ಪ್ರಶಾಂತ್ ನೀಲ್ ಹಾಗೂ ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗ ಕಂಡ ಖ್ಯಾತ ನಿರ್ದೇಶಕ ಹಾಗೂ ನಟ. ಈ ಇಬ್ಬರು ಕನ್ನಡ ಚಿತ್ರರಂಗದ ಕಲಾವಿದರಾಗಿ ಮಾತ್ರವಲ್ಲದೇ ಸಂಬಂಧಿಕರೂ ಸಹ ಆಗಿದ್ದರು. ಹೌದು, ಶ್ರೀಮುರಳಿ ಅವರ ಪತ್ನಿಯ ಸಹೋದರನಾಗಿರುವ ಪ್ರಶಾಂತ್ ನೀಲ್ ಆ ಕಾರಣದಿಂದಾಗಿ ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೂ ಹತ್ತಿರದವರಾಗಿದ್ದರು. ಪ್ರಶಾಂತ್ ನೀಲ್ ಉಗ್ರಂ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಬಳಿಕ ಕೆಜಿಎಫ್ ಚಿತ್ರ ಸರಣಿ ಮೂಲಕ ಖ್ಯಾತಿಯನ್ನು ಗಳಿಸಿದ್ದರೆ, ಪುನೀತ್ ರಾಜ್‌ಕುಮಾರ್ ಆರು ತಿಂಗಳ ಮಗುವಾಗಿದ್ದಾಗಲೇ ಬೆಳ್ಳಿತೆರೆ ಪ್ರವೇಶಿಸಿದ್ರು.
ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ’; 50 ದಿನಗಳ ಅಂತರದಲ್ಲಿ ಎರಡೂ ಪಾರ್ಟ್ ರಿಲೀಸ್!
ಇನ್ನು ಪ್ರಶಾಂತ್ ನೀಲ್ ಉಗ್ರಂ ಚಿತ್ರವನ್ನು ಮುಗಿಸಿದ ಬಳಿಕ ಪುನೀತ್ ರಾಜ್‌ಕುಮಾರ್‌ಗೆ ಕಥೆಯೊಂದನ್ನೂ ಸಹ ಬರೆದುಕೊಂಡಿದ್ದರು. ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದ ಈ ಚಿತ್ರಕ್ಕೆ ಆಹ್ವಾನ ಎಂದು ಶೀರ್ಷಿಕೆ ಇಡಬೇಕು ಎಂಬ ಯೋಜನೆ ಕೂಡ ನಡೆದಿತ್ತು. ಆದರೆ ಪುನೀತ್ ರಾಜ್‌ಕುಮಾರ್ ಬೇರೆ ಚಿತ್ರಗಳಲ್ಲಿ ಬ್ಯುಸಿ ಇದ್ದ ಕಾರಣ ಈ ಚಿತ್ರ ಸೆಟ್ಟೇರಲಿಲ್ಲ. ಹೀಗೆ ಪುನೀತ್ ರಾಜ್‌ಕುಮಾರ್ ಅವರನ್ನು ನಿರ್ದೇಶಿಸಲು ಮುಂದಾಗಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಮೊದಲು ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದು ಯಾವಾಗ, ಆಗ ಅವರ ಮೇಲೆ ತನ್ನಲ್ಲಿ ಉಂಟಾಗಿದ್ದ ಅಭಿಪ್ರಾಯಗಳೇನು ಎಂಬುದನ್ನು ಪ್ರಶಾಂತ್ ನೀಲ್ ಕಳೆದ ವರ್ಷ ನಡೆದ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದರು. ಹೌದು, ಕೆಜಿಎಫ್ ಚಾಪ್ಟರ್ 2 ಬಿಡುಗಡೆಯ ಸಂದರ್ಭದಲ್ಲಿ ನಡೆದ ಸಂದರ್ಶನದಲ್ಲಿ ಪ್ರಶಾಂತ್ ನೀಲ್ ಪುನೀತ್ ರಾಜ್‌ಕುಮಾರ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲೇ ಫಿಲ್ಮ್ ಸಿಟಿ!?; ಗರಿಗೆದರಿ ನಿಂತ ಚಂದನವನ
ಆಂಕರ್ ಅನುಶ್ರೀ ನಡೆಸಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಶಾಂತ್ ನೀಲ್ “ಭಾನುವಾರ ಕ್ರಿಕೆಟ್ ಆಡೋಕೆ ಅಂತ ಕ್ರೀಡಾಂಗಣಕ್ಕೆ ಬಂದೆವು. ಆದರೆ ಅಲ್ಲಿ ಚಿತ್ರವೊಂದರ ಚಿತ್ರೀಕರಣ ನಡೆಯುತ್ತಿತ್ತು. ಎಷ್ಟೋ ಬೈಕೊಂಡೆ ಅಂದ್ರೆ ನಾನು.. ಯಾರು ಗುರು ಶೂಟಿಂಗ್ ಅದು ಇದು ಅಂದ್ರೆ.. ಅಣ್ಣಾವ್ರ ಕೊನೆ ಮಗನ ಫಸ್ಟ್ ಸಿನಿಮಾ ಅಪ್ಪು ಶೂಟಿಂಗ್ ನಡಿತಿದೆ ಅಂತ ಗೊತ್ತಾಯಿತು. ಯಾಕೆ ಅವರು ಹೊರಗೆ ಹೋಗಿ ಶೂಟಿಂಗ್ ಮಾಡಬಾರದು, ಇದು ನಮ್ಮ ಜಾಗ ಎಂದು ಬೈದುಕೊಂಡಿದ್ದೆ. ರಕ್ಷಿತ ಇದ್ರು, ಅಪ್ಪು ಸರ್ ಇದ್ರು, ಅಲ್ಲೇ ನಿಂತುಕೊಂಡು ಶೂಟಿಂಗ್ ನೋಡ್ತಾ ಇದ್ವಿ. ಅಲ್ಲೇ ಒಂದು ದ್ವೇಷ ಶುರುವಾಗಿಹೋಯಿತು. ಅದು ನನ್ನ ತಲೆಯಲ್ಲಿ ಬಹಳ ದಿನಗಳ ಕಾಲ ಉಳಿದುಬಿಟ್ಟಿತು. ಅಪ್ಪು ರಿಲೀಸ್ ಆಗಿ ಐವತ್ತು ದಿನಗಳಾದ್ರೂ ನಾನು ಆ ಚಿತ್ರ ನೋಡಿರಲಿಲ್ಲ. ಅವರು ಬಂದು ನಮ್ಮ ಕ್ರಿಕೆಟ್ ಹಾಳು ಮಾಡಿಬಿಟ್ಟಿದ್ರು ಎಂಬ ಕಾರಣದಿಂದಲೇ ಹೋಗಿರಲಿಲ್ಲ. ನಮ್ಮ ತಾಯಿಯ ಮನೆ ಶಿವಮೊಗ್ಗಕ್ಕೆ ಹೋಗಿದ್ವಿ. ಮದುವೆ ಇತ್ತು, ಮದುವೆ ಮುಗಿದು ಆರತಕ್ಷತೆಗೆ ಸಂಜೆವರೆಗೂ ಟೈಮ್ ಇತ್ತು. ಎಲ್ಲರೂ ಅಪ್ಪು ಚಿತ್ರಕ್ಕೆ ಹೋಗೋಣ ಅಂದಿದ್ರು. ನಾನು ಬರಲ್ಲ ಹೋಗಿ ಎಂದಿದ್ದೆ. ಆದ್ರೂ ಬಲವಂತವಾಗಿ ಕರೆದುಕೊಂಡು ಹೋದರು. ಆ ಸಮಯದಲ್ಲಿ ಅವರ ಫ್ಯಾನ್ ಆದ ನಾನು ನನ್ನ ಜೀವನಪೂರ್ತಿ ಫ್ಯಾನ್ ಆಗಿಬಿಟ್ಟೆ” ಎಂದು ಹೇಳಿಕೊಂಡಿದ್ದರು.