ಶ್ರೀ ಜಗನ್ನಾಥ ದಾಸರು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಚಿತ್ರತಂಡ ಈಗ “ಶ್ರೀ ಪ್ರಸನ್ನ ವೆಂಕಟ ದಾಸರು” ಎಂಬ ದಾಸಪರಂಪರೆ ಮತ್ತೊಬ್ಬ ದಾಸರ ಜೀವನ ಚರಿತ್ರೆ ಕುರಿತಾದ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.ಇತ್ತೀಚೆಗೆ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು “ಶ್ರೀ ಪ್ರಸನ್ನ ವೆಂಕಟ ದಾಸರು” ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿದರು. ಆನಂತರ ಚಿತ್ರತಂಡದ ಚಿತ್ರದ ಬಗ್ಗೆ ಮಾತನಾಡಿದರು.ಈ ಹಿಂದೆ ಶ್ರೀ ಜಗನ್ನಾಥ ದಾಸರು ಚಿತ್ರವನ್ನು ನಿರ್ಮಿಸಿದ್ದ ನಮ್ಮ ತಂಡ ಇದೀಗ ಮತ್ತೋರ್ವ ದಾಸ ಶ್ರೇಷ್ಠ ರಾದ ಶ್ರೀ ಪ್ರಸನ್ನ ವೆಂಕಟ ದಾಸರ ಜೀವನವನ್ನು ತೆರೆ ಮೇಲೆ ತರುತ್ತಿದ್ದೇವೆ. ಚಿತ್ರ ಬಿಡುಗಡೆಗೆ ಸಿದ್ದಾವಾಗಿದೆ. ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ. ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಶ್ರೀ ಸತ್ಯಾತ್ಮ ತೀರ್ಥರಿಗೆ ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತೇನೆ ಎಂದರು ನಿರ್ದೇಶಕ ಮತ್ತು ನಿರ್ಮಾಪಕ ಮಧುಸೂದನ್ ಹವಾಲ್ದಾರ್.
ಪ್ರಸನ್ನ ವೆಂಕಟ ದಾಸರ ಪಾತ್ರಧಾರಿ ಪ್ರಭಂಜನ್ ದೇಶಪಾಂಡೆ ಮಾತನಾಡಿ, ಪ್ರಸನ್ನ ವೆಂಕಟದಾಸರ ಪಾತ್ರವನ್ನು ನಿರ್ವಹಿಸಿದ್ದು ನಿಜಕ್ಕೂ ನನ್ನ ಪುಣ್ಯ. ದಾಸ ಪರಂಪರೆಯಲ್ಲಿ ಪುರಂದರ ದಾಸರು, ಕನಕ ದಾಸರು ಇವರುಗಳ ಕುರಿತು ಚಿತ್ರ ಆಗಿದೆ. ಆದರೆ ಇನ್ನೂ ಸಾಕಷ್ಟು ದಾಸ ಶ್ರೇಷ್ಠರು ಇದ್ದಾರೆ. ಅವರಲ್ಲಿ ಶ್ರೀ ಪ್ರಸನ್ನ ವೆಂಕಟ ದಾಸರು ಒಬ್ಬರು. ದಾಸರಿಗೆ ಸ್ವತಃ ಶ್ರೀನಿವಾಸ ದೇವರೇ ಬಂದು ನಾಲಿಗೆ ಮೇಲೆ ಬೀಜಾಕ್ಷರಗಳನ್ನು ಬರೆದಿದ್ದರು. ಅವರ ಜೀವನದ ಪ್ರತಿಯೊಂದು ಅಮೂಲ್ಯ ಘಟನೆಯನ್ನು ಇಲ್ಲಿ ತೋರಿಸಿದ್ದೇವೆ. ಚಿತ್ರಕ್ಕಾಗಿ ನಾನು ದೈಹಿಕವಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಇದು ಕೇವಲ ಕಥೆಯಲ್ಲ ಒಂದು ಭಕ್ತಿ ಕಥೆ. ದಾಸರ ಸರಣಿ ಚಿತ್ರಗಳನ್ನು ಮಾಡುವುದು ನಮ್ಮ ಯೋಜನೆಯಾಗಿದ್ದು ಇದು ಎರಡನೇ ಚಿತ್ರ. ಮುಂದಿನ ದಿನಗಳಲ್ಲಿ ಮತ್ತೊಬ್ಬ ದಾಸರ ಚಿತ್ರವನ್ನು ತರಲಿದ್ದೇವೆ ಎಂದರು.
ಚಿತ್ರದಲ್ಲಿ ಒಟ್ಟು10 ಹಾಡುಗಳಿವೆ 8 ಸಂಪೂರ್ಣ ಗೀತೆ. ಇನ್ನೆರಡು ಬಿಟ್ಸ್. ಇಲ್ಲಿ ದಾಸರ ಪದ್ಯಗಳನ್ನೇ ಬಳಸಿದ್ದೇವೆ. ಮೂಲ ಸಂಗೀತ ರಚನೆಗೆ ಚ್ಯುತಿ ಬರದಂತೆ ಟ್ಯೂನ್ ಗಳನ್ನು ಬಳಸಿಕೊಂಡಿದ್ದೇವೆ. ಅನಂತ್ ಕುಲಕರ್ಣಿ, ರಾಯಚೂರು ಶೇಷಗಿರಿ ದಾಸ್ ಮುಂತಾದವರು ಚಿತ್ರದಲ್ಲಿ ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ವಿಜಯ ಕೃಷ್ಣ ಮಾಹಿತಿ ನೀಡಿದರು.
ರಾಯಚೂರು, ಹಂಪಿ, ಆನೆಗುಂದಿ, ಬಾಗಲಕೋಟೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ‘ಮಾತಾಂಬುಜಾ ಮೂವೀಸ್’ ಬ್ಯಾನರ್ ಅಡಿಯಲ್ಲಿ ಮಧುಸೂದನ್ ಹವಾಲ್ದಾರ್, ಸುಧಾ ಸ್ವಾಮಿ ರಾವ್ ದೇಸಾಯಿ ನಿರ್ಮಾಣ ಮಾಡಿದ್ದಾರೆ. ಮಧುಸೂದನ್ ಹವಾಲ್ದಾರ್ ನಿರ್ದೇಶನ, ನಾರಾಯಣ ಸಿ ಛಾಯಾಗ್ರಹಣ, ಆರ್ ಡಿ ರವಿ ಸಂಕಲನವಿದೆ.
ಪ್ರಭಂಜನ್ ದೇಶಪಾಂಡೆ, ವಿಜಯಾನಂದ ನಾಯ್ಕ, ವಿಷ್ಣು ಜೋಶಿ, ಲಕ್ಷ್ಮೀ , ಸ್ವಾಮಿ ರಾವ್ ದೇಸಾಯಿ, ಶರತ್ ಕುಮಾರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.