Sandalwood Leading OnlineMedia

ಸೈಕಿಕ್ ಟೀಸರ್ ಗೆ ಸೈಕ್ ಆದ ಪ್ರೇಕ್ಷಕ

ಕ್ರೈಮ್ – ಸಸ್ಪೆನ್ಸ್ – ಥ್ರಿಲ್ಲರ್ ಸಿನಿಮಾ ಎಂದರೆ ಹೀಗೇ ಇರಬೇಕೆಂಬ ನಿಯಮವಿಲ್ಲ. ವಿಚಿತ್ರ ಶಬ್ದ, ನಡು ರಾತ್ರಿ, ಕಡು ಕತ್ತಲೆ… ಇಂಥ ಮಾಮೂಲಿ ಚೌಕಟ್ಟು ಮೀರಿಯೂ ಸಿನಿಮಾ ಮಾಡಬಹುದು ಎಂಬುದನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ ಯುವ ನಿರ್ದೇಶಕ ಪುಷ್ಕರ ಗಿರಿಗೌಡ. ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಸೈಕಿಕ್ ಸಿನಿಮಾದ ಕಿರುನೋಟ (ಟೀಸರ್) ಬಿಡುಗಡೆಯಾಗಿದೆ.

ಸರ್ದಾರ್ ಸತ್ಯ, ಹಂಸಾ ಪ್ರತಾಪ್, ರಮೇಶ್ ಭಟ್, ಅರವಿಂದ್ (ರಥಸಪ್ತಮಿ) ಪ್ರಮುಖ ಭೂಮಿಕೆಯಲ್ಲಿರುವ ಸೈಕಿಕ್ ಸಿನಿಮಾದ ಟೀಸರ್ ಎ2 ಮ್ಯೂಸಿಕ್ ಯೂ ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಚಿತ್ರದ ಟೀಸರ್ ನಲ್ಲಿ ಬಳಕೆಯಾಗಿರುವ ಎಂ.ಎಸ್.ತ್ಯಾಗರಾಜ್ ಅವರ ಹಿನ್ನೆಲೆ ಸಂಗೀತ, ಸಿನಿಟೆಕ್ ಸೂರಿ ಅವರ ಕ್ಯಾಮೆರಾ ಕೈಚಳಕ ಸೇರಿದಂತೆ ಇನ್ನಿತರ ತಾಂತ್ರಿಕ ವಿಭಾಗದ ಕುರಿತು ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

ಸುಮಾರು ಹತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಕಲನ ಕಾರ್ಯ ನಿರ್ವಹಿಸಿರುವ ಪುಷ್ಕರ ಗಿರಿಗೌಡ, ಸೈಕಿಕ್ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರ ಹೊಮ್ಮುತ್ತಿದ್ದಾರೆ.
ತಾರಾಗಣ, ತಾಂತ್ರಿಕತೆ ಹಾಗೂ ರಾಜಿಯಾಗದ ನಿರ್ಮಾಣ ಈ ಚಿತ್ರವು ತುಂಬಾ ನೀಟಾಗಿ ಮೂಡಿಬರಲು ಸಹಕಾರಿಯಾಗಿವೆ.
ನಿರ್ದೇಶಕ ಪುಷ್ಕರ ಹೇಳುವ ಪ್ರಕಾರ “ಕ್ರೈಮ್-ಥ್ರಿಲ್ಲರ್- ಇನ್ವೆಸ್ಟಿಗೇಶನ್ ಸಿನಿಮಾ ಎಂದರೆ ರಕ್ತ ಸಿಕ್ತ ದೃಶ್ಯಗಳನ್ನು ವೈಭವೀಕರಿಸುವುದು ಸಾಮಾನ್ಯ. ಆದರೆ ಸೈಕಿಕ್ ಸಿನಿಮಾದಲ್ಲಿ ಅದರ ಹೊರತಾಗಿ, ಕ್ರೌರ್ಯವನ್ನು ಪರೋಕ್ಷವಾಗಿ ಮನದಟ್ಟು ಮಾಡುವ ರೀತಿಯಲ್ಲಿ ದೃಶ್ಯ ಸಂಯೋಜನೆ ಮಾಡಿದ್ದೇವೆ. ಅದಕ್ಕೆ ಪೂರಕವಾಗಿ ಛಾಯಾಗ್ರಹಣ, ಹಿನ್ನೆಲೆ‌ ಸಂಗೀತ ಮತ್ತು ಶಬ್ದ ವಿನ್ಯಾಸ ಬೆಂಬಲ ನೀಡಿವೆ. ಈ ಸಿನಿಮಾದ ಹಲವಾರು ಅತಿ ಮುಖ್ಯ ಅಂಶಗಳನ್ನು ಇನ್ನೂ ಟೀಸರ್ ನಲ್ಲಿ ಬಿಟ್ಟುಕೊಟ್ಟಿಲ್ಲ. ಅವುಗಳನ್ನು ಸದ್ಯದಲ್ಲೇ ಮುಂದಿನ‌ ಟ್ರೇಲರ್ ಮತ್ತು ಇತರೇ ಕಂಟೆಂಟ್ಗಳಲ್ಲಿ ಪ್ರೇಕ್ಷಕರಿಗೆ ತಲುಪಿಸುತ್ತೇವೆ. ಒಂದಂತೂ ನಿಜ, ಸೈಕಿಕ್ ಸಿನಿಮಾದಲ್ಲಿನ ಹಲವಾರು ಅಂಶಗಳ‌ ಜೊತೆ ಕೊಲೆ, ಅಪರಾಧ, ತನಿಖೆ ಇದ್ದರೂ ಕೂಡ, ಇದು ಅವುಗಳನ್ನು ವಿಜೃಂಭಿಸುವ ಚಿತ್ರವಲ್ಲದೇ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ಕೊಡುವ ಚಿತ್ರವಾಗಿದೆ.”

ತುಂಬಾ ದಿನಗಳ ನಂತರ ಸರ್ದಾರ್ ಸತ್ಯ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಝಲಕ್ ಟೀಸರ್ ಮೂಲಕ ಅನಾವರಣಗೊಂಡಿದೆ.

ಕೈಲಾಸ್ ದೇವ್, ನಿಖಿತಾ ದೋರ್ತೋಡಿ, ರೇಷ್ಮಾ ಲಿಂಗರಾಜಪ್ಪ, ರೋಹಿತ್ ನಾಗೇಶ್, ಕೇಶವ್ ಮೊದಲಾದವರು ಸೈಕಿಕ್ ಚಿತ್ರದ ತಾರಬಳಗದಲ್ಲಿದ್ದಾರೆ.

ಸಿಲ್ಕ್ ಸಿನಿಮಾ ಅರ್ಪಿಸುವ ಸೈಕಿಕ್ ಸಿನಿಮಾಕ್ಕೆ ಚೇತನ್ ಮಂಜುನಾಥ್ ನಿರ್ಮಾಪಕರು. ವೈ.ಎಸ್.ಶ್ರೀಧರ್ ಸಂಕಲನ, ಪ್ರಸನ್ನ ಶೆಟ್ಟಿ ಸಂಭಾಷಣೆ ಹಾಗೂ ಗೋಪಿ ಜಾ ಸಾಹಸ ಸಂಯೋಜನೆ ಸೈಕಿಕ್ ಸಿನಿಮಾಕ್ಕಿದೆ.

Share this post:

Translate »