ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಪುಕ್ಸಟ್ಟೆ ಪೈಸ’ ಸಿನಿಮಾ ಇದೇ ಏ. 19 ರಂದು ತೆರೆಗೆ ಬರುತ್ತಿದೆ. ಸಿನಿಮಾ ಪ್ರಚಾರದ ಭಾಗವಾಗಿ ಈಗಾಗಲೇ ‘ಪುಕ್ಸಟ್ಟೆ ಪೈಸ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂದಿದ್ದು, ಈ ವೇಳೆ ಸಿನಿಮಾದ ವಿಶೇಷತೆಗಳ ಬಗ್ಗೆ ಒಂದಷ್ಟು ಮಾಹಿತಿ ನೀಡಿತು.‘ಇಂಚರ ಪಿಕ್ಚರ್ಸ್’ ಬ್ಯಾನರಿನಲ್ಲಿ ಮಧುಸೂಧನ ಎ. ಎಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಿಸಿ, ನಿರ್ದೇಶಿಸಿರುವ ‘ಪುಕ್ಸಟ್ಟೆ ಪೈಸ’ ಸಿನಿಮಾದಲ್ಲಿ ಭರತ್ ಶೆಟ್ಟಿ, ಅಕ್ಷತಾ ಕುಕಿ, ಮಹೇಶ್ ಬಾಬು, ಸಯ್ಯದ್, ರಕ್ಷಿತಾ ಮಲ್ಲಿಕಾರ್ಜುನ್, ಉಮೇಶ್, ಗಜಾ, ಮಂಜೇಗೌಡ, ಥಾಮಸ್, ಸೂರ್ಯ, ಸಂತು ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನಷ್ಟು ಓದಿಗಾಗಿ:- Night Curfew Movie Review; ಲಾಕ್‌ಡೌನ್‌ನಲ್ಲಿ ಲಾಕಾದ ಬದುಕಿನ ರೋಚಕ ಕಥೆ
ಮೊದಲಿಗೆ ‘ಪುಕ್ಸಟ್ಟೆ ಪೈಸ’ ಸಿನಿಮಾದ ಬಗ್ಗೆ ಮಾತಿಗಿಳಿದ ನಿರ್ಮಾಪಕ ಕಂ ನಿರ್ದೇಶಕ ಮಧುಸೂಧನ ಎ. ಎಸ್., ‘ಇದೊಂದು ಕಾಮಿಡಿ, ಥ್ರಿಲ್ಲರ್ ಶೈಲಿಯ ಸಿನಿಮಾ. ಕೆಲ ವರ್ಷಗಳ ಹಿಂದೆ ನಡೆದ ಹಣದ ಹಗರಣ ಮತ್ತು ನಮ್ಮ ನಡುವೆಯೇ ಅಲ್ಲಲ್ಲಿ ನಡೆದಿರುವ ಒಂದಷ್ಟು ವಿಷಯಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ‘ಪುಕ್ಸಟ್ಟೆ ಪೈಸ’ ಸಿನಿಮಾದ ಟೈಟಲ್ಲೇ ಹೇಳುವಂತೆ ಪುಕ್ಸಟ್ಟೆ ಹಣದ ಮೇಲಿನ ಆಸೆಯಿಂದ ಅದರ ಹಿಂದೆ ಬಿದ್ದವರ ಒದ್ದಾಟ, ಪರದಾಟ ಹೇಗಿರುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಮನರಂಜನಾತ್ಮಕವಾಗಿ ಹೇಳಿದ್ದೇವೆ’ ಎಂದು ವಿವರಣೆ ನೀಡಿದರು. ‘ಸಿನಿಮಾದಲ್ಲಿ ಎಲ್ಲ ಥರದ ಆಡಿಯನ್ಸ್ ಗೂ ಬೇಕಾದ ಅಂಶಗಳಿವೆ. ಕಾಮಿಡಿ, ಥ್ರಿಲ್ಲರ್ ಜೊತೆಗೆ ಒಂದು ಒಳ್ಳೆಯ ಸಂದೇಶವಿದೆ. ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ’ ಎಂಬುದು ಚಿತ್ರತಂಡದ ಒಕ್ಕೊರಲ ಮಾತು.
ಇನ್ನಷ್ಟು ಓದಿಗಾಗಿ:- ʻರಿಪ್ಪನ್ ಸ್ವಾಮಿʼ ಆಗಿ ಬಂದ್ರು ವಿಜಯ ರಾಘವೇಂದ್ರ
ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಕಲಾವಿದರಾದ ಮಹೇಶ್ ಬಾಬು, ಸಯ್ಯದ್, ರಕ್ಷಿತಾ ಮಲ್ಲಿಕಾರ್ಜುನ್, ಗಜಾ, ಉಮೇಶ್, ಸಂಗೀತ ನಿರ್ದೇಶಕ ವಿಶ್ವಾಸ್ ಕೌಶಿಕ್ ಮತ್ತಿತರರು ಸಿನಿಮಾದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ‘ಪುಕ್ಸಟ್ಟೆ ಪೈಸ’ ಸಿನಿಮಾದ ಮೂರು ಹಾಡುಗಳಿಗೆ ವಿಶ್ವಾಸ್ ಕೌಶಿಕ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾಕ್ಕೆ ಮಯೂರ್ ಆರ್. ಶೆಟ್ಟಿ, ವೇಲ್ ಮುರುಗನ್ ಛಾಯಾಗ್ರಹಣ, ನಿಶಿತ್ ಪೂಜಾರಿ ಸಂಕಲನವಿದೆ. ಬೆಂಗಳೂರು, ಮಂಗಳೂರು, ಹಾಸನ, ಹೊಳೆನರಸೀಪುರ ಸುತ್ತಮುತ್ತ ‘ಪುಕ್ಸಟ್ಟೆ ಪೈಸ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.ಈಗಾಗಲೇ ಬಿಡುಗಡೆಯಾಗಿರುವ ‘ಪುಕ್ಸಟ್ಟೆ ಪೈಸ’ ಸಿನಿಮಾದ ಹಾಡುಗಳು ಮತ್ತು ಟ್ರೇಲರ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದೆ. ‘ಪುಕ್ಸಟ್ಟೆ ಪೈಸ’ ಸಿನಿಮಾ ಥಿಯೇಟರಿನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬುದು ಇದೇ ಏ. 19ಕ್ಕೆ ಗೊತ್ತಾಗಲಿದೆ.