ಪ್ರಿಯಾಂಕಾ ಚೋಪ್ರಾ, ಬಾಲವುಡ್ ಅನ್ನು ತೊರೆದು ವರ್ಷಗಳೇ ಆಗಿವೆ. 2016 ರಲ್ಲಿ ಬಿಡುಗಡೆ ಆದ ‘ಜೈ ಗಂಗಾಜಲ್’ ಸಿನಿಮಾದ ಬಳಿಕ ‘ಬಾಲಿವುಡ್’ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿಲ್ಲ. ಅದಾದ ಬಳಿಕ ಎರಡು ಭಾರತೀಯ ಸಿನಿಮಾಗಳಲ್ಲಿ ನಟಿಸಿದ್ದಾರಾದರೂ ಅವು ಸಂಪೂರ್ಣವಾಗಿ ಹಿಂದಿ ಅಥವಾ ಬಾಲಿವುಡ್ ಸಿನಿಮಾಗಳಲ್ಲ. ಇದೀಗ ಹಲವು ವರ್ಷಗಳ ಬಳಿಕ ಪ್ರಿಯಾಂಕಾ ಚೋಪ್ರಾ ಭಾರತೀಯ ಸಿನಿಮಾಕ್ಕೆ ಮರಳಿದ್ದಾರೆ. ಆದರೆ ಅದೂ ಸಹ ಬಾಲಿವಡ್ ಸಿನಿಮಾ ಅಲ್ಲ. ವಿಶೇಷವೆಂದರೆ ನಟಿಸುತ್ತಿರುವ ಹೊಸ ಸಿನಿಮಾ ಮೂಲಕ ಪ್ರಿಯಾಂಕಾ ಚೋಪ್ರಾ, ಭಾರತದ ಅತ್ಯಂತ ದುಬಾರಿ ನಟಿ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ. ಇದಕ್ಕೆಲ್ಲ ರಾಜಮೌಳಿ ಕಾರಣ.
ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಮುಹೂರ್ತ ಕೆಲ ವಾರಗಳ ಹಿಂದಷ್ಟೆ ನಡೆದಿದ್ದು, ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಈ ಸಿನಿಮಾ ಪ್ರಾಜೆಕ್ಟ್ ಕನಿಷ್ಟ ಎರಡು ವರ್ಷವಾದರೂ ನಡೆಯಲಿದ್ದು, ಪ್ರಿಯಾಂಕಾ ಹಾಗೂ ಮಹೇಶ್ ಬಾಬು ಎರಡು ವರ್ಷ ಸಮಯವನ್ನು ಈ ಸಿನಿಮಾಕ್ಕಾಗಿ ಮೀಸಲಿಟ್ಟಿದ್ದಾರೆ.
ಈ ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ ಚೋಪ್ರಾ ಭಾರಿ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಈ ಸಿನಿಮಾಕ್ಕಾಗಿ ಪ್ರಿಯಾಂಕಾ ಚೋಪ್ರಾಗೆ ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆಯಂತೆ. ಭಾರತದ ಇನ್ಯಾವುದೇ ನಟಿ ಒಂದು ಸಿನಿಮಾಕ್ಕಾಗಿ ಇಷ್ಟು ದೊಡ್ಡ ಸಂಭಾವನೆಯನ್ನು ಪಡೆದಿದ್ದಿಲ್ಲ. ಇದೇ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ, ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ನಟಿ ಎನಿಸಿಕೊಂಡಿದ್ದಾರೆ.