲ್ಲೇ ಸಿದ್ದಿಸಿದೆ. ಅವರಿಂದ ಮತ್ತಷ್ಟು ಉತ್ತಮ ಚಿತ್ರಗಳು ಮೂಡಿ ಬರುವ ಭರವಸೆ ಹುಟ್ಟಿಸಿದೆ.
೩೦ ಪ್ರಶಸ್ತಿ ಬಾಚಿದ ‘ಎಲೆಕ್ಟಾನಿಕ್ ಸಿಟಿ’ :
ನಿರ್ದೇಶಕ ಆರ್ ಚಿಕ್ಕಣ್ಣ ತಮ್ಮ ಸಹೋದ್ಯೋಗಿ ಟೆಕ್ಕಿ ಸ್ನೇಹಿತರಿಂದ ಹಣ ತೊಡಗಿಸಿ ‘ಬಜರಂಗಿ ಪ್ರೊಡಕ್ಷನ್’ನಲ್ಲಿ ನಿರ್ಮಾಣ ಮಾಡಿರುವ ‘ಎಲೆಕ್ಟಾçನಿಕ್ ಸಿಟಿ’ ಚಿತ್ರ ಬಿಡುಗಡೆಗೂ ಮುನ್ನವೇ ವಿವಿಧ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ೩೦ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಈವರೆಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಚಿಕ್ಕಣ್ಣ ರಾಮಕೃಷ್ಣಯ್ಯ ಮೊದಲ ಬಾರಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಚಿತ್ರ ವಿಮರ್ಶಕರಿಂದ ಮತ್ತು ಚಿತ್ರೋದ್ಯಮದಿಂದ ಉತ್ತಮ ಪ್ರಶಂಸೆ ಪಡೆದುಕೊಂಡಿದ್ದಲ್ಲದೆ, ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ.