ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಮದುವೆ ಬಳಿಕ ಪತಿ ನಿಕ್ ಜೋನಸ್ ಜೊತೆ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಪಿಗ್ಗಿ ಹೈದರಾಬಾದ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ಚಿತ್ರದಲ್ಲಿ ನಟಿಸಲು ಆಕೆ ಭಾರತಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ. ಸದ್ಯ ಆಕೆ ಹೈದರಾಬಾದ್‌ನ ಚಿಲ್ಕೂರು ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ರಾಜಮೌಳಿ ನಿರ್ದೇಶನದ ಮುಂದಿನ ಚಿತ್ರದಲ್ಲಿ ತೆಲುಗು ಮಹೇಶ್ ಬಾಬು ಹೀರೊ ಆಗಿ ನಟಿಸುತ್ತಿದ್ದಾರೆ. ಹೊಸ ವರ್ಷದ ಆರಂಭದಲ್ಲೇ ಚಿತ್ರದ ಮುಹೂರ್ತ ನಡೆದಿದೆ ಎನ್ನಲಾಗಿತ್ತು. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇದೇ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದೇ ಕಾರಣಕ್ಕೆ ಆಕೆ ಹೈದರಾಬಾದ್‌ಗೆ ಬಂದಿಳಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.
‘RRR’ ಬಳಿಕ ಮಹೇಶ್ ನಟನೆಯ ಚಿತ್ರಕ್ಕೆ ಜಕ್ಕಣ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಚಿತ್ರ ಕಟ್ಟಿಕೊಡಲು ಮುಂದಾಗಿದ್ದಾರೆ. ಅದೇ ಕಾರಣಕ್ಕೆ ಗ್ಲೋಬಲ್ ಸ್ಟಾರ್ ಪ್ರಿಯಾಂಗ ಚೋಪ್ರಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಪೃಥ್ವಿರಾಜ್ ಸುಕುಮಾರನ್ ಸಹ ಈ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಇನ್ನು ಹೆಸರಿಡದ ಈ ಚಿತ್ರವನ್ನು SSMB29 ಎಂದು ಸದ್ಯಕ್ಕೆ ಕರೆಯಲಾಗುತ್ತಿದೆ. ಅಂದಹಾಗೆ ಇದು ಮಹೇಶ್ ಬಾಬು 29ನೇ ಸಿನಿಮಾ. ದೇಶ ವಿದೇಶಗಳಲ್ಲಿ ಚಿತ್ರದ ಕಥೆ ಸಾಗುತ್ತದೆ ಎನ್ನಲಾಗ್ತಿದೆ. ಅದಕ್ಕೆ ತಕ್ಕಂತೆ ಮೇಕಿಂಗ್, ಸ್ಟಾರ್‌ಕಾಸ್ಟ್ ಪ್ಲ್ಯಾನ್ ಮಾಡಲಾಗುತ್ತಿದೆ. ಎರಡು ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆಯಿದೆ. ಚಿತ್ರದ ಬಜೆಟ್ 1000 ಕೋಟಿ ರೂ. ದಾಟುವ ಅಂದಾಜಿದೆ.
“ಬಾಲಾಜಿ ದರ್ಶನದೊಂದಿಗೆ ಹೊಸ ಅಧ್ಯಾಯ ಶುರು. ಎಲ್ಲರೂ ನಮ್ಮ ಹೃದಯಗಳಲ್ಲಿ ಶಾಂತಿ ಮತ್ತು ಸಮೃದ್ಧಿ ಕಂಡುಕೊಳ್ಳೋಣ” ಎಂದು ಪ್ರಿಯಾಂಕ ಚೋಪ್ರಾ ಬರೆದುಕೊಂಡಿದ್ದಾರೆ.ನಿಮ್ಮ ಮುಂದಿನ ಚಿತ್ರಕ್ಕೆ ಶುಭವಾಗಲಿ ಎಂದು ಉಪಾಸನಾ ಕೂಡ ಕಾಮೆಂಟ್ ಮಾಡಿದ್ದಾರೆ. SSMB29 ಚಿತ್ರದಲ್ಲಿ ಹಾಲಿವುಡ್ ಕಲಾವಿದರು, ತಂತ್ರಜ್ಞರು ನಟಿಸುತ್ತಿದ್ದಾರೆ. ಪ್ರಿಯಾಂಕ ಚೋಪ್ರಾ ಇತ್ತ ಬಾಲಿವುಡ್, ಅತ್ತ ಹಾಲಿವುಡ್‌ಗೂ ಪರಿಚಿತ ಮುಖ. ಹಾಗಾಗಿ ಆಕೆಯನ್ನು ನಾಯಕಿ ಪಾತ್ರಕ್ಕೆ ಜಕ್ಕಣ್ಣ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗುವ ಸಾಧ್ಯತೆಯಿದೆ. ಅಂದಹಾಗೆ ಇತ್ತೀಚೆಗೆ ಆಕೆ ಹೆಚ್ಚು ಇಂಗ್ಲೀಷ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.