ಪ್ರಭಾಸ್ ಇನ್‌ಸ್ಟಾಗ್ರಾಮ್ ಖಾತೆ ಕೂಡ ಹೊಂದಿದ್ದಾರೆ. ಆಗೊಮ್ಮೆ ಈಗೊಮ್ಮೆ ಅದರಲ್ಲಿ ಏನಾದರೂ ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ ಆ ರೀತಿ ಪೋಸ್ಟ್ ಮಾಡುವುದು ಪ್ರಭಾಸ್ ಅಲ್ಲವಂತೆ. ಈ ವಿಚಾರವನ್ನು ಮಲಯಾಳಂ ನಟ, ನಿರ್ದೇಶಕ ಪೃಥ್ವಿರಾಜ್ ಬಹಿರಂಗಪಡಿಸಿದ್ದಾರೆ. ಪ್ರಭಾಸ್ ಹಾಗೂ ಪೃಥ್ವಿರಾಜ್ ‘ಸಲಾರ್’ ಚಿತ್ರದಲ್ಲಿ ಸ್ನೇಹಿತರಾಗಿ ಒಟ್ಟಿಗೆ ನಟಿಸಿದ್ದರು.
ವರ್ಷದ ಹಿಂದೆ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಸಖತ್ ಸದ್ದು ಮಾಡಿತ್ತು. ಬಾಕ್ಸಾಫೀಸ್ ಶೇಕ್ ಮಾಡಿ ದಾಖಲೆ ಬರೆದಿತ್ತು. ಕನ್ನಡದ ‘ಉಗ್ರಂ’ ಕಥೆಯನ್ನು ಬಹಳ ದೊಡ್ಡದಾಗಿ ಹೇಳಿ ನೀಲ್ ಗೆದ್ದಿದ್ದರು. ಇನ್ನು ಅದೇ ಕಥೆಯನ್ನು ಎರಡು ಭಾಗಗಳಾಗಿ ಹೇಳುತ್ತಿದ್ದ ಸದ್ಯ ‘ಸಲಾರ್’ ಮೊದಲ ಭಾಗ ಮಾತ್ರ ಬಂದಿದೆ. ಎರಡನೇ ಭಾಗ ಇನ್ನಷ್ಟೇ ಬರಬೇಕಿದೆ.
‘ಸಲಾರ್’ ಸೀಕ್ವೆಲ್‌ನಲ್ಲಿ ಪ್ರಭಾಸ್ ಹಾಗೂ ಪೃಥ್ವಿರಾಜ್ ಮತ್ತೆ ನಟಿಸಬೇಕಿದೆ. ಮುಂದಿನ ವರ್ಷ ಸಿನಿಮಾ ಶುರುವಾಗುವ ನಿರೀಕ್ಷೆಯಿದೆ. ಪೃಥ್ವಿರಾಜ್ ಸುಕುಮಾರ್ ನಿರ್ದೇಶಿಸಿ ನಟಿಸುತ್ತಿರುವ ‘ಲೂಸಿಫರ್- 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೋಹನ್ ಲಾಲ್ ಹೀರೊ ಆಗಿ ಅಬ್ಬರಿಸಿರುವ ಪೊಲಿಟಿಕಲ್ ಥ್ರಿಲ್ಲರ್ ಮಾರ್ಚ್ ಕೊನೆ ವಾರ ತೆರೆಗೆ ಬರಲಿದೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿದೆ.
‘ಲೂಸಿಫರ್- 2’ ಪ್ರಚಾರದ ವೇಳೆ ಪೃಥ್ವಿರಾಜ್ ಸಂದರ್ಶನಗಳಲ್ಲಿ ಭಾಗಿಯಾಗಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಪ್ರಭಾಸ್ ಬಗ್ಗೆ ಪೃಥ್ವಿರಾಜ್ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. “ಪ್ರಭಾಸ್ ಅಷ್ಟು ದೊಡ್ಡ ಹೀರೊ ಆಗಿದ್ದರೂ ಬಹಳ ಸಿಂಪಲ್ ಆಗಿ ಇರ್ತಾರೆ. ಸ್ಟಾರ್‌ಡಮ್ ಬಗ್ಗೆ ಯೋಚಿಸುವುದಿಲ್ಲ, ಸೋಶಿಯಲ್ ಮೀಡಿಯಾ ಅಂದರೆ ಆಸಕ್ತಿ ಇಲ್ಲ. ಇನ್ನು ಪ್ರಭಾಸ್ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕುವುದು ಅವರಲ್ಲ. ಅದನ್ನು ಹೇಳಿ ನಿಮಗೆ ನಿರಾಸೆ ಮೂಡಿಸಿದ್ದಕ್ಕೆ ಕ್ಷಮಿಸಿ” ಎಂದು ಪೃಥ್ವಿರಾಜ್ ತಿಳಿಸಿದ್ದಾರೆ. ಮಾತು ಮುಂದುವರೆಸಿರುವ ಪೃಥ್ವಿರಾಜ್ “ಆತನಿಗೆ ಸಣ್ಣ ಸಣ್ಣ ಖುಷಿಯ ವಿಚಾರಗಳು ಅಂದರೆ ಇಷ್ಟ. ಬಿಡುವಿನ ವೇಳೆ ಫಾರ್ಮ್‌ಹೌಸ್‌ನಲ್ಲಿ ಸಂತೋಷವಾಗಿರುತ್ತಾನೆ. ಮೊಬೈಲ್ ನೆಟ್‌ವರ್ಕ್ ಸಿಗದ ಜಾಗಕ್ಕೆ ಹೋಗೋಣ ಎನ್ನುತ್ತಾನೆ. ಪ್ರಭಾಸ್ ನೋಡಿದರೆ ಕೆಲವೊಮ್ಮೆ ನನಗೆ ಅಚ್ಚರಿ ಆಗುತ್ತದೆ” ಎಂದು ಮಲಯಾಳಂ ನಟ ಹೇಳಿದ್ದಾರೆ. ಇದನ್ನು ಕೇಳಿ ಪ್ರಭಾಸ್ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.